Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರಿಗೆ ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ; ಪ್ರಧಾನಿ ಮೋದಿಗೆ ನೀಡಿದ ಆ ಬೇಡಿಕೆಗಳು ಏನು ಗೊತ್ತಾ?

ಬೆಂಗಳೂರಿಗೆ ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ; ಪ್ರಧಾನಿ ಮೋದಿಗೆ ನೀಡಿದ ಆ ಬೇಡಿಕೆಗಳು ಏನು ಗೊತ್ತಾ?

0
144

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಸ್ತಾಂತರಿಸಿದರು. ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿಯವರನ್ನು ಸ್ವಾಗತಿಸಿದ ಮುಖ್ಯಮಂತ್ರಿಗಳು, ರಾಜ್ಯದ ಜ್ವಲಂತ ಸಮಸ್ಯೆಗಳು ಹಾಗೂ ಬಾಕಿ ಇರುವ ಯೋಜನೆಗಳ ಕುರಿತು ಕೇಂದ್ರದ ತುರ್ತು ಗಮನ ಸೆಳೆದರು.

ನಂತರ ಮೋದಿ ಐತಿಹಾಸಿಕ ದೇವಾಲಯ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿದರು. ಹಾಗೇ ನೂತನವಾಗಿ ನಿರ್ಮಿಸಲಾದ “ಶ್ರೀಗುರು ಭೈರವೈಕ್ಯ ಮಂದಿರ”ವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದರು.

ಬೆಂಗಳೂರು ಏರ್ಪೋಟ್‌ನಲ್ಲಿ ಮೋದಿಯವರ ಮುಂದಿಟ್ಟ ಬೇಡಿಕೆಗಳು:

ನೀರಾವರಿ ಮತ್ತು ಕುಡಿಯುವ ನೀರಿಗೆ ಆದ್ಯತೆ: ಈ ಬೇಡಿಕೆ ಪಟ್ಟಿಯಲ್ಲಿ ನೀರಾವರಿ ಯೋಜನೆಗಳು ಮುಂಚೂಣಿಯಲ್ಲಿವೆ. ಪ್ರಮುಖವಾಗಿ ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಶೀಘ್ರ ಅನುಮೋದನೆ ನೀಡಬೇಕು ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ‘ರಾಷ್ಟ್ರೀಯ ಮಾನ್ಯತೆ’ ನೀಡಿ ಘೋಷಿತ ₹5,300 ಕೋಟಿ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಲಾಗಿದೆ. ಕೃಷ್ಣಾ ಮತ್ತು ಮಹದಾಯಿ ಯೋಜನೆಗಳ ಕುರಿತಾದ ಕಾನೂನು ಪ್ರಕ್ರಿಯೆ ಹಾಗೂ ಅನುಮತಿಗಳಿಗೂ ಸಿಎಂ ಮನವಿ ಮಾಡಿದ್ದಾರೆ.

ಸಾರಿಗೆ ಮತ್ತು ಮೂಲಸೌಕರ್ಯ: ಬೆಂಗಳೂರು-ಮೈಸೂರು ನಡುವೆ ಹೈ-ಸ್ಪೀಡ್ ರೈಲು ಕಾರಿಡಾರ್ ವಿಸ್ತರಣೆ ಮತ್ತು ಉಪನಗರ ರೈಲು ಯೋಜನೆಗೆ ಹೆಚ್ಚಿನ ವೇಗ ನೀಡಲು ಕೋರಲಾಗಿದೆ. ದಶಕಗಳಿಂದ ಬಾಕಿ ಉಳಿದಿರುವ ಕೋಲಾರ ರೈಲ್ವೆ ಕೋಚ್ ಫ್ಯಾಕ್ಟರಿಯ ಪುನರುಜ್ಜೀವನಕ್ಕೆ ಒತ್ತು ನೀಡಲಾಗಿದ್ದು, ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗಾಗಿ ₹26,000 ಕೋಟಿಗಳ ವಿಶೇಷ ಪ್ಯಾಕೇಜ್‌ಗೆ ಬೇಡಿಕೆ ಇಡಲಾಗಿದೆ.

ಹಣಕಾಸು ಅನುದಾನ ಮತ್ತು ಮೀಸಲಾತಿ: 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ಬರಬೇಕಾದ ₹5,495 ಕೋಟಿ ಕಂದಾಯ ಕೊರತೆ ಅನುದಾನ ಹಾಗೂ ಜಲ ಜೀವನ್ ಮಿಷನ್ ಅಡಿಯಲ್ಲಿ ಬಾಕಿ ಇರುವ ₹17,554 ಕೋಟಿ ಹಣವನ್ನು ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಜೊತೆಗೆ, ರಾಜ್ಯದ 56% ಮೀಸಲಾತಿಯನ್ನು ಸಂವಿಧಾನದ 9ನೇ ವೇಳಾಪಟ್ಟಿಗೆ ಸೇರಿಸಲು ಹಾಗೂ ರಾಯಚೂರಿನಲ್ಲಿ ಏಮ್ಸ್ (AIIMS) ಆಸ್ಪತ್ರೆ ಸ್ಥಾಪಿಸಲು ಮಂಜೂರಾತಿ ನೀಡುವಂತೆ ಮುಖ್ಯಮಂತ್ರಿಗಳು ಒತ್ತಾಯಿಸಿದ್ದಾರೆ.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವಾರ್ಷಿಕ ₹5,000 ಕೋಟಿ ಅನುದಾನದ ಬೇಡಿಕೆಯೂ ಈ ಪಟ್ಟಿಯಲ್ಲಿದೆ. ಒಟ್ಟಾರೆಯಾಗಿ, ಈ ಅಂಶಗಳು ರಾಜ್ಯದ ಮುಂದಿನ ದಶಕದ ಪ್ರಗತಿಗೆ ಪೂರಕವಾದ ಬ್ಲೂಪ್ರಿಂಟ್‌ನಂತಿವೆ ಎನ್ನಲಾಗುತ್ತಿದೆ.