Home Advertisement
Home ಸುದ್ದಿ ವಿದೇಶ ನೀರಿಗಾಗಿ ಕಿತ್ತಾಟ, ಭೀಕರ ಹಿಂಸಾಚಾರ, 42 ಸಾವು

ನೀರಿಗಾಗಿ ಕಿತ್ತಾಟ, ಭೀಕರ ಹಿಂಸಾಚಾರ, 42 ಸಾವು

0
80

ಚಾಡ್: ನೀರಿನ ಮೂಲದ ಹಂಚಿಕೆ ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಡೆದ ಭೀಕರ ಸಂಘರ್ಷದಲ್ಲಿ ಕನಿಷ್ಠ 42 ಜನರು ಸಾವನ್ನಪ್ಪಿರುವ ಘಟನೆ ಸುಡಾನ್ ಗಡಿಯ ಬಳಿಯ ವಾಡಿ ಫಿರಾ ಪ್ರಾಂತ್ಯದಲ್ಲಿ ನಡೆದಿದೆ.

ನೆರೆಯ ಸುಡಾನ್‌ನಿಂದ ಲಕ್ಷಾಂತರ ನಿರಾಶ್ರಿತರು ಈ ಪ್ರದೇಶಕ್ಕೆ ವಲಸೆ ಬರುತ್ತಿರುವುದರಿಂದ ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಮೇಲೆ ತೀವ್ರ ಒತ್ತಡ ಉಂಟಾಗಿದೆ. ಇದೇ ಹಿನ್ನೆಲೆಯಲ್ಲಿ ಇಗೋಟೆ ಗ್ರಾಮದಲ್ಲಿ ನೀರಿನ ಪಾಯಿಂಟ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ಆರಂಭವಾಗಿ, ಅದು ಮಾರಾಮಾರಿ ಹಾಗೂ ಗುಂಡಿನ ಚಕಮಕಿಗೆ ಕಾರಣವಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

ಸೇನಾ ಹಸ್ತಕ್ಷೇಪ: ಘಟನೆಯಲ್ಲಿ ಕನಿಷ್ಠ 10 ಜನರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಸೇನೆಯು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದೆ. “ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಗ್ರಾಮದಲ್ಲಿ ಶಾಂತಿ ಮಾತುಕತೆ ಪ್ರಕ್ರಿಯೆ ಆರಂಭವಾಗಿದ್ದು, ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ಚಾಡನ ಉಪ ಪ್ರಧಾನಿ ಲಿಮಾನೆ ಮಹಾಮತ್ ತಿಳಿಸಿದ್ದಾರೆ.

ಸಂಪನ್ಮೂಲಕ್ಕಾಗಿ ಸಂಘರ್ಷ: ಮಧ್ಯ ಆಫ್ರಿಕಾದ ರಾಷ್ಟ್ರವಾದ ಚಾಡ್‌ನಲ್ಲಿ ಕೃಷಿಕರು ಮತ್ತು ಪಶುಪಾಲಕರ ನಡುವೆ ನೀರಿನ ಮೂಲ ಹಾಗೂ ಭೂಮಿಗಾಗಿ ಇಂತಹ ಸಂಘರ್ಷಗಳು ಸಾಮಾನ್ಯವಾಗಿದೆ. ಕಳೆದ ವರ್ಷವೂ ಇಂತಹುದೇ ಘಟನೆಯಲ್ಲಿ 42 ಜನರು ಪ್ರಾಣ ಕಳೆದುಕೊಂಡಿದ್ದರು. ಸುಡಾನ್‌ನಲ್ಲಿ ನಡೆಯುತ್ತಿರುವ ಆಂತರಿಕ ಯುದ್ಧದ ಹಿನ್ನೆಲೆಯಲ್ಲಿ ಚಾಡ್ ತನ್ನ ಗಡಿಯನ್ನು ಮುಚ್ಚಿದ್ದರೂ, ನಿರಾಶ್ರಿತರ ಆಗಮನ ಮತ್ತು ಸಂಪನ್ಮೂಲಗಳ ಕೊರತೆ ಗಡಿ ಭಾಗದಲ್ಲಿ ಆತಂಕದ ವಾತಾವರಣ ನಿರ್ಮಿಸಿದೆ. ಗಡಿ ಭಾಗದ ಸ್ಥಿರತೆಯನ್ನು ಕಾಪಾಡಲು ಸರಕಾರವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮಹಾಮತ್ ಭರವಸೆ ನೀಡಿದ್ದಾರೆ.