Home Advertisement
Home ನಮ್ಮ ಜಿಲ್ಲೆ ದಾವಣಗೆರೆ ಭಾರೀ ಬಿರುಗಾಳಿಗೆ ನೆಲಕ್ಕುರುಳಿದ ಬಾಳೆ

ಭಾರೀ ಬಿರುಗಾಳಿಗೆ ನೆಲಕ್ಕುರುಳಿದ ಬಾಳೆ

0
107

ದಾವಣಗೆರೆ: ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಬೀಸಿದ ಭಾರೀ ಬಿರುಗಾಳಿಗೆ ಬಾಳೆ ನೆಲಕ್ಕುರುಳಿದ್ದು, ಶಾಸಕ ಕೆ.ಎಸ್. ಬಸವಂತಪ್ಪ ಭೇಟಿ ನೀಡಿ ವೀಕ್ಷಣೆ ಮಾಡಿದರು.

ಕ್ಷೇತ್ರದ ವ್ಯಾಪ್ತಿಯ ಕೆರೆಯಾಗಳಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಬೀಸಿದ ಭಾರೀ ಬಿರುಗಾಳಿಗೆ ಗ್ರಾಮದ ನಾಗಣ್ಣ ಎಂಬುವರ ತೋಟದಲ್ಲಿ ಬಾಳೆ ಗಿಡಗಳು ಹಾಗೂ ಅಡಿಕೆ ಮರಗಳು ನೆಲಕ್ಕುರುಳಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ.

ಮಂಗಳವಾರ ಸುದ್ದಿ ತಿಳಿದು ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಕೆ.ಎಸ್. ಬಸವಂತಪ್ಪ, ಪರಿಶೀಲನೆ ನಡೆಸಿದರು. ಆನೆಕಲ್ಲು ಮಳೆ ಸುರಿದ ಸಂದರ್ಭದಲ್ಲಿ ಬಾಳೆ ಗಿಡಗಳಿಗೆ ಸಣ್ಣಪುಟ್ಟ ಹಾನಿಯಾಗಿದ್ದವು. ಆದರೆ ರಾತ್ರಿ ಬೀಸಿದ ಭಾರೀ ಬಿರುಗಾಳಿಗೆ ತೋಟದಲ್ಲಿ ಹಾಕಿದ್ದ ಎಲ್ಲಾ ಬಾಳೆ ಗಿಡಗಳು ನೆಲಕ್ಕುರುಳಿವೆ.

ಸದ್ಯಕ್ಕೆ ಬಾಳೆ ಗಿಡಗಳೇ ಆರ್ಥಿಕ ಮೂಲವಾಗಿದ್ದವು. ಈಗ ಎಲ್ಲಾ ಬಾಳೆ ಗಿಡಗಳು ನೆಲಕ್ಕುರುಳಿರುವುದರಿಂದ ದಿಕ್ಕು ತೋಚದಂತಾಗಿದೆ ಎಂದು ರೈತ ನಾಗಣ್ಣ ಶಾಸಕರು ಮತ್ತು ತೋಟಗಾರಿಕೆ ಅಧಿಕಾರಿಗಳ ಬಳಿ ಅಳಲು ತೋಡಿಕೊಂಡರು.

ಬೀಸಿದ ಭಾರೀ ಬಿರುಗಾಳಿಗೆ ಬಾಳೆ ಗಿಡಗಳು ನೆಲಕ್ಕುರುಳಿ ಹಾನಿಯಾಗಿದ್ದು, ಈ ಬಗ್ಗೆ ಮೇಲಧಿಕಾರಿಗಳಿಗೆ ವರದಿ ನೀಡಿ ಕೂಡಲೇ ರೈತರಿಗೆ ಪರಿಹಾರ ನೀಡುವಂತೆ ಸ್ಥಳದಲ್ಲೇ ಇದ್ದ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕಿ ರೇಷ್ಮಾ ಫರ್ವಿನ್ ಅವರಿಗೆ ಶಾಸಕ ಕೆ.ಎಸ್. ಬಸವಂತಪ್ಪ ಸೂಚನೆ ನೀಡಿದರು.