ದಾವಣಗೆರೆ: ಗಾಳಿ, ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಬೆಣ್ಣೆನಗರಿಯಲ್ಲಿ ಮಳೆ ಆರಂಭವಾಗಿದ್ದು, ಸುಡು ಬಿಸಿಲಿಗೆ ಕಬ್ಬಿಣವಾಗಿದ್ದ ಇಳೆಯು ತಂಪಾಗಿದೆ.
ಬೆಳಗ್ಗೆಯಿಂದಲೇ ಬಿಸಿಲಿನ ತಾಪಕ್ಕೆ ಜನರು ಹೊರಗಡೆ ಬಾರದೆ ಮನೆ ಸೇರಿದ್ದರು. ಬಿಸಿಲಿನ ತಾಪಕ್ಕೆ ಹೆದರಿ ಜನರು ಹೊರಗೆ ಬಾರದ ಪರಿಣಾಮ ರಸ್ತೆಗಳು ಬಿಕೋ ಎನ್ನುತ್ತಿದ್ದವು. ವಾಹನಗಳ ಸಂಚಾರವೂ ವಿರಳವಾಗಿತ್ತು.
ಮಧ್ಯಾಹ್ನ 3.30ರ ಹೊತ್ತಿಗೆ ಯಾವುದೇ ಮಳೆಯ ಮುನ್ಸೂಚನೆ ಇಲ್ಲದೇ 4 ಗಂಟೆ ವೇಳೆಗೆ ಒಂದು ರೀತಿ ತಂಪಾದ ವಾತಾವರಣ ನಿರ್ಮಾಣವಾಯಿತು. ಬಳಿಕ ಗುಡುಗು, ಸಿಡಿಲು, ಬಿರುಗಾಳಿಯೊಂದಿಗೆ ಆರಂಭವಾದ ತುಂತುರು ಮಳೆಯು, ಐದಾರು ನಿಮಿಷ ಕಳೆದಂತೆ ಸ್ವಲ್ಪ ಬಿರುಸಾಯಿತು. ಸಂಜೆ 5 ಗಂಟೆಯವರೆಗೆ ಮಳೆ ಸುರಿಯಿತು. ಮೊದಲೇ ನಗರ ತುಂಬೆಲ್ಲ ಸೀಮೆಂಟ್ ರಸ್ತೆಗಳು ಇರುವುದರಿಂದ ರಸ್ರೆಯಲ್ಲಿ ನೀರು ಹರಿಯುತ್ತಿರುವುದು ಕಂಡು ಬಂತು.
ಸಿಡಿಲಿನ ಆರ್ಭಟಕ್ಕೆ ಬೆಚ್ಚಿದ ಜನ: ಗುಡುಗು ಸಿಡಿಲಿನ ಆರ್ಭಟದೊಂದಿಗೆ ಆರಂಭವಾದ ಮಳೆಯು ಒಂದು ಗಂಟೆ ಕಾಲ ಬಿರುಸಾಗಿಯೂ ಅಲ್ಲದೇ ಧಾರಾಕಾರವಾಗಿಯೂ ಅಲ್ಲದೇ ಸಾಧಾರಣವಾಗಿ ಸುರಿಯಿತು. ಇದರಿಂದ ಬಿಸಿಲಿನಿಂದ ಕಾದು ಕಬ್ಬಿಣವಾಗಿದ್ದ ಭೂಮಿ ತಂಪಾಯಿತು. ಈ ಮಧ್ಯೆ ಐದಾರು ಬಾರಿ ಭಾರೀ ಸಿಡಿಲಿನ ಸದ್ದಿಗೆ ಕಟ್ಟಡಗಳು, ಮರಗಳ ಕೆಳಗೆ ಮತ್ತು ಅಲ್ಲಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ನಿಂತಿದ್ದ ಜನರು ಬೆಚ್ಚಿ ಬಿದ್ದರು.






















