SK Home Ad
Home ಸುದ್ದಿ ವಿದೇಶ “ನಾವೆಲ್ಲರೂ ಸಾಯುತ್ತೇವೆ” ಎಂದು ಪ್ರವಚನ ನೀಡುತ್ತಿದ್ದ ಪಾದ್ರಿ ಮೇಲೆ ಬೃಹತ್ ಶಿಲುಬೆ ಬಿದ್ದು ಸಾವು: ಲೈವ್...

“ನಾವೆಲ್ಲರೂ ಸಾಯುತ್ತೇವೆ” ಎಂದು ಪ್ರವಚನ ನೀಡುತ್ತಿದ್ದ ಪಾದ್ರಿ ಮೇಲೆ ಬೃಹತ್ ಶಿಲುಬೆ ಬಿದ್ದು ಸಾವು: ಲೈವ್ ವಿಡಿಯೋ ವೈರಲ್!

0
93
“ಒಂದು ದಿನ ನಾವೆಲ್ಲರೂ ಸಾಯುತ್ತೇವೆ” ಎಂದ ಪಾದ್ರಿ; ಕೆಲವೇ ಕ್ಷಣಗಳಲ್ಲಿ ಶಿಲುಬೆ ಬಿದ್ದು ದುರಂತ

ಸಾವಿನ ಕುರಿತು ಮಾತನಾಡಿದ ಪಾದ್ರಿಯ ಮೇಲೆ ಬೃಹತ್ ಶಿಲುಬೆ ಬಿದ್ದು ಸಾವು: ವೈರಲ್ ಆಯ್ತು ಘಟನೆಯ ವಿಡಿಯೋ

ಗುವಾಯಾಕ್ವಿಲ್: ಚರ್ಚ್‌ನಲ್ಲಿ ಪ್ರಾರ್ಥನಾ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಗೋಡೆಗೆ ಅಳವಡಿಸಿದ್ದ ಬೃಹತ್ ಶಿಲುಬೆ ಮೈಮೇಲೆ ಬಿದ್ದು 53 ವರ್ಷದ ಪಾದ್ರಿಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಈಕ್ವೆಡಾರ್‌ನಲ್ಲಿ ನಡೆದಿದೆ. ಪ್ಯಾಟ್ರಿಸಿಯೊ ಆಲ್ಫ್ರೆಡೊ ಸ್ಯಾಂಚೆಜ್ ಮೊಲಿನಾರಿ (Patricio Alfredo Sánchez Molinari) ಮೃತಪಟ್ಟ ಪಾದ್ರಿಯಾಗಿದ್ದು, ಘಟನೆ ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರವಾಗುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದೆ. ಈ ವಿಡಿಯೋ ಸಾಮಾಜಿಕಜಾಲತಾಣದಲ್ಲಿ ವೈರಲ್‌ ಆಗಿದೆ.

ಈಕ್ವೆಡಾರ್‌ನ ಗುವಾಯಾಕ್ವಿಲ್ ನಗರದ ಅವರ್ ಲೇಡಿ ಆಫ್ ಪರ್ಪೆಚುವಲ್ ಹೆಲ್ಪ್ ಚರ್ಚ್‌ನಲ್ಲಿ ಅಕ್ಟೋಬರ್ 17ರ ರಾತ್ರಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿತ್ತು. ಪಾದ್ರಿ ಸ್ಯಾಂಚೆಜ್ ಅವರು ಬಲಿಪೀಠದ ಬಳಿ ನಿಂತು ಪ್ರಾರ್ಥನೆ ನಡೆಸುತ್ತಿದ್ದಾಗ, ಅವರ ಹಿಂದಿನ ಗೋಡೆಗೆ ಅಳವಡಿಸಲಾಗಿದ್ದ ಭಾರವಾದ ಮರದ ಶಿಲುಬೆ ಏಕಾಏಕಿ ಕಳಚಿ ಅವರ ತಲೆಯ ಮೇಲೆ ಬಿದ್ದಿದೆ. ಈ ಆಘಾತಕಾರಿ ಘಟನೆಯಿಂದ ಚರ್ಚ್‌ನಲ್ಲಿದ್ದ ಭಕ್ತರು ಕಂಗಾಲಾಗಿದ್ದು, ತಕ್ಷಣವೇ ನೆರವಿಗೆ ಧಾವಿಸಿ ಆಂಬುಲೆನ್ಸ್‌ಗೆ ಕರೆ ಮಾಡುವಂತೆ ಕೂಗಿದ್ದಾರೆ. ಆದರೆ, ಪಾದ್ರಿ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸಾವಿನ ಕುರಿತು ಮಾತನಾಡಿದ ಕೆಲವೇ ಕ್ಷಣಗಳಲ್ಲಿ ದುರಂತ : ವರದಿಗಳ ಪ್ರಕಾರ, ಪ್ರಾರ್ಥನೆಯ ಸಂದರ್ಭದಲ್ಲಿ ಪಾದ್ರಿ ಸ್ಯಾಂಚೆಜ್ ಅವರು ಜೀವನದ ಅನಿಶ್ಚಿತತೆ ಮತ್ತು ದೇವರೊಂದಿಗೆ ಕಳೆಯುವ ಸಮಯದ ಮಹತ್ವದ ಕುರಿತು ಮಾತನಾಡಿದ್ದರು. “ಒಂದು ದಿನ, ಇಲ್ಲಿರುವ ನಾವೆಲ್ಲರೂ ಸಾಯುತ್ತೇವೆ” ಎಂಬ ಅರ್ಥದ ಮಾತುಗಳನ್ನು ಅವರು ಹೇಳಿದ್ದರು ಎಂದು ವರದಿಯಾಗಿದೆ. ಜೀವನದಲ್ಲಿ ದೇವರು, ಕುಟುಂಬ ಮತ್ತು ಆತ್ಮೀಯರೊಂದಿಗೆ ಕಳೆಯುವ ಸಮಯಕ್ಕೆ ಮಹತ್ವ ನೀಡಬೇಕು ಎಂಬ ಸಂದೇಶವನ್ನೂ ಅವರು ಹಂಚಿಕೊಂಡಿದ್ದರು.

