Home Advertisement
Home ಸುದ್ದಿ ದೇಶ NEET 2026 Cancelled: ಮರುಪರೀಕ್ಷೆ ನಡೆಸಲು ಎನ್‌ಟಿಎ ತೀರ್ಮಾನ

NEET 2026 Cancelled: ಮರುಪರೀಕ್ಷೆ ನಡೆಸಲು ಎನ್‌ಟಿಎ ತೀರ್ಮಾನ

0
88

ಮುಂಬೈ: ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ NEET (UG) 2026 ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ರದ್ದುಗೊಳಿಸಿದೆ. ಕಳೆದ ಮೇ 3ರಂದು ನಡೆದ ಈ ಪರೀಕ್ಷೆಯನ್ನು ದೇಶದಾದ್ಯಂತ ಸುಮಾರು 24 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು.

ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ಕುರಿತು ಹಲವು ರಾಜ್ಯಗಳಲ್ಲಿ ತನಿಖೆ ನಡೆದ ನಂತರ, ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಪರೀಕ್ಷೆಯನ್ನು ಮರುನಡೆಸಲು ನಿರ್ಧರಿಸಲಾಗಿದೆ ಎಂದು ಎನ್‌ಟಿಎ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಮರುಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ರಾಜಸ್ಥಾನ ಮತ್ತು ಉತ್ತರಾಖಂಡ ರಾಜ್ಯಗಳಿಂದ ಬಂದ ಮಾಹಿತಿಗಳ ಆಧಾರದಲ್ಲಿ, ಪರೀಕ್ಷೆಗೆ ಮುನ್ನವೇ ಕೆಲವು ಪ್ರಶ್ನೆಗಳು ಸೋರಿಕೆಯಾಗಿದ್ದವು ಎಂಬ ಆರೋಪಗಳು ಕೇಳಿಬಂದಿದ್ದವು. ತನಿಖೆಯಲ್ಲಿ ಪತ್ತೆಯಾದ ಮಾಹಿತಿಯ ಪ್ರಕಾರ, ಪರೀಕ್ಷೆಗೆ ಮುನ್ನ ಹರಿದಾಡಿದ ಪ್ರಶ್ನೆಪತ್ರಿಕೆಗಳಲ್ಲಿ 100ಕ್ಕೂ ಹೆಚ್ಚು ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರ ಪ್ರಶ್ನೆಗಳು ಮೂಲ NEET ಪ್ರಶ್ನೆಪತ್ರಿಕೆಗೆ ಬಹಳ ಹೋಲಿಕೆಯಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಸ್ಥಾನದ ಸಿಕರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮತ್ತು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಪೊಲೀಸರು ದಾಳಿ ಮತ್ತು ತನಿಖೆ ನಡೆಸಿದ್ದಾರೆ. ಕೆಲವು ಕೋಚಿಂಗ್ ಕೇಂದ್ರಗಳು ಹಾಗೂ ಮಧ್ಯವರ್ತಿಗಳ ಮೇಲೂ ಅನುಮಾನ ವ್ಯಕ್ತವಾಗಿದೆ. ಮಹಾರಾಷ್ಟ್ರದ ಲಾತೂರ್‌ನಲ್ಲಿಯೂ ಕೆಲವು ಕೋಚಿಂಗ್ ಅಕಾಡೆಮಿಗಳ ಪರೀಕ್ಷಾ ಸಾಮಗ್ರಿಗಳು ಸಂಶಯಕ್ಕೆ ಒಳಪಟ್ಟಿವೆ.

ಮೇ 8ರಂದು ಎನ್‌ಟಿಎ ಈ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ (CBI) ಒಪ್ಪಿಸಿತ್ತು. ಇದೀಗ ಕೇಂದ್ರ ಸರ್ಕಾರವು ಸಂಪೂರ್ಣ ತನಿಖೆಗಾಗಿ ಪ್ರಕರಣವನ್ನು ಸಿಬಿಐಗೆ ಅಧಿಕೃತವಾಗಿ ಹಸ್ತಾಂತರಿಸಿದೆ.

“ಪರೀಕ್ಷೆಯ ವಿಶ್ವಾಸಾರ್ಹತೆ ಮತ್ತು ನ್ಯಾಯಸಮ್ಮತತೆಯನ್ನು ಕಾಪಾಡುವುದು ಅತ್ಯಂತ ಮುಖ್ಯ. ಆದ್ದರಿಂದ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಆಗುವ ತೊಂದರೆ ತಿಳಿದಿದ್ದರೂ ಮರುಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ,” ಎಂದು ಎನ್‌ಟಿಎ ಪ್ರಕಟಣೆಯಲ್ಲಿ ತಿಳಿಸಿದೆ.

ಮೇ 2026ರ ಪರೀಕ್ಷೆಗೆ ಈಗಾಗಲೇ ನೋಂದಾಯಿಸಿರುವ ಎಲ್ಲಾ ಅಭ್ಯರ್ಥಿಗಳ ಮಾಹಿತಿಯೂ ಮಾನ್ಯವಾಗಿರುತ್ತದೆ. ವಿದ್ಯಾರ್ಥಿಗಳು ಮರುನೋಂದಣಿ ಮಾಡಿಕೊಳ್ಳಬೇಕಾಗಿಲ್ಲ ಮತ್ತು ಯಾವುದೇ ಹೆಚ್ಚುವರಿ ಪರೀಕ್ಷಾ ಶುಲ್ಕವೂ ವಿಧಿಸಲಾಗುವುದಿಲ್ಲ. ಈಗಾಗಲೇ ಪಾವತಿಸಿದ ಪರೀಕ್ಷಾ ಶುಲ್ಕವನ್ನು ಮರುಪಾವತಿ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಹೊಸ ಪರೀಕ್ಷಾ ದಿನಾಂಕ, ಅಡ್ಮಿಟ್ ಕಾರ್ಡ್ ಬಿಡುಗಡೆ ವೇಳಾಪಟ್ಟಿ ಸೇರಿದಂತೆ ಎಲ್ಲಾ ಮಾಹಿತಿಯನ್ನು ಎನ್‌ಟಿಎ ಅಧಿಕೃತ ವೆಬ್‌ಸೈಟ್ ಹಾಗೂ ಅಧಿಕೃತ ಪ್ರಕಟಣೆಗಳ ಮೂಲಕವೇ ಪ್ರಕಟಿಸಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮಾಹಿತಿಗಳನ್ನು ನಂಬಬಾರದು ಎಂದು ಎನ್‌ಟಿಎ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಮನವಿ ಮಾಡಿದೆ.