ಬೆಳಗಾವಿ: ನಗರದ ಹೊರವಲಯದಲ್ಲಿ ಶೀಘ್ರದಲ್ಲೇ ತಿರುಮಲ ತಿರುಪತಿ ದೇವಸ್ಥಾನದ ಮಾದರಿಯ ಭವ್ಯ ವೆಂಕಟೇಶ್ವರ ದೇವಾಲಯ ತಲೆಎತ್ತಲಿದ್ದು, ಈ ಮಹತ್ವಾಕಾಂಕ್ಷಿ ಯೋಜನೆಗೆ ಮಂಗಳವಾರ ಮೊದಲ ಅಧಿಕೃತ ಹೆಜ್ಜೆ ಇಡಲಾಗಿದೆ.
ಸದಾಶಿವನಗರದ ರೆಡ್ಡಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗಾವಿ ರೆಡ್ಡಿ ಸಂಘವು ದೇವಾಲಯ ನಿರ್ಮಾಣಕ್ಕಾಗಿ ಸುಮಾರು ಏಳು ಎಕರೆ ಭೂಮಿಯನ್ನು ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿಗೆ (ಟಿಟಿಡಿ) ಹಸ್ತಾಂತರಿಸಿತು.
ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ದೇವಾಲಯ ನಿರ್ಮಾಣದ ರೂಪರೇಷೆ, ಅನುದಾನ ಹಂಚಿಕೆ ಮತ್ತು ಭಕ್ತರಿಗೆ ಕಲ್ಪಿಸಲಾಗುವ ಸೌಲಭ್ಯಗಳ ಕುರಿತು ಮಹತ್ವದ ಮಾಹಿತಿ ಹಂಚಿಕೊಳ್ಳಲಾಯಿತು.
ಟಿಟಿಡಿ ಆಡಳಿತ ಮಂಡಳಿಯ ಸದಸ್ಯ ಎಸ್. ನರೇಶ್ ಕುಮಾರ್ ಮಾತನಾಡಿ, ದೇವಾಲಯ ನಿರ್ಮಾಣಕ್ಕಾಗಿ ಬೆಳಗಾವಿ ರೆಡ್ಡಿ ಸಂಘವು ಸದಭಿಪ್ರಾಯದಿಂದ ಭೂಮಿ ಹಸ್ತಾಂತರ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದರು.
ಮುಂದಿನ ಎರಡು ವರ್ಷಗಳಲ್ಲಿ ಸುಮಾರು ₹100 ಕೋಟಿ ವೆಚ್ಚದಲ್ಲಿ ಈ ದೇವಾಲಯ ನಿರ್ಮಾಣಗೊಳ್ಳಲಿದ್ದು, ಇದರಲ್ಲಿ ಶೇ. 80ರಷ್ಟು ಅನುದಾನವನ್ನು ಟಿಟಿಡಿ, ಶೇ. 10ರಷ್ಟು ರೆಡ್ಡಿ ಸಂಘ, ಹಾಗೂ ಉಳಿದ ಶೇ. 10ರಷ್ಟು ಮೊತ್ತವನ್ನು ದಾನಿಗಳಿಂದ ಸಂಗ್ರಹಿಸಲಾಗುವುದು ಎಂದು ವಿವರಿಸಿದರು.
ಮೂರು ರಾಜ್ಯಗಳ ಸಂಗಮ ಪ್ರದೇಶವಾಗಿರುವ ಬೆಳಗಾವಿ ನಗರದ ಹೊರವಲಯದಲ್ಲಿ ಈ ದೇವಾಲಯ ನಿರ್ಮಾಣವಾಗುತ್ತಿರುವುದು ಭಕ್ತರಿಗೆ ವಿಶೇಷ ಅನುಕೂಲ ತರಲಿದೆ. ತಿರುಪತಿಗೆ ತೆರಳುವ ಭಕ್ತರಿಗೆ ಮಾತ್ರವಲ್ಲದೆ, ಮಹಾರಾಷ್ಟ್ರದ ಕೊಲ್ಲಾಪುರ ಮಹಾಲಕ್ಷ್ಮೀ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಿಕರಿಗೂ ಇದು ಧಾರ್ಮಿಕ ಕೇಂದ್ರವಾಗಲಿದೆ ಎಂದು ಅವರು ಹೇಳಿದರು.
ತಿರುಪತಿ ಮಾದರಿಯ ಪೂಜೆ-ಕಾರ್ಯಕ್ರಮಗಳು: ತಿರುಪತಿಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳನ್ನು ಇದೇ ಮಾದರಿಯಲ್ಲಿ ಇಲ್ಲಿ ಕೂಡ ಆಯೋಜಿಸಲಾಗುವುದು. ಭಕ್ತರಿಗೆ ವಸತಿ, ಪ್ರಸಾದವಾಗಿ ಲಾಡು, ಧಾರ್ಮಿಕ ಸೇವೆಗಳು ಸೇರಿದಂತೆ ವಿವಿಧ ಸೌಲಭ್ಯಗಳು ಲಭ್ಯವಾಗಲಿವೆ ಎಂದು ಟಿಟಿಡಿ ಸದಸ್ಯರು ತಿಳಿಸಿದರು.
ಟಿಟಿಡಿ ಸಂಸ್ಥೆ ದೇಶದಾದ್ಯಂತ ದೇವಾಲಯಗಳ ನಿರ್ಮಾಣ ಹಾಗೂ ಪುನರುಜ್ಜೀವನಕ್ಕಾಗಿ ಸುಮಾರು ₹ 9,000 ಕೋಟಿ ಮೊತ್ತವನ್ನು ಮೀಸಲಿಟ್ಟಿದ್ದು, ಈಗಾಗಲೇ ದೇಶದ ಆರು ಕಡೆಗಳಲ್ಲಿ ಟಿಟಿಡಿ ದೇವಾಲಯಗಳು ಕಾರ್ಯನಿರ್ವಹಿಸುತ್ತಿವೆ ಎಂದೂ ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ರೆಡ್ಡಿ ಜನಸಂಘದ ಅಧ್ಯಕ್ಷ ಲಕ್ಷ್ಮಣ ರೆಡ್ಡಿ ಮಾತನಾಡಿ, ಬೆಳಗಾವಿಯಲ್ಲಿ ಟಿಟಿಡಿ ವತಿಯಿಂದ ದೇವಾಲಯ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಇದಕ್ಕಾಗಿ ಬೆಳಗಾವಿ ರೆಡ್ಡಿ ಸಂಘದ ಸಹಕಾರ ಮಹತ್ತರವಾಗಿದ್ದು, ಮುಂದೆಯೂ ಎಲ್ಲರ ಬೆಂಬಲ ಹೀಗೆ ಮುಂದುವರಿಯಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ರೆಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರ, ಉಪಾಧ್ಯಕ್ಷ ಕಾಂತು ಜಾಲಿಬೇರಿ, ವಿಕ್ರಂ ಜೈನ್, ಅವಿನಾಶ ಪೋತದಾರ, ಸುರೇಶ್ ದೇಸಾಯಿ, ಮಂಜುನಾಥ ಕೇಸೂರ, ಪ್ರಕಾಶ ಕಕರಡ್ಡಿ, ಡಾ. ಗಿರೀಶ ಸೋನವಾಲ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.























