ಹುಬ್ಬಳ್ಳಿ: ವಸಂತ ಋತುಗಾನಕ್ಕೆ ಮನಸೋತು ಕಲಾಯಾನದಲ್ಲಿ ವಿಹರಿಸಲು ಕ್ಷಣಗಣನೆ ಆರಂಭವಾಗಿದೆ. ಏಪ್ರಿಲ್ 17ರಂದು ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಆರಂಭವಾಗಲಿರುವ `ವಸಂತ ಋತುಗಾನ- ಕಲಾಯಾನ’ ಸಾಂಸ್ಕೃತಿಕ ಹಬ್ಬವು ಅವಳಿನಗರ ಇತ್ತೀಚಿನ ವರ್ಷಗಳಲ್ಲಿ ಕಂಡಿರದ ಭವ್ಯ ಕಲಾ ಸಂಗಮವಾಗಲಿದೆ.
ಇದರೊಟ್ಟಿಗೆ, ಖ್ಯಾತ ವಾಗ್ಮಿಗಳ ಮಾತಿಗೆ ಈ ಕಲೋತ್ಸವದಲ್ಲಿ ಬಹುಮುಖ್ಯ ಪ್ರಾಶಸ್ತ್ಯವಿದ್ದು, ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ, ಪ್ರಸಿದ್ಧ ಹೃದ್ರೋಗ ತಜ್ಞ ಹಾಗೂ ಸಂಸದ ಡಾ.ಸಿ.ಎನ್.ಮಂಜುನಾಥ (ಏ. 19ರಂದು) ಹಸನಾದ ಬದುಕಿನ ಬಗ್ಗೆ ಉಪನ್ಯಾಸ ನೀಡಲಿರುವುದು ಈ ಕಲಾಮೇಳದ ಬಹುದೊಡ್ಡ ವಿಶೇಷತೆ.
ನ್ಯಾಯ ಹಾಗೂ ಸರಳ- ಮೌಲ್ಯಯುತ ಬಾಳ್ವೆಯ ಮಹತ್ವಗಳ ಬಗ್ಗೆ ತುಂಬ ಆಳವಾಗಿ ಮನಮುಟ್ಟುವಂತೆ ಮಾತನಾಡುವ ನ್ಯಾ. ಶ್ರೀಶಾನಂದ ಈಗಾಗಲೇ ನಮ್ಮ ನಡುವಿನ ಪ್ರಖರ ವಾಗ್ಮಿ. ಅವರ ಮಾತುಗಳನ್ನು ಕೇಳುವುದಕ್ಕೆ ಜನತೆ ಹಾತೊರೆಯುತ್ತಿರುತ್ತಾರೆ. ಹೀಗಾಗಿಯೇ ಅವರ ಯೂ ಟ್ಯೂಬ್ ಪಾಡ್ಕಾಸ್ಟ್ಗಳು ಲಕ್ಷಾಂತರ ವೀಕ್ಷಣೆಗೆ ಒಳಗಾಗಿರುತ್ತವೆ.
ಈಗ ಪತ್ರಿಕೆಯು ನ್ಯಾಯಮೂರ್ತಿಗಳ ಮಾತನ್ನು ಖುದ್ದಾಗಿ ಕೇಳುವ ದೊಡ್ಡ ವೇದಿಕೆ ಸಿದ್ಧಪಡಿಸಿದೆ. ಮರೆಯದೇ ದಿನಾಂಕ ಗುರುತು ಹಾಕಿಕೊಂಡು ಬಂದು ಕೇಳಿ. ನಿಮ್ಮ ಸ್ನೇಹಿತರು ಹಾಗೂ ಬಂಧು ಬಾಂಧವರನ್ನೂ ಕರೆತನ್ನಿ. ಇದೇ ರೀತಿ ಡಾ. ಸಿ.ಎನ್.ಮಂಜುನಾಥ ನೀಡುವ ಆರೋಗ್ಯದ ಟಿಪ್ಸ್ಗಳು ಹಾಗೂ ಅವರ ಆಕರ್ಷಕ ಮಾತುಗಳಿಗೂ ಲಕ್ಷಾಂತರ ವೀಕ್ಷಣೆಗಳು ಸಾಮಾಜಿಕ ಮಾಧ್ಯಮಗಳಲ್ಲಿರುತ್ತವೆ.
