Home Advertisement
Home ಕ್ರೀಡೆ “ಈ ಸಲ ಕಪ್ ನಮ್ದೇ” ಪಥದಲ್ಲಿ ಆರ್‌ಸಿಬಿ: ಕಿಂಗ್ ಕೊಹ್ಲಿ ಶತಕದ ಆರ್ಭಟಕ್ಕೆ ಕೆಕೆಆರ್ ಧೂಳಿಪಟ!

“ಈ ಸಲ ಕಪ್ ನಮ್ದೇ” ಪಥದಲ್ಲಿ ಆರ್‌ಸಿಬಿ: ಕಿಂಗ್ ಕೊಹ್ಲಿ ಶತಕದ ಆರ್ಭಟಕ್ಕೆ ಕೆಕೆಆರ್ ಧೂಳಿಪಟ!

0
70

ರಾಯಪುರ: ಐಪಿಎಲ್ 2026ರ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯವು ಕೇವಲ ಆರ್‌ಸಿಬಿಯ ಗೆಲುವಿಗಾಗಿ ಮಾತ್ರವಲ್ಲದೆ, ವಿರಾಟ್ ಕೊಹ್ಲಿ ದಾಖಲೆಗಳ ಸುರಿಮಳೆಗಾಗಿ ನೆನಪಿನಲ್ಲಿ ಉಳಿಯಲಿದೆ. ಕೆಕೆಆರ್ ನೀಡಿದ್ದ 193 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ, ಕೊಹ್ಲಿ ಅಜೇಯ ಶತಕದ (105) ನೆರವಿನಿಂದ ಸುಲಭವಾಗಿ ಗೆಲುವಿನ ನಗೆ ಬೀರಿದೆ.

ಶೂನ್ಯದಿಂದ ಶತಕದವರೆಗೆ: ಈ ಪಂದ್ಯಕ್ಕೂ ಮುನ್ನ ಆಡಿದ ಸತತ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟ್ ಆಗಿ ಟೀಕೆಗೆ ಗುರಿಯಾಗಿದ್ದ ಕೊಹ್ಲಿ, ಈ ಬಾರಿ ಕೆಕೆಆರ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 58 ಎಸೆತಗಳಲ್ಲಿ ಶತಕ ಪೂರೈಸಿದ್ದು, ಐಪಿಎಲ್ ಇತಿಹಾಸದಲ್ಲಿ ಸತತ ಎರಡು ಬಾರಿ ‘ಡಕ್ ಔಟ್’ ಆದ ನಂತರ ಶತಕ ಸಿಡಿಸಿದ ವಿಶಿಷ್ಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದು ಐಪಿಎಲ್‌ನಲ್ಲಿ ಕೊಹ್ಲಿಯ 9ನೇ ಶತಕವಾಗಿದ್ದು, ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

14,000 ರನ್ ಮೈಲಿಗಲ್ಲು: ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 14,000 ರನ್ ಪೂರೈಸಿದ ಭಾರತದ ಮೊದಲ ಹಾಗೂ ವಿಶ್ವದ ಆರನೇ ಬ್ಯಾಟರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಕೇವಲ 409 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡುವ ಮೂಲಕ ಅತ್ಯಂತ ವೇಗವಾಗಿ ಈ ಮೈಲಿಗಲ್ಲು ತಲುಪಿದ ಆಟಗಾರ ಎನಿಸಿಕೊಂಡರು. ಜೊತೆಗೆ ಟಿ20 ಕ್ರಿಕೆಟ್‌ನಲ್ಲಿ ಒಟ್ಟು ಶತಕಗಳ ಸಂಖ್ಯೆ 10ಕ್ಕೇರಿದ್ದು, ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಧೋನಿ-ರೋಹಿತ್ ದಾಖಲೆ ಪತನ: ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ (279 ಪಂದ್ಯ) ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಈ ಮೂಲಕ ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ ದಾಖಲೆಯನ್ನು ಕಿಂಗ್‌ ಕೊಹ್ಲಿ ಹಿಂದಿಕ್ಕಿದ್ದಾರೆ. ಅಷ್ಟೇ ಅಲ್ಲದೆ.. ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಕೆಯಲ್ಲೂ ರೋಹಿತ್ ಜೊತೆಗೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಒಟ್ಟಾರೆಯಾಗಿ.. ಕೊಹ್ಲಿ ಈ ಗೆಲುವಿನೊಂದಿಗೆ 16 ಅಂಕಗಳನ್ನು ಗಳಿಸಿರುವ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಪ್ಲೇ-ಆಫ್ ಹಂತಕ್ಕೆ ಸನಿಹದಲ್ಲಿದೆ. ಚೇಸಿಂಗ್ ವೇಳೆ ತೋರಿದ ಈ ಅಪ್ರತಿಮ ಪ್ರದರ್ಶನವು ಕೊಹ್ಲಿನ್ನು ಮತ್ತೊಮ್ಮೆ ‘ಚೇಸ್ ಮಾಸ್ಟರ್’ ಎಂದು ಸಾಬೀತುಪಡಿಸಿದೆ.