ಮೈಸೂರು: ಎಲ್ಲ ವೇಳೆಯಲ್ಲಿಯೂ ಒಂದೇ ರೀತಿ ಬಿಗಿಯಾಗಿ ರಾಜಕಾರಣ ಮಾಡಲು ಆಗಲ್ಲ. ಸಿಎಂ ಈಗ ಕಾಂಪ್ರಮೈಸ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಪ್ರಮೈಸ್ ಪಾಲಿಟಿಕ್ಸ್ ಈಗ ಅನಿವಾರ್ಯವಾಗಿದೆ. ಎಲ್ಲ ಸಮಯದಲ್ಲಿ ಬಿಗಿಯಾಗಿ ರಾಜಕಾರಣ ಮಾಡಲು ಆಗಲ್ಲ. ಕಾಂಪ್ರಮೈಸ್ ಅನಿವಾರ್ಯ ಎಂದರು.
ನೋಟಿಸ್ ನಿಲ್ಲಿಸಿ: ದಾವಣಗೆರೆ ಉಪಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮುಸ್ಲಿಂ ನಾಯಕರಿಗೆ ನೋಟಿಸ್ ಕೊಡುವುದನ್ನ ಮೊದಲು ನಿಲ್ಲಿಸಿ ಫಲಿತಾಂಶ ಬರುವವರೆಗೂ ಕಾಯಬೇಕು. ಫಲಿತಾಂಶ ಬರುವ ಮುನ್ನವೇ ನೋಟಿಸ್ ಕೊಡುವುದು ಸಸ್ಪೆಂಡ್ ಮಾಡುವುದು ಸರಿಯಲ್ಲ. ಇದು ಮುಸ್ಲಿಂ ಮತ ಬ್ಯಾಂಕ್ ಮೇಲೆ ಪರಿಣಾಮ ಬೀರಲಿದೆ. ಯಾರದ್ದೇ ತಪ್ಪಾಗಿದ್ದರೂ ಆಮೇಲೆ ಕ್ರಮ ಕೈಗೊಳ್ಳಬೇಕೆ ಹೊರತು ಈಗಲೇ ಕ್ರಮಗಳು ಸರಿಯಲ್ಲ ಎಂದು ಹೇಳಿದ್ದೇನೆ. ಯಾರ‍್ಯಾರು ಪಕ್ಷ ವಿರೋಧಿ ಚಟುವಟಿಕೆ ಮಾಡಿದರು ಯಾವ ರೀತಿ ಮಾಡಿದರು ಎಂಬ ಬಗ್ಗೆ ಚರ್ಚೆ ಮಾಡುವ ಸಮಯ ಅಲ್ಲ. ಮೊದಲು ಫಲಿತಾಂಶ ಬರಲಿ ಎಂದು ಹೇಳಿದರು.
ಅಮಾನತು ತೆರವು ಸುಳಿವು: ವಿಧಾನ ಪರಿಷತ್ ಸದಸ್ಯ ಜಬ್ಬಾರ್ ಅಮಾನತು ತೆರುವಾಗುವ ಸುಳಿವನ್ನು ಸಚಿವರು ನೀಡಿದರು. ನಮ್ಮಲ್ಲಿ ಬಹಳಷ್ಟು ಜನ ಸಸ್ಪೆಂಡ್ ಆದವರು ಮತ್ತೆ ವಾಪಸ್ ಬಂದಿದ್ದಾರೆ. ಜಬ್ಬಾರ್ ಕೂಡ ವಾಪಸ್ ಬರುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.






















