ಮದುವೆ ಎಂದರೆ ಪ್ರತಿಯೊಂದು ಹೆಣ್ಣಿಗೆ ಒಂದು ಸುಂದರ ಕನಸು. ಎರಡು ಕುಟುಂಬಗಳ ಸಮ್ಮಿಲನ, ಇನ್ನು ಗಂಡು ಮಕ್ಕಳಿಗೆ ಜೀವನದ ಒಂದು ಅದ್ಭುತವಾದ ಭಾಗ. ಆದರೆ ಕಂಡ ಕನಸೆಲ್ಲ ನನಸಾಗಲೇ ಬೇಕು ಅಂತೇನು ಇಲ್ಲ, ಮನೆ ಬೆಳಗಬೇಕಾದ ಸೊಸೆ ಅದೇ ಮನೆಗೆ ಬೆಂಕಿ ಹಚ್ಚುವ ಖತರ್ನಾಕ್ ಪ್ಲಾನ್ ಮಾಡಿದ್ದಳು.
ಪ್ರೀತಿಯ ಮಹಲ್ ಇರುವ ಆಗ್ರಾ ನಗರದಲ್ಲಿ ಗೌರವ್ ಮತ್ತು ಕಲ್ಪನಾ ಅವರ ವಿವಾಹವು ದೊಡ್ಡ ಕನಸುಗಳೊಂದಿಗೆ ನೆರವೇರಿತ್ತು. ಆದರೆ ಯಾರಿಗೂ ತಿಳಿದಿರಲಿಲ್ಲ, ಆ ಸಂಭ್ರಮ ಕೇವಲ ಒಂದು ದಿನದ ಆಯಸ್ಸು ಮಾತ್ರ ಹೊಂದಿತ್ತು ಎಂದು. ಮದುವೆಯ ಮೊದಲ ರಾತ್ರಿಯಂದು ಪತಿ ಗೌರವ್ ತನ್ನ ಪತ್ನಿಯ ಮುಖದ ಮೇಲಿರುವ ಮುಸುಕನ್ನು ಸರಿಸಲು ಹೋದಾಗ, ಕಲ್ಪನಾ ಹಾಕಿದ ಬೇಡಿಕೆ ಕೇಳಿ ಆತ ಸ್ತಬ್ದನಾದ. ಆಕೆ ಆ ಕ್ಷಣವೇ ತನ್ನ ಪತಿಯಿಂದ 90 ಲಕ್ಷ ರೂಪಾಯಿಗಳಿಗೆ ಬೇಡಿಕೆಯಿಟ್ಟಳು. ಆ ಬೃಹತ್ ಮೊತ್ತವನ್ನು ನೀಡದ ಹೊರತು ತಾನು ಯಾವುದೇ ದೈಹಿಕ ಸಂಬಂಧಕ್ಕೆ ಒಪ್ಪುವುದಿಲ್ಲ ಎಂದು ಪಟ್ಟು ಹಿಡಿದಳು. ಇದು ಕೇವಲ ಆರಂಭವಾಗಿತ್ತು.
ದಿನಗಳು ಕಳೆದಂತೆ ಕಲ್ಪನಾ ತನ್ನ ಅಣ್ಣಂದಿರನ್ನು ಬಳಸಿಕೊಂಡು ಮನೆಯಲ್ಲಿದ್ದ ತನ್ನ ಹಾಗೂ ತನ್ನ ಅತ್ತೆಯ ಚಿನ್ನಾಭರಣಗಳನ್ನೆಲ್ಲಾ ದೋಚಿದಳು. ಕೇವಲ ಹಣಕ್ಕಾಗಿ ಇಡೀ ಕುಟುಂಬಕ್ಕೆ ನಿರಂತರವಾಗಿ ಕಿರುಕುಳ ನೀಡತೊಡಗಿದಳು. ಜುಲೈ ತಿಂಗಳಲ್ಲಿ ಆಕೆ ಗಂಡನ ಮನೆ ಬಿಟ್ಟು ಹೋಗುವಾಗ, “ತಕ್ಷಣ 90 ಲಕ್ಷ ರೂಪಾಯಿಗಳನ್ನು ನನ್ನ ತಂದೆಯ ಖಾತೆಗೆ ಹಾಕಿ, ಇಲ್ಲದಿದ್ದರೆ ನಿಮ್ಮನ್ನು ಜೀವಂತವಾಗಿ ಸುಡುತ್ತೇವೆ” ಎಂದು ಬಹಿರಂಗವಾಗಿ ಬೆದರಿಕೆ ಹಾಕಿದಳು. ನಂತರದ ದಿನಗಳಲ್ಲಿ ಆಕೆಯ ಅಣ್ಣ ರಾಹುಲ್ ತಂದೆಯ ಬ್ಯಾಂಕ್ ವಿವರಗಳನ್ನು ಗೌರವ್ ಕುಟುಂಬಕ್ಕೆ ಕಳುಹಿಸಿ ಹಣಕ್ಕಾಗಿ ಒತ್ತಡ ಹೇರಿದನು.
