ಇಂದು ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಹಣಾಹಣಿ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿತು. ಟಾಸ್ ಗೆದ್ದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡರು. ಆರಂಭದಲ್ಲಿ ಪತುಮ್ ನಿಸ್ಸಾಂಕ ಮತ್ತು ಕೆ.ಎಲ್. ರಾಹುಲ್ ಜೋಡಿ ಬಿರುಸಿನ ಆರಂಭ ನೀಡಿತು. ರಾಹುಲ್ ಕೇವಲ 12 ರನ್ ಗಳಿಸಿದ್ದಾಗ ಪಂಜಾಬ್ ತಂಡ ಅವರಿಗೆ ಒಂದು ಜೀವದಾನ ನೀಡಿತು, ಅದು ಮುಂದೆ ತಂಡಕ್ಕೆ ಎಷ್ಟು ದೊಡ್ಡ ಹೊರೆಯಾಗಲಿದೆ ಎಂದು ಪಂಜಾಬ್‌ಗೆ ತಿಳಿದಿರಲಿಲ್ಲ. ಅದೇ ಓವರ್‌ನಲ್ಲಿ ಅರ್ಶದೀಪ್ ಸಿಂಗ್ ನಿಸ್ಸಾಂಕ ಅವರನ್ನು 11 ರನ್‌ಗಳಿಗೆ ಔಟ್ ಮಾಡುವ ಮೂಲಕ ಮೊದಲ ಯಶಸ್ಸು ತಂದುಕೊಟ್ಟರು.
ಆದರೆ ಅಲ್ಲಿಂದ ಶುರುವಾಗಿದ್ದೇ ಅಸಲಿ ಆಟ, ಕೆ.ಎಲ್. ರಾಹುಲ್ ಮತ್ತು ನಿತೀಶ್ ರಾಣಾ ಪಂಜಾಬ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ರಾಹುಲ್ ತಮ್ಮ ಐಪಿಎಲ್ ವೃತ್ತಿಜೀವನದ 6ನೇ ಭರ್ಜರಿ ಶತಕ ಸಿಡಿಸಿ ಮಿಂಚಿದರೆ, ಅವರಿಗೆ ಸಾಟಿಯಿಲ್ಲದ ಸಾಥ್ ನೀಡಿದ ನಿತೀಶ್ ರಾಣಾ ಅಕ್ಷರಶಃ ಪಂಜಾಬ್ ಕ್ಯಾಂಪ್‌ನಲ್ಲಿ ನಡುಕ ಹುಟ್ಟಿಸಿದರು. ಈ ಜೋಡಿ ಎರಡನೇ ವಿಕೆಟ್‌ಗೆ ಬರೋಬ್ಬರಿ 220 ರನ್‌ಗಳ ದಾಖಲೆಯ ಜೊತೆಯಾಟವನ್ನು ನಿರ್ಮಿಸಿ ಇತಿಹಾಸ ಬರೆಯಿತು.
ಇದನ್ನು ಓದಿ: http://152 ರನ್ ಬಾರಿಸಿದ ಕನ್ನಡಿಗ K.L ರಾಹುಲ್ ಭರ್ಜರಿ ಬ್ಯಾಟಿಂಗ್; IPL ಇತಿಹಾಸದಲ್ಲೇ ಹೊಸ ಮೈಲಿಗಲ್ಲು
ಎಲ್ಲರೂ ನಿತೀಶ್ ರಾಣಾ ಅವರ ಚೊಚ್ಚಲ ಐಪಿಎಲ್ ಶತಕಕ್ಕಾಗಿ ಕಾಯುತ್ತಿದ್ದಾಗ, ಪಂದ್ಯದ ಅತಿ ದೊಡ್ಡ ಟ್ವಿಸ್ಟ್ ಎದುರಾಯಿತು. 91 ರನ್ ಗಳಿಸಿ ಅಬ್ಬರಿಸುತ್ತಿದ್ದ ರಾಣಾ ಅವರು ಹೊಡೆದ ಒಂದು ಭೀಕರ ಶಾಟ್ ಅನ್ನು ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಅವರು ಗಾಳಿಯಲ್ಲಿ ನೆಗೆದು ಅತ್ಯಂತ ಅದ್ಭುತವಾದ ಏಕೈಕ ಕೈಯ ಕ್ಯಾಚ್ ಮೂಲಕ ಹಿಡಿದರು. ಈ ಅದ್ಭುತ ಕ್ಯಾಚ್ ರಾಣಾ ಅವರ ಮನಮೋಹಕ ಇನಿಂಗ್ಸ್‌ಗೆ ತೆರೆ ಎಳೆಯಿತು. ಶತಕದ ಹೊಸ್ತಿಲಲ್ಲಿ ರಾಣಾ ಔಟ್ ಆಗಿದ್ದು ಅಭಿಮಾನಿಗಳಿಗೆ ನಿರಾಸೆ ತಂದರೂ, ಶ್ರೇಯಸ್ ಅಯ್ಯರ್ ಅವರ ಆ ಒಂದು ಕೈಯ ಅದ್ಭುತ ಕ್ಯಾಚ್ ಮಾತ್ರ ಪಂದ್ಯದ ಹೈಲೈಟ್ ಆಗಿ ಉಳಿಯಿತು. ನಿತೀಶ್ 44 ಎಸೆತಗಳಲ್ಲಿ 91 ರನ್ ಗಳಿಸಿ ಔಟಾದರು. ದೆಹಲಿಯ ಎರಡನೇ ವಿಕೆಟ್ ಪತನಗೊಂಡಿದೆ. ನಿತೀಶ್ ಮತ್ತು ರಾಹುಲ್ ಎರಡನೇ ವಿಕೆಟ್‌ಗೆ 220 ರನ್ ಸೇರಿಸಿದರು.
ಇನ್ನು ಕೆ. ಎಲ್ ರಾಹುಲ್ 67 ಎಸತಗಳಿಗೆ 152 ರನ್ ಗಳಿಸಿದ್ದಾರೆ. ಸ್ವತಃ ರಾಹುಲ್ ಈ ಸಂಭ್ರಮವನ್ನು ‘ಶಿಳ್ಳೆ’ ಹೊಡೆಯುವುದರ ಮೂಲಕ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. 9 ಸಿಕ್ಸರ್, 16 ಬೌಂಡರಿ, ಕೆ. ಎಲ್ ರಾಹುಲ್ ಐಪಿಎಲ್ ಇತಿಹಾಸದಲ್ಲೇ ಕನ್ನಡಿಗನ ದಾಖಲೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ದೆಹಲಿ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 264 ರನ್ ಗಳಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಈ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಈಗ ಪಂಜಾಬ್ ತಂಡದ ಮುಂದೆ ಬೆಟ್ಟದಂತಹ ಗುರಿಯನ್ನು ನೀಡಿದೆ.