ಅತ್ಯಾಕರ್ಷಕವಾಗಿ ಜನರನ್ನು ಹಿಡಿದಿಟ್ಟುಕೊಳ್ಳುವಂತೆ ಮಾತನಾಡುವ ಮಂಜುನಾಥ ಮಾತುಗಳನ್ನು ನಿಮ್ಮ ಮನೆ ಬಾಗಿಲಲ್ಲೇ ಖುದ್ದಾಗಿ ಕೇಳುವ ಅವಕಾಶ ಈಗ ಬಂದಿದೆ. ಇಂತಹ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಹಿಮೊಫಿಲಿಯಾ ಕುರಿತ ಸೇವೆಗೆ ಪದ್ಮಶ್ರಿ ಘೋಷಿತವಾಗಿರುವ ಡಾ.ಸುರೇಶ್ ಹನಗವಾಡಿ ಅವರ ಭಾಷಣ ಕೂಡ ಏಪ್ರಿಲ್ 19ರಂದೇ ಇದೆ. ಇದನ್ನು ತಪ್ಪಿಸಿಕೊಂಡರೆ ನೀವು ಒಂದು ಒಳ್ಳೆಯ ವಿಷಯ ತಜ್ಞರ ಮಾತುಗಳಿಂದ ವಂಚಿತರಾದಂತೆ ಎಂಬುದು ನೆನಪಿರಲಿ.
ಉದ್ಘಾಟನೆಯ ದಿನ (ಏ. 17) ಕನ್ನಡ ಸಂಸ್ಕೃತಿ ಹಾಗೂ ಕವಿ ಕಾವ್ಯ ಪರಂಪರೆ ಕುರಿತು ಹಿರಿಯ ಶಿಕ್ಷಣ ತಜ್ಞರಾದ ಸುರೇಶ ಕುಲಕರ್ಣಿ ಮಾತನಾಡಲಿರುವುದು ಎಲ್ಲರಿಗೂ ಅಪರೂಪದ ಕ್ಷಣವಾಗಲಿದೆ. ಯುವ ತಲೆಮಾರು, ವಿಶೇಷವಾಗಿ ಮಕ್ಕಳಿಗೆ ಚಿತ್ರಗಳ ಮೂಲಕ ಸಂಸ್ಕೃತಿ ಹಾಗೂ ಕವಿ ಪರಿಚಯ ಮಾಡಿಕೊಡುವ ವಿಶಿಷ್ಟ ತಜ್ಞ ಸುರೇಶ್ ಕುಲಕರ್ಣಿ ಅವರ ಮಾತುಗಳನ್ನು ಕೇಳುವುದಕ್ಕೆ ಹಾಗೂ ಅವರ ಕಲೆಯನ್ನು ನೋಡುವುದಕ್ಕೆ ಇದೊಂದು ಅತ್ಯುತ್ತಮ ಅವಕಾಶ.
ಏಪ್ರಿಲ್ 18ಕ್ಕೆ ಡಾ.ಸುನಿಲ್ ಕರಿ ಮಧುಮೇಹ ಕುರಿತು, ಮೈಸೂರಿನ ಖ್ಯಾತ ವಾಗ್ಮಿಗಳಾದ ಚೇತನ್ ರಾಮ್ ಅವರು `ಜೀವನವನ್ನು ಹೇಗೆ ಸಂಭ್ರಮಿಸಬೇಕು’ ಎನ್ನುವುದರ ಕುರಿತು ಮಾತನಾಡಲಿದ್ದು, ಈ ತಜ್ಞರು ಹೇಳುವುದು ನಮ್ಮ ನಿಮ್ಮೆಲ್ಲರ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಮೌಲ್ಯವರ್ಧಕವಾಗಲಿದೆ. ಏಪ್ರಿಲ್ 19ರ ಬೆಳಿಗ್ಗೆ ಧ್ಯಾನ ಗುರು ವಿಶಾಲಾಕ್ಷಿ ಆಕಳವಾಡಿಯವರು ಆಧ್ಯಾತ್ಮಿಕ ಸ್ತರಕ್ಕೆ ಏರಿಸುವ ಮಾತುಗಳನ್ನು ಹಂಚಿಕೊಳ್ಳಲಿದ್ದಾರೆ.