ಈ ಮಾತುಗಳ ನಂತರ ಕೆಲವೇ ಕ್ಷಣಗಳಲ್ಲಿ ಶಿಲುಬೆ ಅವರ ಮೇಲೆ ಬಿದ್ದಿರುವುದು ಘಟನೆಯ ದುರಂತವನ್ನು ಮತ್ತಷ್ಟು ಮನಕಲಕುವಂತೆ ಮಾಡಿದೆ. ಪ್ರಾರ್ಥನೆಯ ನೇರ ಪ್ರಸಾರದ ವೇಳೆ ಸೆರೆಯಾದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಧರ್ಮಪ್ರಾಂತ್ಯದಿಂದ ಸಂತಾಪ : ಪಾದ್ರಿ ಸ್ಯಾಂಚೆಜ್ ಅವರ ನಿಧನವನ್ನು ಗುವಾಯಾಕ್ವಿಲ್ ಧರ್ಮಪ್ರಾಂತ್ಯ ದೃಢಪಡಿಸಿದ್ದು, ಅವರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಿದೆ. ಅವರು ರೆಡೆಂಪ್ಟರಿಸ್ಟ್‌ಗಳೆಂದು ಕರೆಯಲ್ಪಡುವ ಕ್ಯಾಥೋಲಿಕ್ ಧಾರ್ಮಿಕ ಸಂಘಟನೆಯ ಸದಸ್ಯರಾಗಿದ್ದರು. ಅವರ ನಿಧನದಿಂದ ಸ್ಥಳೀಯ ಧಾರ್ಮಿಕ ಸಮುದಾಯದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.

ಶಿಲುಬೆ ಬಿದ್ದಿದ್ದೇಕೆ? : ಶಿಲುಬೆ ಗೋಡೆಯಿಂದ ಕಳಚಿ ಬೀಳಲು ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಳವಡಿಕೆಯ ದೋಷ ಅಥವಾ ಕಟ್ಟಡದ ಸ್ಥಿತಿಗೆ ಸಂಬಂಧಿಸಿದ ಸಮಸ್ಯೆ ಇದೆಯೇ ಎಂಬ ಬಗ್ಗೆ ಅಧಿಕೃತವಾಗಿ ದೃಢಪಟ್ಟ ಮಾಹಿತಿ ಲಭ್ಯವಿಲ್ಲ. ಘಟನೆಯ ಕಾರಣ ಪತ್ತೆಹಚ್ಚಲು ತನಿಖೆ ನಡೆಯುತ್ತಿರುವುದಾಗಿ ವರದಿಯಾಗಿದೆ.

ಧಾರ್ಮಿಕ ಕಾರ್ಯಕ್ರಮದ ವೇಳೆ ನಡೆದ ಈ ದುರಂತವು ಸ್ಥಳೀಯರನ್ನು ಮಾತ್ರವಲ್ಲದೆ, ವಿಡಿಯೋ ವೀಕ್ಷಿಸಿದವರನ್ನೂ ಬೆಚ್ಚಿಬೀಳಿಸಿದೆ.