SK Home Ad
Home ಸುದ್ದಿ ದೇಶ ಮತ ಎಣಿಕೆ ಬಗ್ಗೆ ಹೊಸ ವಿವಾದ: LIVE ಸ್ಟ್ರೀಮಿಂಗ್ ಬೇಡಿಕೆ

ಮತ ಎಣಿಕೆ ಬಗ್ಗೆ ಹೊಸ ವಿವಾದ: LIVE ಸ್ಟ್ರೀಮಿಂಗ್ ಬೇಡಿಕೆ

0
296

ಲಕ್ನೋ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ಈ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಎಂದು ಆರೋಪಿಸಿದ್ದಾರೆ. “ಇದು ‘ಮತಗಣನೆ’ ಅಲ್ಲ, ‘ಮನಗಣನಾ’ (ಮನಸ್ಸಿನ ಎಣಿಕೆ) ನಡೆಯುತ್ತಿದೆ” ಎಂದು ತೀವ್ರವಾಗಿ ಟೀಕಿಸಿದ ಅವರು, ಮತ ಎಣಿಕೆಯ ವಿಶ್ವಾಸಾರ್ಹತೆ ಬಗ್ಗೆ ಸಂಶಯ ವ್ಯಕ್ತಪಡಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತ ಎಣಿಕೆ ನಡೆಯುತ್ತಿರುವಾಗಲೇ ಫಲಿತಾಂಶಗಳ ಬಗ್ಗೆ ಪೂರ್ವಗ್ರಹಿತ ನಿರೂಪಣೆ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು. “ಎಣಿಕೆ ಪ್ರಕ್ರಿಯೆ ನಡೆಯುವಾಗಲೇ ಒಂದು ಕಥಾನಕವನ್ನು ರೂಪಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧ” ಎಂದು ಹೇಳಿದರು.

ಈ ಹಿನ್ನೆಲೆ, ಸುಪ್ರೀಂ ಕೋರ್ಟ್ ತಕ್ಷಣ ಮಧ್ಯಪ್ರವೇಶಿಸಿ ಚುನಾವಣಾ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. ನ್ಯಾಯಾಲಯದ ವಿಚಾರಣೆಗಳನ್ನು ನೇರಪ್ರಸಾರ ಮಾಡುವಂತೆಯೇ, ಮತ ಎಣಿಕೆಯ ಪ್ರಕ್ರಿಯೆಯನ್ನೂ ಲೈವ್ ಟೆಲಿಕಾಸ್ಟ್ ಮಾಡಬೇಕು ಎಂದು ಸಲಹೆ ನೀಡಿದರು.

ಅದೇ ವೇಳೆ, ಪಶ್ಚಿಮ ಬಂಗಾಳದ ಮತ ಎಣಿಕೆ ಕೇಂದ್ರಗಳಲ್ಲಿ ಅಳವಡಿಸಲಾದ ಸಿಸಿಟಿವಿ ದೃಶ್ಯಗಳನ್ನು ದೇಶದ ಜನತೆಗೆ ನೇರವಾಗಿ ಪ್ರಸಾರ ಮಾಡಬೇಕು ಎಂಬ ಬೇಡಿಕೆಯನ್ನು ಅವರು ಮುಂದಿಟ್ಟರು. ಇದು ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಜನರ ವಿಶ್ವಾಸವನ್ನು ಹೆಚ್ಚಿಸಲು ಸಹಕಾರಿ ಆಗುತ್ತದೆ ಎಂದು ಹೇಳಿದರು.

ಪಶ್ಚಿಮ ಬಂಗಾಳ ಚುನಾವಣೆಯ ನ್ಯಾಯಸಮ್ಮತತೆ ಕುರಿತಾಗಿ ವಿವಿಧ ರಾಜಕೀಯ ವಲಯಗಳಿಂದ ಈಗಾಗಲೇ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಅಖಿಲೇಶ್ ಯಾದವ್ ಅವರ ಈ ಹೇಳಿಕೆ ಮತ್ತಷ್ಟು ರಾಜಕೀಯ ಚರ್ಚೆಗೆ ಕಾರಣವಾಗಿದೆ.