ಕಲೋತ್ಸವದ ಅಂಗವಾಗಿ ಪತ್ರಿಕೆ ಏರ್ಪಡಿಸಿರುವ ಈ ತಜ್ಞ- ಪ್ರಾಜ್ಞರ ಮಾತುಗಳನ್ನು ವಸಂತ ಋತುವಿನ ಸಂಭ್ರಮದೊಂದಿಗೆ ಆನಂದಿಸಲು ಇಂತಹ ಸದವಕಾಶ ಇನ್ನೊಂದಿಲ್ಲ. ಬನ್ನಿ… ಮೂರೂ ದಿನಗಳ ಕಾಲ ನಡೆಯುವ ಈ ಜ್ಞಾನಸತ್ರದಲ್ಲಿ ಭಾಗಿಯಾಗಿ. ಜೊತೆಗೆ ಕಲೋತ್ಸವದ ಸಾಂಸ್ಕೃತಿಕ ಆಯಾಮವನ್ನು ಸಂತೋಷದಿಂದ ನಿಮ್ಮದಾಗಿಸಿಕೊಳ್ಳಿ.
ಮಳಲಿ ಮಾತುಗಳನ್ನು ಕೇಳ ಬನ್ನಿ ! : ಅಲೋಪತಿ ಜೊತೆಗೆ ಇನ್ನೇನಾದರೂ ಹೆಚ್ಚು ಖರ್ಚಿಲ್ಲದ, ಪರ್ಯಾಯ ಸಾಧ್ಯತೆ ಈಗ ಬೇಕೆಂದು ಎಲ್ಲರೂ ಬಯಸುತ್ತಾರೆ. ಆದ್ದರಿಂದಲೇ ಪಾರಂಪರಿಕ ವೈದ್ಯಕೀಯ, ನಿಸರ್ಗ ಚಿಕಿತ್ಸೆ ಮತ್ತು ಆಯುರ್ವೇದ ಇವೇ ಮೊದಲಾದ ಆಯುಷ್ ಅಡಿಯ ಆರೋಗ್ಯ ಶಾಖೆಗಳ ತಜ್ಞರ ಮಾತು ಮಹತ್ವ ಪಡೆದುಕೊಳ್ಳುತ್ತಿದೆ.
ಈ ಹಿನ್ನೆಲೆಯಲ್ಲಿಯೇ ಏಪ್ರಿಲ್ 18ರಂದು ವೈದ್ಯ ಹನುಮಂತ ಮಳಲಿಯವರ ಮಾತುಗಳು ಈ ಕಲೋತ್ಸವದ ವೇದಿಕೆಯಿಂದ ಹರಿದು ಬರಲಿವೆ. ಅಡುಗೆ ಮನೆಯೇ ಔಷಧಾಲಯ ಎನ್ನುವ ಮಹತ್ವದ ವಿಷಯದ ಕುರಿತು ಹನುಮಂತ ಮಳಲಿ ವಿವರಿಸಲಿದ್ದಾರೆ. ನಮ್ಮ ಮನೆಗಳ ಅಡುಗೆ ಮನೆಯಲ್ಲಿಯೇ ಅಡಕವಾಗಿರುವ ಬಹುದೊಡ್ಡ ಔಷಧಾಲಯವನ್ನು ಅನ್ವೇಷಿಸಿ ಹೊರತೆಗೆಯಲು ಈ ವೈದ್ಯರ ಮಾತುಗಳು ಪ್ರೇರಣೆ ನೀಡಲಿವೆ. ಮಳಲಿ ಏನು ಹೇಳುತ್ತಾರೆಂಬುದನ್ನು ಬಂದು ಆಲಿಸಿ.
