Home Advertisement
Home ಸಿನಿ ಮಿಲ್ಸ್ ಜೈಲಿನ ಕಿರುಕುಳದ ಅಳಲಿಗೆ ಸಿಗದ ಮನ್ನಣೆ: ನಟ ದರ್ಶನ್‌ಗೆ ಮತ್ತಷ್ಟು ದಿನ ಜೈಲೇ ಗತಿ!

ಜೈಲಿನ ಕಿರುಕುಳದ ಅಳಲಿಗೆ ಸಿಗದ ಮನ್ನಣೆ: ನಟ ದರ್ಶನ್‌ಗೆ ಮತ್ತಷ್ಟು ದಿನ ಜೈಲೇ ಗತಿ!

0
45

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದ್ದು, ನಟನಿಗೆ ಮತ್ತೊಮ್ಮೆ ತೀವ್ರ ನಿರಾಸೆಯಾಗಿದೆ. ಇಂದಾದರೂ ದರ್ಶನ್ ಜೈಲಿನಿಂದ ಹೊರಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ಪತ್ನಿ ವಿಜಯಲಕ್ಷ್ಮಿ, ಕುಟುಂಬಸ್ಥರು ಹಾಗೂ ಕೋಟ್ಯಂತರ ಅಭಿಮಾನಿಗಳ ಆಸೆ ಸದ್ಯಕ್ಕೆ ಕಮರಿಹೋಗಿದೆ. ಸುಪ್ರೀಂ ಕೋರ್ಟ್ ದರ್ಶನ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಜೈಲು ವಾಸ ಮುಂದುವರಿಯಲಿದೆ.

ವಿಚಾರಣೆ ವಿಳಂಬದ ವಾದ: ಮೇ 4ರಂದು ನಡೆದಿದ್ದ ಪ್ರಾಥಮಿಕ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಪ್ರಕರಣದ ತನಿಖೆ ಮತ್ತು ವಿಚಾರಣೆಯ ಪ್ರಗತಿ ವರದಿಯನ್ನು ಸಲ್ಲಿಸುವಂತೆ ಸೆಷನ್ಸ್ ಕೋರ್ಟ್‌ಗೆ ಸೂಚಿಸಿತ್ತು. ಇಂದು ಈ ವರದಿಯ ಪರಿಶೀಲನೆ ನಡೆಯಿತು. ದರ್ಶನ್ ಪರ ವಕೀಲರು ಪ್ರಮುಖವಾಗಿ ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆ ವಿಳಂಬವಾಗುತ್ತಿರುವುದನ್ನು ಪ್ರಸ್ತಾಪಿಸಿದ್ದರು. ಪ್ರಕರಣದಲ್ಲಿ ಒಟ್ಟು 273 ಸಾಕ್ಷಿಗಳಿದ್ದು, ಈವರೆಗೆ ಕೇವಲ 10 ಮಂದಿಯ ವಿಚಾರಣೆ ಮಾತ್ರ ಮುಗಿದಿದೆ. ಈಗಾಗಲೇ 8 ತಿಂಗಳು ಜೈಲಿನಲ್ಲಿ ಕಳೆದಿರುವುದರಿಂದ ಶೀಘ್ರ ಜಾಮೀನು ನೀಡಬೇಕು ಎಂದು ದರ್ಶನ್ ಮನವಿ ಮಾಡಿದ್ದರು.

ಜೈಲಿನಲ್ಲಿ ಕಿರುಕುಳದ ಆರೋಪ: ಜಾಮೀನು ಅರ್ಜಿಯಲ್ಲಿ ನಟ ದರ್ಶನ್ ಜೈಲಿನ ವ್ಯವಸ್ಥೆಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ತಮಗೆ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಿ ಅತ್ಯಂತ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಹಾಗೂ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ದೂರಿದ್ದರು. ಸಹ-ಕೈದಿಗಳು ತಮ್ಮನ್ನು ನಿಂದಿಸಿ ಪ್ರಚೋದಿಸುತ್ತಿದ್ದಾರೆ ಮತ್ತು ಮಾಧ್ಯಮಗಳ ನೆಗೆಟಿವ್ ಪ್ರಚಾರದಿಂದ ಸಮಸ್ಯೆ ಬಿಗಡಾಯಿಸಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದರು.

ಕೋರ್ಟ್ ನೀಡಿದ ಆದೇಶ: ಎಲ್ಲಾ ವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ಸದ್ಯಕ್ಕೆ ಜಾಮೀನು ನೀಡಲು ನಿರಾಕರಿಸಿದೆ. ಅದರ ಬದಲಾಗಿ, ಮುಂದಿನ ಒಂದು ವರ್ಷದೊಳಗೆ ಪ್ರಕರಣದ ಪ್ರಮುಖ 60 ಸಾಕ್ಷಿಗಳ ವಿಚಾರಣೆಯನ್ನು ನಡೆಸಿ ಸಾಬೀತುಪಡಿಸಲು ಕೆಳ ನ್ಯಾಯಾಲಯಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಅಲ್ಲಿಯವರೆಗೆ ನಟ ದರ್ಶನ್ ನ್ಯಾಯಾಂಗ ಬಂಧನ ಮುಂದುವರಿಯಲಿದ್ದು, ಸದ್ಯಕ್ಕಂತೂ ಜೈಲಿನಿಂದ ಮುಕ್ತಿ ಸಿಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ.