SK Home Ad
Home ಆಹಾರ ಚಾಟ್ಸ್ ಪ್ರಿಯರ ಗಮನಕ್ಕೆ: ಮಳೆಗಾಲದ ಪಾನಿಪೂರಿ ತರಬಹುದು ಸಾಂಕ್ರಾಮಿಕ ರೋಗಗಳ ಭೀತಿ!

ಚಾಟ್ಸ್ ಪ್ರಿಯರ ಗಮನಕ್ಕೆ: ಮಳೆಗಾಲದ ಪಾನಿಪೂರಿ ತರಬಹುದು ಸಾಂಕ್ರಾಮಿಕ ರೋಗಗಳ ಭೀತಿ!

0
27

ಮಳೆಗಾಲ ಆರಂಭವಾಗುತ್ತಿದ್ದಂತೆ ಬಿಸಿಬಿಸಿಯಾದ ಅಥವಾ ಚಟಪಟ ಎನ್ನುವ ಖಾರ ಪದಾರ್ಥಗಳನ್ನು ತಿನ್ನುವ ಆಸೆ ಎಲ್ಲರಲ್ಲೂ ಹೆಚ್ಚಾಗುತ್ತದೆ. ಅದರಲ್ಲೂ ರಸ್ತೆಬದಿಯ ಚಾಟ್ಸ್, ಮುಖ್ಯವಾಗಿ ಪಾನಿಪೂರಿ ಕಂಡರೆ ಬಾಯಿ ಉರದೇ ಇರುವವರೇ ವಿರಳ. ಆದ್ರೆ ಮಳೆಗಾಲದ ಸಮಯದಲ್ಲಿ ಪಾನಿಪೂರಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಎಷ್ಟು ಸೂಕ್ತ? ಇದರಿಂದ ದೇಹದ ಮೇಲಾಗುವ ಪರಿಣಾಮಗಳೇನು ಎಂಬುದನ್ನು ಪ್ರತಿಯೊಬ್ಬರೂ ತಿಳಿಯಬೇಕಾಗಿದೆ.

ಕಲುಷಿತ ನೀರು ಮತ್ತು ಬ್ಯಾಕ್ಟೀರಿಯಾ: ಪಾನಿಪೂರಿಗೆ ಬಳಸುವ ತಣ್ಣನೆಯ ಪಾನಿ (ತಿಳಿ ನೀರು) ಮತ್ತು ಚಟ್ನಿಗಳನ್ನು ತಯಾರಿಸಲು ಬಳಸುವ ನೀರು ಶುದ್ಧವಾಗಿರದಿದ್ದರೆ ಅಪಾಯ ಗ್ಯಾರಂಟಿ. ಮಳೆಗಾಲದಲ್ಲಿ ನೀರಿನ ಮೂಲಗಳು ಸುಲಭವಾಗಿ ಕಲುಷಿತಗೊಳ್ಳುವುದರಿಂದ, ಇದರಲ್ಲಿ ಇ-ಕೋಲಿ ಮತ್ತು ಸಾಲ್ಮೊನೆಲ್ಲಾದಂತಹ ಅಪಾಯಕಾರಿ ಬ್ಯಾಕ್ಟೀರಿಯಾಗಳು ಇರುತ್ತವೆ.

ಸಾಂಕ್ರಾಮಿಕ ರೋಗಗಳ ಭೀತಿ: ಕಲುಷಿತ ನೀರು ಹಾಗೂ ಅಸ್ವಚ್ಛತೆಯಿಂದಾಗಿ ಟೈಫಾಯ್ಡ್, ಕಾಲರಾ, ಕಾಮಾಲೆ (ಹೆಪಟೈಟಿಸ್ ಎ) ಮತ್ತು ತೀವ್ರ ಭೇದಿಯಂತಹ ರೋಗಗಳು ಹರಡುವ ಸಾಧ್ಯತೆ ಮಳೆಗಾಲದಲ್ಲಿ ಶೇ. 80 ರಷ್ಟು ಹೆಚ್ಚಿರುತ್ತದೆ.

ದುರ್ಬಲ ಜೀರ್ಣಕ್ರಿಯೆ: ಮಳೆಗಾಲದ ತೇವಾಂಶಭರಿತ ವಾತಾವರಣದಿಂದಾಗಿ ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯು ಸಹಜವಾಗಿಯೇ ಮಂದವಾಗಿರುತ್ತದೆ. ಇಂತಹ ಸಮಯದಲ್ಲಿ ಮಸಾಲೆಭರಿತ, ಖಾರ ಹಾಗೂ ರಸ್ತೆಬದಿಯ ತೆರೆದಿಟ್ಟ ಆಹಾರಗಳನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್, ಹೊಟ್ಟೆಯುರಿ ಮತ್ತು ಅಜೀರ್ಣದ ಸಮಸ್ಯೆಗಳು ಎದುರಾಗುತ್ತವೆ.

ಪ್ರಯೋಜನವಿದೆಯೇ?: ಸಾಮಾನ್ಯ ದಿನಗಳಲ್ಲಿ ಮನೆಯಲ್ಲೇ ತಯಾರಿಸಿದ ಪಾನಿಪೂರಿ ಸೇವಿಸುವುದರಿಂದ ಕೆಲವು ಪ್ರಯೋಜನಗಳಿವೆ. ಪಾನಿಪೂರಿಯ ನೀರಿನಲ್ಲಿ ಬಳಸುವ ಜೀರಿಗೆ, ಪುದೀನಾ, ಕೊತ್ತಂಬರಿ ಮತ್ತು ಇಂಗು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಅಲ್ಲದೆ, ಬಾಯಿ ಕಹಿ ಎನಿಸಿದಾಗ ಅಥವಾ ವಾಕರಿಕೆ ಬಂದಾಗ ಇದು ನಾಲಿಗೆಗೆ ರುಚಿ ನೀಡುತ್ತದೆ. ಆದರೆ, ಮಳೆಗಾಲದಲ್ಲಿ ಇದರ ಪ್ರಯೋಜನಗಳಿಗಿಂತ ಹಾನಿಯೇ ಹೆಚ್ಚು.

ಓದುಗರ ಗಮನಕ್ಕೆ: ನಿಮಗೆ ಪಾನಿಪೂರಿ ತಿನ್ನಲೇಬೇಕು ಎನಿಸಿದರೆ, ಹೊರಗಡೆ ತಿನ್ನುವ ಬದಲು ಮನೆಯಲ್ಲೇ ಶುದ್ಧವಾದ ಬಿಸಿ ನೀರನ್ನು ಬಳಸಿ ಪಾನಿಪೂರಿ ತಯಾರಿಸಿ ಸವಿಯುವುದು ಉತ್ತಮ. ಒಂದು ವೇಳೆ ಹೊರಗಡೆ ತಿನ್ನುವುದಾದರೆ, ಅತ್ಯಂತ ಸ್ವಚ್ಛತೆ ಕಾಪಾಡುವ ಮತ್ತು ಯೂರಿಫೈಡ್ ನೀರನ್ನು ಬಳಸುವ ನಂಬಿಕಸ್ಥ ಜಾಗವನ್ನು ಆಯ್ದುಕೊಳ್ಳಿ. ಮುನ್ನೆಚ್ಚರಿಕೆ ವಹಿಸದಿದ್ದರೆ ನಾಲಿಗೆಯ ರುಚಿ, ಆಸ್ಪತ್ರೆಯ ಖರ್ಚಿಗೆ ದಾರಿಯಾಗಬಹುದು.