ಬೆಂಗಳೂರು: ದಾವಣಗೆರೆ ದಕ್ಷಿಣ ಉಪಚುನಾವಣೆಯ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದರೂ, ಕಾಂಗ್ರೆಸ್‌ನ ಪಕ್ಷದೊಳಗಿನ ಭಿನ್ನಮತಗಳು ಇನ್ನೂ ತಣ್ಣಗಾಗಿಲ್ಲ. ವಿಶೇಷವಾಗಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಉಂಟಾದ ಅಸಮಾಧಾನ, ಚುನಾವಣೆಯ ನಂತರವೂ ಮುಂದುವರಿದಿರುವುದು ಗಮನಾರ್ಹವಾಗಿದೆ.
ಈ ಬೆಳವಣಿಗೆಯ ನಡುವೆಯೇ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರೂ ಆಗಿರುವ ಎಂಎಲ್‌ಸಿ ಅಬ್ದುಲ್‌ಜಬ್ಬಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಪಕ್ಷದೊಳಗಿನ ಅಸಮಾಧಾನ ಮತ್ತಷ್ಟು ಗಂಭೀರ ರೂಪ ಪಡೆದಿದೆ.
ಜಮೀರ್ ವಿರುದ್ಧ ಅಸಮಾಧಾನ ಹೆಚ್ಚಳ: ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸದ ಆರೋಪದ ಮೇಲೆ ಸಚಿವ ಜಮೀರ್ ಅಹ್ಮದ್ ವಿರುದ್ಧ ಮುಸ್ಲಿಂ ಬಣದ ಅಸಮಾಧಾನ ಸ್ಪಷ್ಟವಾಗಿ ವ್ಯಕ್ತವಾಗಿದೆ. ಪ್ರಚಾರಕ್ಕಾಗಿ ಕ್ಷೇತ್ರಕ್ಕೆ ಭೇಟಿ ನೀಡಿದರೂ, ಅವರ ನಡೆ ಕಾರ್ಯಕರ್ತರಿಗೆ ತೃಪ್ತಿಕರವಾಗಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.
ಮುಸ್ಲಿಂ ನಾಯಕತ್ವವನ್ನು ಸಮಾಧಾನಪಡಿಸಲು ವಿಫಲವಾದ ಕಾರಣ, ಜಮೀರ್ ಅಹ್ಮದ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಡ ಪಕ್ಷದೊಳಗೇ ಹೆಚ್ಚಾಗಿದೆ.
ಪ್ರಚಾರದಿಂದ ದೂರ ಉಳಿದ ನಾಯಕರು: ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಸೇರಿದಂತೆ ಕೆಲವು ಪ್ರಮುಖ ನಾಯಕರು ಚುನಾವಣಾ ಪ್ರಚಾರದಿಂದ ದೂರ ಉಳಿದಿರುವುದು ಪಕ್ಷದ ಸಂಘಟನಾತ್ಮಕ ಬಲಕ್ಕೆ ಹೊಡೆತ ನೀಡಿದೆ. “ಪ್ರಚಾರ ಮಾಡದವರ ವಿರುದ್ಧ ಕ್ರಮ ಅನಿವಾರ್ಯ” ಎಂದು ಒಂದು ಬಣ ಪಟ್ಟು ಹಿಡಿದಿದೆ ಎಂದು ತಿಳಿದುಬಂದಿದೆ.























