ಮಡಿಕೇರಿ: ಕೊಡಗು ಜಿಲ್ಲೆಯ ತಡಿಯಂಡಮೋಳ್ ಬೆಟ್ಟದಲ್ಲಿ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ ಟೆಕ್ಕಿ ಶರಣ್ಯ (36) ಅವರನ್ನು ಕೊನೆಗೂ ಸುರಕ್ಷಿತವಾಗಿ ಪತ್ತೆ ಹಚ್ಚಲಾಗಿದೆ.
ಗುರುವಾರ ಬೆಳಗ್ಗೆ ಚಾರಣಕ್ಕೆ ತೆರಳಿದ್ದ ಶರಣ್ಯ ಸಂಪರ್ಕ ಕಡಿತಗೊಂಡ ಹಿನ್ನೆಲೆ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯರು ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಭಾನುವಾರ ಸಂಜೆ ನಡೆದ ಶೋಧ ಕಾರ್ಯಾಚರಣೆಯಲ್ಲಿ ಶರಣ್ಯ ಅವರನ್ನು ಕಾಡಿನೊಳಗೆ ಪತ್ತೆ ಮಾಡಲಾಗಿದೆ.
ಭಾರೀ ಶೋಧ ಕಾರ್ಯಾಚರಣೆ: ಶರಣ್ಯ ಪತ್ತೆಗಾಗಿ ಒಟ್ಟು 9 ತಂಡಗಳನ್ನು ನಿಯೋಜನೆ ಮಾಡಲಾಗಿತ್ತು. ಕರ್ನಾಟಕ ಅರಣ್ಯ ಇಲಾಖೆ, ಕರ್ನಾಟಕ ಪೊಲೀಸ್ ಇಲಾಖೆ, ನಕ್ಸಲ್ ನಿಗ್ರಹ ಪಡೆ, ಸ್ಥಳೀಯ ಗ್ರಾಮಸ್ಥರು ಮತ್ತು ಕುಡಿಯ ಜನಾಂಗದವರು ಸೇರದಂತೆ ಹಲವು ತಂಡಗಳು ನಿರಂತರವಾಗಿ ಶೋಧ ಕಾರ್ಯ ನಡೆಸಿದರು. ಇದಕ್ಕಾಗಿ ಥರ್ಮಲ್ ಡ್ರೋನ್ ಕ್ಯಾಮೆರಾ, ಶ್ವಾನದಳ ಸೇರಿದಂತೆ ಆಧುನಿಕ ತಂತ್ರಜ್ಞಾನ ಉಪಕರಣಗಳನ್ನು ಬಳಸಲಾಗಿತ್ತು.
ಸ್ಥಳೀಯರ ಪಾತ್ರ ಮಹತ್ವದದ್ದು : ಸ್ಥಳೀಯ ಕುಡಿಯ ಜನಾಂಗದವರು ಕಾಡಿನ ಒಳಭಾಗದಲ್ಲಿ ಶೋಧ ನಡೆಸುವ ವೇಳೆ ಶರಣ್ಯ ಪತ್ತೆಯಾಗಿದ್ದಾರೆ. ಬಳಿಕ ಅವರನ್ನು ಸುರಕ್ಷಿತವಾಗಿ ಕಾಡಿನಿಂದ ಹೊರತೆಗೆದು ರಕ್ಷಿಸಲಾಗಿದೆ.
ಸಚಿವರಿಂದ ಅಭಿನಂದನೆ : ಈ ಕುರಿತು ಈಶ್ವರ ಬಿ. ಖಂಡ್ರೆ ಪ್ರತಿಕ್ರಿಯಿಸಿ, ಶೋಧ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅರಣ್ಯ ಇಲಾಖೆ, ಪೊಲೀಸ್, ನಕ್ಸಲ್ ದಳ ಹಾಗೂ ಸ್ಥಳೀಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೇ ಶಾಸಕ ಎ.ಎಸ್. ಪೊನ್ನಣ್ಣ ಕೂಡ ಶರಣ್ಯ ಪತ್ತೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.





















