Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಶಿರಸಿ ಬಾಲಕನ ವಿಶ್ವ ದಾಖಲೆ – ಶೀರ್ಷಾಸನದಲ್ಲೇ ಶಿವತಾಂಡವ ಪಠಣೆ

ಶಿರಸಿ ಬಾಲಕನ ವಿಶ್ವ ದಾಖಲೆ – ಶೀರ್ಷಾಸನದಲ್ಲೇ ಶಿವತಾಂಡವ ಪಠಣೆ

0
106

ಶಿರಸಿ (ಉತ್ತರ ಕನ್ನಡ): ಕರ್ನಾಟಕದ ಭೂಮಿಯಿಂದ ಮತ್ತೊಂದು ಅಸಾಧಾರಣ ಪ್ರತಿಭೆ ಜಗತ್ತಿನ ಗಮನ ಸೆಳೆದಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ 8 ವರ್ಷದ ಪುಟ್ಟ ಬಾಲಕ ಓಂ ಎನ್. ತನ್ನ ಅದ್ಭುತ ಯೋಗ ಸಾಮರ್ಥ್ಯ ಮತ್ತು ಭಕ್ತಿಭಾವದಿಂದ ವಿಶ್ವ ದಾಖಲೆ ನಿರ್ಮಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಅತ್ಯಂತ ಕಠಿಣ ಯೋಗಾಸನಗಳಲ್ಲಿ ಒಂದಾದ ಶೀರ್ಷಾಸನ (ತಲೆಕೆಳಗಾಗಿ ನಿಲ್ಲುವುದು) ಭಂಗಿಯಲ್ಲಿ, ಯಾವುದೇ ಕೈಗಳ ಆಸರೆಯಿಲ್ಲದೆ (ಹ್ಯಾಂಡ್ಸ್-ಫ್ರೀ) ಗೋಡೆಯ ಬೆಂಬಲದೊಂದಿಗೆ ನಿಂತುಕೊಂಡು, ಓಂ ಕೇವಲ 3 ನಿಮಿಷ 47 ಸೆಕೆಂಡುಗಳಲ್ಲಿ ಶಿವತಾಂಡವ ಸ್ತೋತ್ರವನ್ನು ಸ್ಪಷ್ಟವಾಗಿ ಪಠಿಸಿದ್ದಾನೆ. ಈ ಸಾಧನೆ ದೈಹಿಕ ಸಮತೋಲನ, ಉಸಿರಿನ ನಿಯಂತ್ರಣ ಮತ್ತು ಮನಸ್ಸಿನ ಏಕಾಗ್ರತೆಯ ಅಪೂರ್ವ ಸಂಯೋಜನೆ ಎಂದು ಪರಿಣಿತರ ಅಭಿಪ್ರಾಯವಾಗಿದೆ.

ಈ ಅಪರೂಪದ ಸಾಧನೆಯನ್ನು ಗುರುತಿಸಿ International Book of Records ಸಂಸ್ಥೆ ಓಂ ಎನ್ ಅವರಿಗೆ “ಹ್ಯಾಂಡ್ಸ್-ಫ್ರೀ ಶೀರ್ಷಾಸನದಲ್ಲೇ ವೇಗವಾಗಿ ಶಿವತಾಂಡವ ಸ್ತೋತ್ರ ಪಠಣೆ (ಮಕ್ಕಳ ವಿಭಾಗ)” ವಿಭಾಗದಲ್ಲಿ ವಿಶ್ವ ದಾಖಲೆಯ ಗೌರವ ನೀಡಿದೆ.

ಶಿರಸಿಯ ಇಸಳೂರಿನ ಶ್ರೀನಿಕೇತನ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಓಂ, ಮಹಾಶಿವರಾತ್ರಿ ಸಂದರ್ಭದಲ್ಲಿ ಈ ಸಾಧನೆಯನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದ್ದ. ಓಂ ಅವರ ತಂದೆ ನಿವೃತ್ತ ಸೈನಿಕ ಶ್ರೀನಿವಾಸ್ ನಾಯಕ್ ಹಾಗೂ ತಾಯಿ ಉಪನ್ಯಾಸಕಿ ಡಾ. ಅಪರ್ಣ ಕರ್ಕಿ, ಮಗನ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮೊದಲು, ಕೇವಲ ಆರು ವರ್ಷದ ವಯಸ್ಸಿನಲ್ಲಿಯೇ ಓಂ ಏಷ್ಯಾದ 48 ದೇಶಗಳ ಹೆಸರು, ರಾಜಧಾನಿ ಮತ್ತು ಕರೆನ್ಸಿಗಳನ್ನು ಕೇವಲ 1 ನಿಮಿಷ 42 ಸೆಕೆಂಡುಗಳಲ್ಲಿ ಹೇಳಿ ದಾಖಲೆ ನಿರ್ಮಿಸಿದ್ದ ಎಂಬುದು ಗಮನಾರ್ಹ. ಈಗ ಯೋಗ ಮತ್ತು ಭಕ್ತಿಯ ಸಂಯೋಜನೆಯ ಮೂಲಕ ಮತ್ತೊಂದು ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವುದು ಅವನ ಪ್ರತಿಭೆಗೆ ಸಾಕ್ಷಿಯಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಓಂ ಸಾಧನೆಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದ್ದು, “ಈ ಪುಟ್ಟ ಶಿವಭಕ್ತನ ಸಾಧನೆ ಪ್ರತಿಯೊಬ್ಬ ಮಕ್ಕಳಿಗೂ ಸ್ಪೂರ್ತಿ” ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.