Home Advertisement
Home ಆರೋಗ್ಯ ಬೂದು ಕುಂಬಳಕಾಯಿ ರಸ: ಅಸಿಡಿಟಿ ಮತ್ತು ತೂಕ ಇಳಿಕೆಗೆ ಸಂಜೀವಿನಿ; ತಯಾರಿಸುವುದು ಹೇಗೆ? ಇಲ್ಲಿದೆ ಡಿಟೇಲ್ಸ್

ಬೂದು ಕುಂಬಳಕಾಯಿ ರಸ: ಅಸಿಡಿಟಿ ಮತ್ತು ತೂಕ ಇಳಿಕೆಗೆ ಸಂಜೀವಿನಿ; ತಯಾರಿಸುವುದು ಹೇಗೆ? ಇಲ್ಲಿದೆ ಡಿಟೇಲ್ಸ್

0
64

ಬೂದು ಕುಂಬಳಕಾಯಿಯು ಕೇವಲ ಅಡುಗೆಗೆ ಸೀಮಿತವಾಗದೆ, ಉತ್ತಮ ಆರೋಗ್ಯದ ಗಣಿಯಾಗಿ ಗುರುತಿಸಿಕೊಂಡಿದೆ. ಆಯುರ್ವೇದದಲ್ಲಿ ಇದಕ್ಕೆ ‘ಕೂಷ್ಮಾಂಡ’ಎಂಬ ಹೆಸರಿದೆ. ಪ್ರತಿದಿನ ಇದರ ರಸ ಸೇವನೆ ಮಾಡುವುದರಿಂದ ದೇಹಕ್ಕೆ ಅದ್ಭುತ ಪ್ರಯೋಜನಗಳು ದೊರೆಯುತ್ತವೆ. ಬೂದು ಕುಂಬಳಕಾಯಿ ರಸದ ಲಾಭಗಳು, ತಯಾರಿಸುವ ವಿಧಾನ ಮತ್ತು ಮುನ್ನೆಚ್ಚರಿಕೆಗಳ ಕುರಿತಾದ ಇನ್ನಷ್ಟೂ ಮಾಹಿತಿ ಇಲ್ಲಿದೆ.

ಆರೋಗ್ಯದ ಮೇಲೆ ಬಿರುವ ಪ್ರಭಾವ: ಬೂದು ಕುಂಬಳಕಾಯಿ ರಸವು ದೇಹವನ್ನು ತಂಪು ಮಾಡುವ ಗುಣವನ್ನು ಹೊಂದಿದೆ. ಇದು ಅಸಿಡಿಟಿ, ಗ್ಯಾಸ್ಟ್ರಿಕ್ ಮತ್ತು ಹೊಟ್ಟೆಯ ಹುಣ್ಣು (Ulcer) ನಿವಾರಣೆಗೆ ರಾಮಬಾಣ. ಇದರಲ್ಲಿ ಹೆಚ್ಚಿನ ಪ್ರಮಾಣದ ನಾರು ಇರುವುದರಿಂದ ಮಲಬದ್ಧತೆ ದೂರವಾಗುತ್ತದೆ. ತೂಕ ಇಳಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆ, ಏಕೆಂದರೆ ಇದರಲ್ಲಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ನೀರಿನಂಶವಿದೆ. ಅಷ್ಟೇ ಅಲ್ಲದೆ ಇದು ರಕ್ತಶುದ್ಧಿ ಮಾಡಲು ಮತ್ತು ನರಮಂಡಲದ ಆರೋಗ್ಯವನ್ನು ವೃದ್ಧಿಸಿ ನೆನಪಿನ ಶಕ್ತಿ ಹೆಚ್ಚಿಸಲು ಸಹಯ ಮಾಡುತ್ತದೆ.

ತಯಾರಿಸುವ ಸುಲಭ ವಿಧಾನ: ಬೂದು ಕುಂಬಳಕಾಯಿ ರಸವನ್ನು ತಯಾರಿಸುವುದು ಬಹಳ ಸರಳ. ಮೊದಲು ಕುಂಬಳಕಾಯಿಯ ಸಿಪ್ಪೆ ಮತ್ತು ಒಳಗಿನ ಬೀಜಗಳನ್ನು ತೆಗೆದು ಸಣ್ಣ ಚೂರುಗಳನ್ನಾಗಿ ಮಾಡಿಕೊಳ್ಳಬೇಕು. ಈ ಚೂರುಗಳನ್ನು ಮಿಕ್ಸರ್‌ನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ ಸೋಸುವ ಬಟ್ಟೆ ಅಥವಾ ಜರಡಿಯ ಸಹಾಯದಿಂದ ರಸವನ್ನು ಬೇರ್ಪಡಿಸಿ. ಇದಕ್ಕೆ ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸುವ ಅಗತ್ಯವಿಲ್ಲ. ರುಚಿಗಾಗಿ ಸ್ವಲ್ಪ ನಿಂಬೆ ರಸ ಅಥವಾ ಕಾಳುಮೆಣಸಿನ ಪುಡಿಯನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಹೆಚ್ಚು ಪ್ರಯೋಜನಕಾರಿ.

ಓದುಗರ ಗಮನಕ್ಕೆ: ಇದರಿಂದ ಅತಿಯಾದ ಪ್ರಯೋಜನಗಳಿದ್ದರೂ ಕೆಲವು ಮುನ್ನೆಚ್ಚರಿಕೆಗಳು ಅಗತ್ಯ. ಇದು ಅತ್ಯಂತ ತಂಪು ಪದಾರ್ಥವಾಗಿರುವುದರಿಂದ, ಸದಾ ಶೀತ, ಕೆಮ್ಮು ಅಥವಾ ಅಸ್ತಮಾ ಸಮಸ್ಯೆ ಇರುವವರು ಇದನ್ನು ಸೇವಿಸುವಾಗ ಎಚ್ಚರಿಕೆ ವಹಿಸಬೇಕು (ಸ್ವಲ್ಪ ಕಾಳುಮೆಣಸಿನ ಪುಡಿ ಸೇರಿಸುವುದು ಉತ್ತಮ). ಮಳೆಗಾಲ ಅಥವಾ ಚಳಿಗಾಲದಲ್ಲಿ ಇದರ ಸೇವನೆ ಮಿತವಾಗಿರಲಿ. ಮಧುಮೇಹಿಗಳು ಮತ್ತು ಕಿಡ್ನಿ ಸಮಸ್ಯೆ ಇರುವವರು ಇದನ್ನು ದಿನನಿತ್ಯ ಬಳಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಒಟ್ಟಾರೆ.. ನೈಸರ್ಗಿಕ ಶಕ್ತಿ ವರ್ಧಕವಾಗಿರುವ ಬೂದು ಕುಂಬಳಕಾಯಿ ರಸವನ್ನು ಸರಿಯಾದ ಕ್ರಮದಲ್ಲಿ ಬಳಸಿದರೆ ಆರೋಗ್ಯಪೂರ್ಣ ಜೀವನ ನಿಮ್ಮದಾಗುತ್ತದೆ.