ಬೀಜಿಂಗ್: ಜಾಗತಿಕ ರಾಜಕೀಯದ ಕುತೂಹಲದ ನಡುವೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಪ್ರವಾಸ ಕೈಗೊಂಡಿದ್ದು, ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಜೊತೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಜಿನ್‌ಪಿಂಗ್, ಉಭಯ ದೇಶಗಳ ನಡುವಿನ ಸಂಘರ್ಷಕ್ಕಿಂತ ಸಹಕಾರಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದರು.
ಸಭೆಯ ಆರಂಭದಲ್ಲಿ ಮಾತನಾಡಿದ ಷಿ ಜಿನ್‌ಪಿಂಗ್, ವಿಶ್ವದ ಎರಡು ಅತಿ ದೊಡ್ಡ ಆರ್ಥಿಕ ಶಕ್ತಿಗಳು ಪರಸ್ಪರ ಪ್ರತಿಸ್ಪರ್ಧಿಗಳಾಗುವ ಬದಲು ಪಾಲುದಾರರಾಗಿ ಮುನ್ನಡೆಯುವುದು ಇಂದಿನ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು. “ನಾವು ವೈರಿಗಳಾಗಿ ಸಂಘರ್ಷಕ್ಕಿಳಿಯುವ ಬದಲು, ಸಹಕಾರದ ಹಸ್ತ ಚಾಚಬೇಕು. ಜಗತ್ತು ಒಂದು ಶತಮಾನದಲ್ಲಿ ಕಾಣದಂತಹ ದೊಡ್ಡ ಪರಿವರ್ತನೆಗೆ ಸಾಕ್ಷಿಯಾಗುತ್ತಿದೆ. ಇಂತಹ ಜಾಗತಿಕ ಅನಿಶ್ಚಿತತೆಯ ಸಂದರ್ಭದಲ್ಲಿ ಅಮೆರಿಕ ಮತ್ತು ಚೀನಾ ನಡುವಿನ ಬಾಂಧವ್ಯ ಬಹಳ ಮುಖ್ಯವಾದುದು,” ಎಂದು ಜಿನ್‌ಪಿಂಗ್ ಆಶಯ ವ್ಯಕ್ತಪಡಿಸಿದ್ದಾರೆ.
ನಂತರ ಮಾತನಾಡಿ, “ಇಡೀ ಜಗತ್ತು ಇವತ್ತು ನಮ್ಮತ್ತ ಕಣ್ಣು ನೆಟ್ಟಿದೆ. ಜಾಗತಿಕವಾಗಿ ಎದುರಾಗುತ್ತಿರುವ ಸವಾಲುಗಳನ್ನು ಒಗ್ಗಟ್ಟಾಗಿ ಎದುರಿಸುವ ಮೂಲಕ ಜಗತ್ತಿಗೆ ಹೆಚ್ಚಿನ ಸ್ಥಿರತೆ ನೀಡಲು ನಮ್ಮಿಂದ ಸಾಧ್ಯವಿಲ್ಲವೇ? ಎಂಬ ಪ್ರಶ್ನೆ ಇತಿಹಾಸದ ದೃಷ್ಟಿಕೋನದಿಂದ ಅತ್ಯಂತ ಪ್ರಮುಖವಾಗಿದೆ. ನಾವು ಪಾಲುದಾರರಾಗಿ ಕೆಲಸ ಮಾಡಿದರೆ ಅದು ಎರಡು ರಾಷ್ಟ್ರಗಳ ಹಿತಾಸಕ್ತಿಯ ಜೊತೆಗೆ ಜಾಗತಿಕ ಅಭಿವೃದ್ಧಿಗೂ ಪೂರಕವಾಗಲಿದೆ,” ಎಂದು ಜಿನ್‌ಪಿಂಗ್ ತಿಳಿಸಿದರು.
ಡೊನಾಲ್ಡ್ ಟ್ರಂಪ್ ಈ ಹಿಂದೆ 2017ರಲ್ಲಿ ಚೀನಾಕ್ಕೆ ಭೇಟಿ ನೀಡಿದ್ದರು. ದೀರ್ಘ ಕಾಲದ ನಂತರ ನಡೆದ ಈ ಭೇಟಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮಹತ್ವ ಪಡೆದುಕೊಂಡಿದೆ. ಇಬ್ಬರು ನಾಯಕರು ವ್ಯಾಪಾರ, ಜಾಗತಿಕ ಭದ್ರತೆ ಮತ್ತು ಆರ್ಥಿಕ ಸ್ಥಿರತೆಯಂತಹ ಪ್ರಮುಖ ವಿಷಯಗಳ ಕುರಿತು ಗಹನವಾದ ಚರ್ಚೆ ನಡೆಸುವ ನಿರೀಕ್ಷೆಯಿದೆ. ಈ ಸಭೆಯು ಅಮೆರಿಕ ಮತ್ತು ಚೀನಾದ ಸಂಬಂಧದಲ್ಲಿ ಹೊಸ ಬದಲಾವಣೆಯ ಮುನ್ಸೂಚನೆಯನ್ನು ನೀಡಿದೆ.






