ಘಟನೆ ಮತ್ತಷ್ಟು ವಿಕೋಪಕ್ಕೆ ಹೋದದ್ದು ಮಾರ್ಚ್ ತಿಂಗಳಿನಲ್ಲಿ. ಕಲ್ಪನಾ ತನ್ನ ತಂದೆ, ಅಣ್ಣಂದಿರು ಮತ್ತು ಈ ಮದುವೆಯನ್ನು ನಿಶ್ಚಯಿಸಿದ್ದ ಮಧ್ಯಸ್ಥಿಕೆಗಾರ ಮುನ್ನಾ ಮಾಸ್ಟರ್ ಜೊತೆ ಗೌರವ್ ಮನೆಗೆ ನುಗ್ಗಿದಳು. ಇಡೀ ಕುಟುಂಬವನ್ನು ಒಳಗೆ ಹಾಕಿ ಲಾಕ್ ಮಾಡಿದ ಆ ಗುಂಪು, ಕೇವಲ ಎರಡು ಗಂಟೆಯ ಗಡುವು ನೀಡಿ ಹಣಕ್ಕಾಗಿ ಆರ್ಭಟಿಸಿತು. ಗೌರವ್‌ನ 67 ವರ್ಷದ, ದೃಷ್ಟಿಹೀನ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ತಂದೆಯನ್ನು ಅವಹೇಳನಕಾರಿಯಾಗಿ ನಿಂದಿಸಿ, ಅವರಿಗೆ ಮರಣದಂಡನೆಯ ಎಚ್ಚರಿಕೆ ನೀಡಲಾಯಿತು. ಅಷ್ಟೇ ಅಲ್ಲದೆ, ಮನೆಯಲ್ಲಿದ್ದ ಪಿಎನ್‌ಜಿ ಗ್ಯಾಸ್ ಸಂಪರ್ಕವನ್ನು ಕತ್ತರಿಸಿ, ಇಡೀ ಮನೆಯನ್ನು ಸುಟ್ಟು ಹಾಕಿ ಅದೊಂದು ಅಪಘಾತವೆಂದು ಬಿಂಬಿಸಲು ಕ್ರೂರ ಸಂಚು ರೂಪಿಸಿದರು.
ಸಕಾಲದಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿದ ಕಾರಣ ಒಂದು ದೊಡ್ಡ ದುರಂತ ತಪ್ಪಿತು. ವಿಚಾರಣೆಯ ಸಮಯದಲ್ಲಿ ಈ ಇಡೀ ವಿವಾಹವು ಕೇವಲ ಹಣ ಲೂಟಿ ಮಾಡಲು ರೂಪಿಸಿದ ಸಂಚು ಎಂಬ ಕಹಿ ಸತ್ಯ ಹೊರಬಂತು. ಈ ಮದುವೆಯ ಹಿಂದಿದ್ದ ಮಧ್ಯಸ್ಥಿಕೆಗಾರ ಮುನ್ನಾ ಮಾಸ್ಟರ್, ತಾನೇ ಉದ್ದೇಶಪೂರ್ವಕವಾಗಿ ಈ ಕುಟುಂಬವನ್ನು ಗುರಿ ಮಾಡಿ ವಿವಾಹ ನಿಶ್ಚಯಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಪ್ರೀತಿಯ ಸಂಕೇತವಾದ ತಾಜ್ ಮಹಲ್ ಸಾಕ್ಷಿಯಾಗಿ ಆರಂಭವಾಗಬೇಕಿದ್ದ ಒಂದು ದಾಂಪತ್ಯ ಜೀವನ, ಇಂದು ಸುಲಿಗೆ ಮತ್ತು ಕ್ರೌರ್ಯದ ಕಥೆಯಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.