ಲೋಕಶಿಕ್ಷಣ ಆರೂಢ ಪ್ರಶಸ್ತಿ : ವಿವಿಧ ಕ್ಷೇತ್ರಗಳ ಸಾಧಕರಿಗೆ `ಲೋಕಶಿಕ್ಷಣ ಆರೂಢ’ ಪ್ರಶಸ್ತಿಯನ್ನು ನೀಡುತ್ತಿರುವುದು ಕಲೋತ್ಸವದ ಇನ್ನೊಂದು ವೈಶಿಷ್ಟ್ಯ. ಡಾ.ಪ್ರಭಾಕರ್ ಕೋರೆ, ಶಂಕರಣ್ಣ ಮುನವಳ್ಳಿ, ಕೆ.ಎಲ್.ಪಾಟೀಲ, ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಡಾ.ಸುರೇಶ ಹನಗವಾಡಿ, ಡಾ. ಚಿ.ವಿ.ಎಸ್.ವಿ.ಪ್ರಸಾದ್, ಡಾ. ಗಿರೀಶ್ ಬಿ.ನವಸುಂಡಿ, ಪಂಡಿತ್ ಎಂ.ವೆಂಕಟೇಶಕುಮಾರ್ ಹಾಗೂ ಡಾ.ವೀಣಾ ಶಾಂತೇಶ್ವರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹಲಸು-ಮಾವು ಗೆಡ್ಡೆ ಗೆಣಸಿನ ಸಿರಿ ವೈಭವ : ಹಾಡು-ಹಸೆ-ಜಾನಪದ-ದೇಸಿ-ಶಾಸ್ತ್ರೀಯ ಸಂಗೀತ ನೃತ್ಯ ವೈಭವಗಳ ಜೊತೆಗೆ, ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಮೇಳ – ಜೀವವೈವಿಧ್ಯ ಮೇಳ ಮತ್ತು ಹಲಸು- ಮಾವು, ಗೆಡ್ಡೆ ಗೆಣಸು, ಸಿರಿಧಾನ್ಯ ಮೇಳಗಳು – ಹತ್ತು ಹಲವು ಬಗೆಯ ಜೀವನಾವಶ್ಯಕ- ಜೀವನಕ್ಕೆ ಉಪಯೋಗ ಆಗುವ ಮಳಿಗೆಗಳು ಈ ಮೂರೂ ದಿನ ಕಲಾಯಾನದ ಇನ್ನಿತರ ಆಕರ್ಷಣೆಗಳಾಗಿವೆ.
ಮಳಿಗೆಗಳು ಲಭ್ಯ : ಈ ಕಲೋತ್ಸವದ ಅಂಗವಾಗಿ ಸಿದ್ಧಾರೂಢ ಸ್ವಾಮೀಜಿ ಮಠದ ಆವರಣದಲ್ಲಿ ಹತ್ತು ಹಲವು ವಿಶಿಷ್ಟ ಮಳಿಗೆಗಳು ಮೈದಾಳಲಿವೆ. ಸಿರಿಧಾನ್ಯ, ಸ್ಥಳೀಯ ತಿಂಡಿ ತಿನಿಸು, ಹಲಸು- ಮಾವು, ಜೀವವೈವಿಧ್ಯ ಸೇರಿದಂತೆ ಅನೇಕ ಮಳಿಗೆಗಳು ತಲೆ ಎತ್ತಲಿವೆ. ಕೆಲವೇ ಕೆಲವು ಮಳಿಗೆಗಳು ಉಳಿದಿದ್ದು, ಸಾವಯವ ಪದಾರ್ಥಗಳ ಮಾರಾಟಗಾರರು, ಸಿರಿಧಾನ್ಯಗಳ ವರ್ತಕರು, ಸ್ಥಳೀಯ ವಿಶೇಷತೆಗಳ ಮಾರಾಟಗಾರರು ಹಾಗೂ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲು ಇಚ್ಛಿಸುವವರು ಸಂಪರ್ಕಿಸಬಹುದಾಗಿದೆ. ಆಸಕ್ತರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು 9900049656 ಮತ್ತು 7411011002. ತ್ವರೆ ಮಾಡಿ. ನಿಮ್ಮ ಮಳಿಗೆಗಳನ್ನು ಕಾದಿರಿಸಿ.























