ಕೊಪ್ಪಳ: ಸಮಾಜವನ್ನು ತಿದ್ದಿ ತೀಡಬೇಕಾದ, ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕಾದ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಆದರೆ, ಇಲ್ಲೊಬ್ಬ ಕಾಮಪಿಶಾಚಿ ಶಿಕ್ಷಕ ತನ್ನ ಸ್ವಂತ ಅತ್ತೆ ಮಗಳನ್ನೇ ನಂಬಿಸಿ, ಐದು ವರ್ಷಗಳ ಕಾಲ ದೈಹಿಕವಾಗಿ ಬಳಸಿಕೊಂಡು, ಕೊನೆಗೆ ನಡುನೀರಲ್ಲಿ ಕೈಬಿಟ್ಟಿರುವ ಅಮಾನುಷ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ವರದಿಯಾಗಿದೆ. ‘ಗುರುವೇ ದೇವ’ ಎಂಬ ಮಾತಿಗೆ ಕಳಂಕ ತಂದಿರುವ ಈ ಸರ್ಕಾರಿ ಶಿಕ್ಷಕನ ನೈತಿಕ ಅಧಃಪತನ ಸಮಾಜವನ್ನೇ ಬೆಚ್ಚಿಬೀಳಿಸಿದೆ.
ನಂಬಿಸಿ ಕತ್ತು ಕುಯ್ದ ಕಾಮಪಿಶಾಚಿ: ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಕನ್ನೇರಮಡು ಗ್ರಾಮದ ಸರ್ಕಾರಿ ಶಿಕ್ಷಕ ಬಸವರಾಜ ಹರಿಜನ್ ಎಂಬಾತನೇ ಈ ವಂಚಕ. ಹುಲಸನಟ್ಟಿ ಮೂಲದ ಕರೆಮ್ಮಾ ಎಂಬ ಯುವತಿ ಕೊಪ್ಪಳದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದಾಗಿನಿಂದಲೂ, ಆಕೆಯೊಂದಿಗೆ ಬಸವರಾಜನ ಸಂಪರ್ಕವಿತ್ತು. ಸ್ವಂತ ಅತ್ತೆಯ ಮಗ, ಮೇಲಾಗಿ ಸರ್ಕಾರಿ ಶಿಕ್ಷಕ ಎಂಬ ಕಾರಣಕ್ಕೆ ಕರೆಮ್ಮಾ ಆತನನ್ನು ಕುರುಡಾಗಿ ನಂಬಿದ್ದಳು. “ನನಗೆ ಸರ್ಕಾರಿ ನೌಕರಿ ಕಾಯಂ ಆದ ತಕ್ಷಣ ನಿನ್ನನ್ನೇ ಮದುವೆಯಾಗುತ್ತೇನೆ” ಎಂದು ನಂಬಿಸಿದ ಬಸವರಾಜ, ಸತತ ಐದು ವರ್ಷಗಳ ಕಾಲ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ.
ನಿಶ್ಚಿತಾರ್ಥದ ನಂತರ ಬದಲಾದ ರಾಗ: ಯುವತಿಯ ಮನೆಯವರು ಮದುವೆಗೆ ಒತ್ತಾಯಿಸಿದಾಗ, ಎರಡೂ ಕುಟುಂಬಗಳ ಹಿರಿಯರ ಸಮ್ಮುಖದಲ್ಲಿಯೇ ಕನ್ನೇರಮಡುವಿನಲ್ಲಿ ಅದ್ದೂರಿಯಾಗಿ ಇಬ್ಬರ ನಿಶ್ಚಿತಾರ್ಥ ಕೂಡ ನಡೆದಿತ್ತು. ಆದರೆ, ಸರ್ಕಾರಿ ಶಿಕ್ಷಕನ ಹುದ್ದೆ ಖಾಯಂ ಆಗುತ್ತಿದ್ದಂತೆ ಬಸವರಾಜನ ಅಸಲಿ ಬಣ್ಣ ಬಯಲಾಗತೊಡಗಿತು. ಪ್ರೀತಿಸಿ, ನಿಶ್ಚಿತಾರ್ಥ ಮಾಡಿಕೊಂಡಿದ್ದ ಅತ್ತೆ ಮಗಳನ್ನು ದಿಢೀರನೆ ಕಡೆಗಣಿಸಲು ಆರಂಭಿಸಿದ ಆತ, ಗುಟ್ಟಾಗಿ ರತ್ನವ್ವ ಎಂಬ ಬೇರೊಬ್ಬ ಯುವತಿಯ ಕೊರಳಿಗೆ ತಾಳಿ ಕಟ್ಟಿದ್ದಾನೆ.
ಬಸವರಾಜನ ವಿಕೃತಿ ಕೇವಲ ಬೇರೊಂದು ಮದುವೆಯಾಗುವುದಕ್ಕಷ್ಟೇ ಸೀಮಿತವಾಗಲಿಲ್ಲ. ತಾನು ರತ್ನವ್ವಳೊಂದಿಗೆ ಮಾಡಿಕೊಂಡ ವಿವಾಹದ ‘ಮ್ಯಾರೇಜ್ ರಿಜಿಸ್ಟ್ರೇಷನ್’ (Marriage Registration) ಪತ್ರವನ್ನು ಉದ್ದೇಶಪೂರ್ವಕವಾಗಿ ಸಂತ್ರಸ್ತ ಕರೆಮ್ಮಾಳ ಮನೆಗೆ ಪಾರ್ಸೆಲ್ ಮೂಲಕ ಕಳುಹಿಸಿದ್ದಾನೆ. ಇದರಿಂದ ತೀವ್ರ ಆಘಾತಕ್ಕೊಳಗಾದ ಯುವತಿ ಮತ್ತು ಆಕೆಯ ಕುಟುಂಬ ಕಣ್ಣೀರಿಡುತ್ತಾ ನ್ಯಾಯಕ್ಕಾಗಿ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಐದು ವರ್ಷಗಳ ಕಾಲ ಪ್ರೀತಿಯ ನಾಟಕವಾಡಿ, ದೈಹಿಕವಾಗಿ ಬಳಸಿಕೊಂಡು, ನಿಶ್ಚಿತಾರ್ಥದ ನಂತರ ಬೇರೊಂದು ಮದುವೆಯಾಗಿರುವ ಈ ಶಿಕ್ಷಕನ ವಿರುದ್ಧ ಪೊಲೀಸರು ವಂಚನೆ ಹಾಗೂ ಅತ್ಯಾಚಾರದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.























