SK Home Ad
Home ನಮ್ಮ ಜಿಲ್ಲೆ ಭೋಪಾಲ್ ‘ಗೋಹತ್ಯೆ’ ಪ್ರಕರಣ: ಸಾಕ್ಷ್ಯಗಳ ಕೊರತೆ ಮತ್ತು ತನಿಖಾ ವೈಫಲ್ಯದ ನಡುವೆ ರಹಸ್ಯ ಬಯಲು

ಭೋಪಾಲ್ ‘ಗೋಹತ್ಯೆ’ ಪ್ರಕರಣ: ಸಾಕ್ಷ್ಯಗಳ ಕೊರತೆ ಮತ್ತು ತನಿಖಾ ವೈಫಲ್ಯದ ನಡುವೆ ರಹಸ್ಯ ಬಯಲು

0
176

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಸಂಚಲನ ಮೂಡಿಸಿದ್ದ ಕಸಾಯಿಖಾನೆ ಗೋಹತ್ಯೆ ಪ್ರಕರಣವು ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಸಾಕ್ಷ್ಯಾಧಾರಗಳ ಕೊರತೆ ಮತ್ತು ತನಿಖಾ ಲೋಪದೋಷಗಳಿಂದಾಗಿ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಡೆಯುತ್ತಿದ್ದ ಕಸಾಯಿಖಾನೆಯಲ್ಲಿ ಹಸುಗಳನ್ನು ವಧೆ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಕಳೆದ ಡಿಸೆಂಬರ್‌ನಲ್ಲಿ ಪೊಲೀಸರು 26.5 ಟನ್ ಮಾಂಸವನ್ನು ವಶಪಡಿಸಿಕೊಂಡಿದ್ದರು.

ನಂತರ ಡಿಸೆಂಬರ್ 17, 2025 ರಂದು ‘ಮಾ ಭವಾನಿ’ ಸಂಘಟನೆಯ ದೂರಿನ ಮೇರೆಗೆ ಜಿನ್ಸಿ ಪ್ರದೇಶದ ಕಸಾಯಿಖಾನೆಯಿಂದ ಮುಂಬೈಗೆ ತೆರಳುತ್ತಿದ್ದ ಟ್ರಕ್‌ನ್ನು ತಡೆದ ಪೊಲೀಸರು, ಹಸುವಿನ ಮಾಂಸ ಸಾಗಾಟದ ಶಂಕೆಯ ಮೇಲೆ ಚಾಲಕ ಮೊಹಮ್ಮದ್ ಶೋಯೆಬ್ ಮತ್ತು ಮಾಲೀಕ ಅಸ್ಲಂ ಖುರೇಷಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿತ್ತು. ಮಥುರಾ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದ ಪ್ರಾಥಮಿಕ ಮಾದರಿಗಳಿಂದ ಸಾಗಾಣಿಕೆಯಾಗುತ್ತಿರುವುದು ‘ಗೋಮಾಂಸ’ ಎಂದು ದೃಢಪಡಿಸಿದ್ದರು.

ಸಿಸಿಟಿವಿ ಪುರಾವೆ: ಪೊಲೀಸರು ಕಸಾಯಿಖಾನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅಲ್ಲಿ ಕೇವಲ ಎಮ್ಮೆಗಳನ್ನು ಮಾತ್ರ ವಧೆ ಮಾಡುತ್ತಿರುವುದು ಕಂಡುಬಂದಿದೆ. ಯಾವುದೇ ಹಸುಗಳು ದೃಶ್ಯದಲ್ಲಿ ಇರಲಿಲ್ಲ. ಆದ್ರೆ ಡಿವಿಆರ್‌ನಲ್ಲಿ ಹಿಂದಿನ ದೃಶ್ಯಗಳು ಅಳಿಸಿಹೋಗಿರುವುದು ತಿರುಚುವಿಕೆಯ ಸಂಶಯವನ್ನು ಹುಟ್ಟುಹಾಕಿತ್ತು.

ಕೊಳೆತ ಮಾದರಿಗಳು: ಎರಡನೇ ಹಂತದ ಡಿಎನ್‌ಎ ಪರೀಕ್ಷೆಗಾಗಿ ಹೈದರಾಬಾದ್‌ಗೆ ಕಳುಹಿಸಲಾದ ಮಾದರಿಗಳು ಅಲ್ಲಿಗೆ ತಲುಪುವಷ್ಟರಲ್ಲಿ ಸಂಪೂರ್ಣವಾಗಿ ಕೊಳೆತು ಹೋಗಿದ್ದವು. ಹೀಗಾಗಿ ಅದು ಹಸುವಿನ ಮಾಂಸವೇ ಅಥವಾ ಎಮ್ಮೆಯದ್ದೇ ಎಂದು ಖಚಿತಪಡಿಸಲು ಸಾಧ್ಯವಾಗಲಿಲ್ಲ.

ಮುರಿದ ಕಸ್ಟಡಿ ಸರಪಳಿ: ವಶಪಡಿಸಿಕೊಳ್ಳಲಾಗಿದ್ದ 26.5 ಟನ್ ಮಾಂಸವನ್ನು ಪೊಲೀಸರು ಬಿಎಂಸಿ ಅಧಿಕಾರಿಗಳ ಮೂಲಕ ಪುನಃ ಆರೋಪಿಗಳ ವಶಕ್ಕೆ ನೀಡಿದ್ದರು. ನಂತರ ಮುಂಬೈನಲ್ಲಿ ಈ ಮಾಂಸವನ್ನು ಪತ್ತೆಹಚ್ಚಿದರೂ, ಅದು ಈಗಾಗಲೇ ಆರೋಪಿಗಳ ವಶದಲ್ಲಿದ್ದ ಕಾರಣ ವಿಶ್ವಾಸಾರ್ಹತೆಯನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸುವುದು ಕಷ್ಟಕರವಾಗಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ಸದ್ಯ ಆರೋಪಿಗಳು ದಾಖಲೆಗಳನ್ನು ನಾಶಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಎಮ್ಮೆ ಮಾಂಸದ ಹೆಸರಿನಲ್ಲಿ ಗೋಮಾಂಸ ರಫ್ತು ಮಾಡುವ ಪಿತೂರಿ ನಡೆಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಆದ್ರೆ ವೈಜ್ಞಾನಿಕ ಪುರಾವೆಗಳ ವೈಫಲ್ಯ ಮತ್ತು ‘ಕಸ್ಟಡಿ ಸರಪಳಿ’ ಮುರಿದುಹೋಗಿರುವುದು ಪ್ರಕರಣದ ತನಿಖೆಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಪ್ರಸ್ತುತ ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.