Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಉತ್ತರ ಕನ್ನಡದ ಹಿರಿಯ ರಾಜಕಾರಣಿ ರಮಾನಂದ ನಾಯಕ ನಿಧನ

ಉತ್ತರ ಕನ್ನಡದ ಹಿರಿಯ ರಾಜಕಾರಣಿ ರಮಾನಂದ ನಾಯಕ ನಿಧನ

0
95

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಹೋರಾಟದ ರೂವಾರಿ ರಮಾನಂದ ನಾಯಕ ವಿಧಿವಶ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ, ಜನಪರ ಹೋರಾಟಗಾರ ಹಾಗೂ ಜಿಲ್ಲಾ ಪಂಚಾಯತ್‌ನ ಪ್ರಥಮ ಅಧ್ಯಕ್ಷರಾಗಿದ್ದ ರಮಾನಂದ ನಾಯಕ ಹಿಚ್ಕಡ (78) ಅವರು ಗುರುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನರಾದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಮೃತರ ಪಾರ್ಥಿವ ಶರೀರವನ್ನು ಗುರುವಾರ ಸಂಜೆ ಅಂಕೋಲಾ ತಾಲ್ಲೂಕಿನ ಹಿಚ್ಕಡದಲ್ಲಿರುವ ಅವರ ನಿವಾಸಕ್ಕೆ ತರಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ಉತ್ತರ ಕನ್ನಡ ಜಿಲ್ಲೆಯ ರಾಜಕೀಯ, ಸಾಮಾಜಿಕ ಹಾಗೂ ಸಹಕಾರಿ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಜನತಾ ಪರಿವಾರದಿಂದ ರಾಜಕೀಯ ಪ್ರವೇಶ : ರಮಾನಂದ ನಾಯಕ ಹಿಚ್ಕಡ ಅವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಜನತಾ ಪರಿವಾರದ ಮೂಲಕ ಸಕ್ರಿಯ ರಾಜಕೀಯ ಪ್ರವೇಶಿಸಿದ ಅವರು, ಜನಸಾಮಾನ್ಯರ ಸಮಸ್ಯೆಗಳ ಪರ ಧ್ವನಿ ಎತ್ತುವ ನಾಯಕನಾಗಿ ಹೆಸರಾಗಿದ್ದರು.

ಉತ್ತರ ಕನ್ನಡ ಜಿಲ್ಲಾ ಪರಿಷತ್‌ (ಈಗಿನ ಜಿಲ್ಲಾ ಪಂಚಾಯತ್‌) ಸ್ಥಾಪನೆಯಾದ ಬಳಿಕ ಅದರ ಮೊದಲ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಅವರು, ಜಿಲ್ಲೆಯ ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಬಲವಾದ ಅಡಿಪಾಯ ಹಾಕಿದ್ದರು. ಗ್ರಾಮೀಣ ಅಭಿವೃದ್ಧಿ, ಶಿಕ್ಷಣ ಮತ್ತು ಮೂಲಸೌಕರ್ಯ ವೃದ್ಧಿಗೆ ಅವರು ನೀಡಿದ ಕೊಡುಗೆ ಗಮನಾರ್ಹವಾಗಿತ್ತು.

ರೈಲ್ವೆ ಹೋರಾಟದ ಪ್ರಮುಖ ಧ್ವನಿ : ಉತ್ತರ ಕನ್ನಡ ಜಿಲ್ಲೆಯ ದಶಕಗಳ ಕನಸಾದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗಾಗಿ ರಮಾನಂದ ನಾಯಕ ನಡೆಸಿದ ಹೋರಾಟ ಇಂದಿಗೂ ಸ್ಮರಣೀಯವಾಗಿದೆ. ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷರಾಗಿ ಸುಮಾರು 25 ವರ್ಷಗಳ ಕಾಲ ಅವರು ನಿರಂತರ ಹೋರಾಟ ನಡೆಸಿದ್ದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲು ಅನೇಕ ಪ್ರತಿಭಟನೆಗಳು, ಸಭೆಗಳು ಮತ್ತು ಜನಾಂದೋಲನಗಳನ್ನು ಸಂಘಟಿಸಿದ್ದರು. ಉತ್ತರ ಕನ್ನಡದ ಅಭಿವೃದ್ಧಿಗೆ ರೈಲ್ವೆ ಯೋಜನೆ ಅತ್ಯವಶ್ಯಕ ಎಂದು ಅವರು ನಿರಂತರವಾಗಿ ಒತ್ತಾಯಿಸುತ್ತಿದ್ದರು.

ಪಕ್ಷಾತೀತ ಬಾಂಧವ್ಯ : ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಅವರು, ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದರು. ಆದರೆ ಪಕ್ಷ ರಾಜಕೀಯವನ್ನು ಮೀರಿ ಎಲ್ಲ ಪಕ್ಷಗಳ ನಾಯಕರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದವರು ಎನ್ನುವ ಹೆಸರು ಪಡೆದಿದ್ದರು.

ಸಜ್ಜನಿಕೆ, ಸರಳತೆ ಹಾಗೂ ಜನಪರ ನಿಲುವಿನ ಮೂಲಕ ಜಿಲ್ಲೆಯ ಜನರ ಮನಸ್ಸಿನಲ್ಲಿ ಅವರು ವಿಶೇಷ ಸ್ಥಾನ ಪಡೆದಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ : ರಾಜಕೀಯ ಕ್ಷೇತ್ರದ ಜೊತೆಗೆ ಸಹಕಾರಿ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿಯೂ ರಮಾನಂದ ನಾಯಕ ಮಹತ್ವದ ಸೇವೆ ಸಲ್ಲಿಸಿದ್ದರು. ಹಲವಾರು ಸಾಮಾಜಿಕ ಸಂಸ್ಥೆಗಳೊಂದಿಗೆ ತೊಡಗಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದರು.

ಅವರ ಅಗಲಿಕೆಗೆ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು ಸಂತಾಪ ಸೂಚಿಸಿದ್ದು, ಉತ್ತರ ಕನ್ನಡ ಜಿಲ್ಲೆ ಅನುಭವಸಂಪನ್ನ ನಾಯಕನನ್ನು ಕಳೆದುಕೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.