ಬೆಂಗಳೂರು: ಸಿಲಿಕಾನ್ ಸಿಟಿಯ ಆಡುಗೋಡಿಯ ಬಾಡಿಗೆ ಮನೆಯೊಂದರಲ್ಲಿ ಜಾರ್ಖಂಡ್ ಮೂಲದ ಟೆಕ್ಕಿ ಪೂಜಾ ದತ್ತಾ (28) ಅವರ ಶವ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿನ ಸುತ್ತ ನಾನಾ ಅನುಮಾನಗಳು ಮೂಡಿವೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಯುವತಿ ವಾಸವಿದ್ದ ಕೊಠಡಿಯ ಸ್ಥಿತಿ ಕಂಡು ದಂಗಾಗಿದ್ದಾರೆ.
ಕೊಠಡಿಯಲ್ಲಿದ್ದ ವಿಚಿತ್ರ ಸನ್ನಿವೇಶ: ಪೂಜಾ ದತ್ತಾ ವಾಸವಿದ್ದ ಕೊಠಡಿಯಲ್ಲಿ ಎರಡು ಮೂಟೆ ತುಂಬುವಷ್ಟು ಹರಿದ ಪೇಪರ್‌ಗಳು ಹಾಗೂ ಕಸ ಪತ್ತೆಯಾಗಿದೆ. ಇಡೀ ಮನೆಯ ತುಂಬೆಲ್ಲಾ ಪೇಪರ್‌ಗಳನ್ನು ಅರಿದು ಬಿಸಾಡಲಾಗಿತ್ತು. ಇದಕ್ಕಿಂತಲೂ ಹೆಚ್ಚಾಗಿ, ಕೊಠಡಿಯ ಗೋಡೆಗಳ ಮೇಲೆ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಬರೆದ ನಿಗೂಢ ಚೀಟಿಗಳನ್ನು ಅಂಟಿಸಲಾಗಿತ್ತು.
ಗೋಡೆಗಳ ಮೇಲೆ ವಿಚಿತ್ರ ಚಿತ್ರಗಳನ್ನು ಬಿಡಿಸಲಾಗಿದ್ದು, ಅದರಲ್ಲಿ ಓರ್ವ ಯುವಕನ ಹೆಸರನ್ನು ಕೂಡ ಉಲ್ಲೇಖಿಸಲಾಗಿದೆ. ಇದು ಪೂಜಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಸಂಚಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಮೂರು ದಿನಗಳ ಬಳಿಕ ಬೆಳಕಿಗೆ ಬಂದ ಘಟನೆ: ಕಳೆದ ಮೂರು ದಿನಗಳಿಂದ ಪೂಜಾ ಮನೆಯ ಬಾಗಿಲು ಲಾಕ್ ಆಗಿತ್ತು. ಮನೆಯಿಂದ ಅತಿಯಾದ ದುರ್ನಾತ ಬರಲಾರಂಭಿಸಿದಾಗ ಮನೆ ಮಾಲೀಕರು ಬಾಗಿಲು ಒಡೆದು ನೋಡಿದ್ದಾರೆ. ಈ ವೇಳೆ ಪೂಜಾಳ ಶವ ಬೆತ್ತಲೆ ಸ್ಥಿತಿಯಲ್ಲಿ, ಕೊಳೆತ ರೂಪದಲ್ಲಿ ಪತ್ತೆಯಾಗಿದೆ. ಮೃತಳ ಕೈ ಹಾಗೂ ಕುತ್ತಿಗೆಯ ಭಾಗದಲ್ಲಿ ಗಾಯದ ಗುರುತುಗಳು ಇರುವುದು ಹತ್ಯೆಯ ಶಂಕೆಯನ್ನು ಬಲಪಡಿಸಿದೆ.
ಪೋಷಕರ ಸುಳಿವೇ ಇಲ್ಲ: ಪೂಜಾ 2025ರಲ್ಲಿಯೇ ಕೆಲಸ ಬಿಟ್ಟಿದ್ದು, ಅಂದಿನಿಂದ ಬೇರೆ ಯಾವುದೇ ಕಂಪನಿಗೆ ಸೇರಿರಲಿಲ್ಲ ಎನ್ನಲಾಗಿದೆ. ಮನೆಗೆ ಆಗಾಗ ಓರ್ವ ಯುವಕ ಬಂದು ಹೋಗುತ್ತಿದ್ದ ಎಂಬ ಮಾಹಿತಿಯೂ ಲಭ್ಯವಾಗಿದೆ. ಸದ್ಯ ಮೃತದೇಹವನ್ನು ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಜಾರ್ಖಂಡ್‌ನಲ್ಲಿರುವ ಪೋಷಕರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಕುಟುಂಬಸ್ಥರು ಬಂದ ಬಳಿಕವೇ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಆ ವರದಿಯಿಂದ ಸಾವಿನ ಅಸಲಿ ಸತ್ಯ ಹೊರಬರಬೇಕಿದೆ.























