Home Advertisement
Home ನಮ್ಮ ಜಿಲ್ಲೆ ಬಣ್ಣದ ಲೋಕದಲ್ಲೂ ಮಿಂಚಿ, ಓದಿನಲ್ಲೂ ‘ಶತಕ’ ಬಾರಿಸಿದ ನಟಿ ಅಂಕಿತಾ; ಪಿಯು ಫಲಿತಾಂಶದಲ್ಲಿ ಭರ್ಜರಿ ಸಾಧನೆ!

ಬಣ್ಣದ ಲೋಕದಲ್ಲೂ ಮಿಂಚಿ, ಓದಿನಲ್ಲೂ ‘ಶತಕ’ ಬಾರಿಸಿದ ನಟಿ ಅಂಕಿತಾ; ಪಿಯು ಫಲಿತಾಂಶದಲ್ಲಿ ಭರ್ಜರಿ ಸಾಧನೆ!

0
86

ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ರಾಜ್ಯದ ಸಾವಿರಾರು ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿದೆ. ಈ ಸಂಭ್ರಮದ ನಡುವೆ ಕನ್ನಡ ಕಿರುತೆರೆಯ ಜನಪ್ರಿಯ ನಟಿ ಅಂಕಿತಾ ಜಯರಾಮ್ ಕೂಡ ಒಬ್ಬರು.

ಶೂಟಿಂಗ್‌ ಮತ್ತು ಬಣ್ಣದ ಲೋಕದ ಕೆಲಸಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ, ಓದಿನ ಕಡೆಗೆ ಅಷ್ಟೇ ಗಮನ ನೀಡಿದ್ದ ಅಂಕಿತಾ ಈಗ 97% ಅಂಕಗಳನ್ನು ಪಡೆಯುವ ಮೂಲಕ ಅಪ್ಪ-ಅಮ್ಮ ಮೆಚ್ಚುವಂತಹ ಮಗಳಾಗಿದ್ದಾರೆ.

ಸಂಖ್ಯಾಶಾಸ್ತ್ರದಲ್ಲಿಪರ್ಫೆಕ್ಟ್ 100′: ಬೆಂಗಳೂರಿನ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ವಾಣಿಜ್ಯ (Commerce) ವಿಭಾಗದಲ್ಲಿ ವ್ಯಾಸಂಗ ಮಾಡಿದ್ದ ಅಂಕಿತಾ, ಒಟ್ಟು 600 ಅಂಕಗಳಿಗೆ 579 ಅಂಕಗಳನ್ನು ಗಳಿಸಿದ್ದಾರೆ. ವಿಶೇಷವೆಂದರೆ ಸಂಖ್ಯಾಶಾಸ್ತ್ರದಲ್ಲಿ 100ಕ್ಕೆ 100 ಅಂಕಗಳನ್ನು ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಉಳಿದಂತೆ ವ್ಯವಹಾರ ಅಧ್ಯಯನದಲ್ಲಿ 98, ಕನ್ನಡದಲ್ಲಿ 97 ಹಾಗೂ ಅಕೌಂಟೆನ್ಸಿಯಲ್ಲಿ 96 ಅಂಕಗಳನ್ನು ಪಡೆದು ‘ಡಿಸ್ಟಿಂಕ್ಷನ್’ನಲ್ಲಿ ತೇರ್ಗಡೆಯಾಗಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲೂ 95% ಅಂಕ ಗಳಿಸಿದ್ದರು ಎಂಬುದು ಗಮನಾರ್ಹ.

ಬಾಲನಟಿಯಿಂದ ನಾಯಕಿಯವರೆಗೆ: ಅಂಕಿತಾ ಜಯರಾಮ್ ಕನ್ನಡಿಗರಿಗೆ ಚಿರಪರಿಚಿತ ಮುಖ. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ನಟಿ ಪುನೀತ್ ರಾಜ್‌ಕುಮಾರ್, ದರ್ಶನ್, ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರಂತಹ ದಿಗ್ಗಜ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಸದ್ಯ ‘ಕರ್ಣ’ ಧಾರಾವಾಹಿಯಲ್ಲಿ ‘ರಿಯಾ’ ಪಾತ್ರದ ಮೂಲಕ ಮನೆಮಾತಾಗಿದ್ದಾರೆ. ಅಷ್ಟೇ ಅಲ್ಲದೆ, ‘ಕಾಗದ’ ಚಿತ್ರದ ಮೂಲಕ ನಾಯಕಿಯಾಗಿಯೂ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದ್ದಾರೆ.

ತಂದೆಗೆ ಕೊಟ್ಟ ವಿಶೇಷ ಗಿಫ್ಟ್: ಈ ಅದ್ಭುತ ಗೆಲುವನ್ನು ಅಂಕಿತಾ ತಮ್ಮ ತಂದೆಯ ಹುಟ್ಟುಹಬ್ಬದ ಉಡುಗೊರೆ ಎಂದು ಕರೆದಿದ್ದಾರೆ. “ಕಂಡ ಕನಸು ನನಸಾದ ಸುದಿನ. ರಾಯರ ಕೃಪೆ ಮತ್ತು ನಿಮ್ಮೆಲ್ಲರ ಹಾರೈಕೆಯಿಂದ ಈ ಸಾಧನೆ ಸಾಧ್ಯವಾಗಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಟನೆ ಮತ್ತು ಶಿಕ್ಷಣ ಎರಡನ್ನೂ ಸಮತೋಲನದಿಂದ ನಿಭಾಯಿಸಿದ ಅಂಕಿತಾ ಈ ಹಾದಿ ಅನೇಕ ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದೆ.