ದಾವಣಗೆರೆ: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಜನ ಕಾಂಗ್ರೆಸ್‌ಗೆ ಬುದ್ಧಿ ಕಲಿಸುವ ಸಮಯ ಬಂದಿದೆ. ಮುಂದಿನ 2028 ರೊಳಗೆ ಆಯ್ತದೋ, ಇಲ್ಲ ಇನ್ನು ಎರಡು ತಿಂಗಳಿಗೋ, ಮೂರು ತಿಂಗಳಿಗೋ, ಆರು ತಿಂಗಳಿಗೋ ಸಿದ್ದರಾಮಯ್ಯನವರು ಗೇಟ್‌ಪಾಸ್ ಆಗ್ತಾರೆ. ಅದಾದ ಒಂದೆರಡು ತಿಂಗಳಿಗೆ ಎಲೆಕ್ಷನ್ ಬರ್ತದೆ. ಮತ್ತೆ ಕರ್ನಾಟಕಕ್ಕೆ ಹೊಸ ಯುಗ ಪ್ರಾರಂಭವಾಗುವ ಸನ್ನಿವೇಶ ಸೃಷ್ಟಿಯಾಗುತ್ತದೆ ಎಂದು ಕೇಂದ್ರದ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಭವಿಷ್ಯ ನುಡಿದರು.
ಶನಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ತಿಳಿದ ಮಟ್ಟಿಗೆ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರವನ್ನು ಜನರೇ ಪ್ರತಿಷ್ಠೆಯಾಗಿ ತಗೊಂಡಿದ್ದಾರೆ. “ಅಲ್ಪಸಂಖ್ಯಾತರು ಅಂತ ಕಾಂಗ್ರೆಸ್ ಕಡೆಗಣಿಸಿತು… ಅವರೇನು ದಡ್ಡರಾ?. ಇವತ್ತು ಮತ ಕೊಡ್ತಾ ಇರೋದು ಮೂರನೇ ತಲೆಮಾರು. ಮೂರನೇ ತಲೆಮಾರು ಅಂದ್ರೆ ಇನ್ನು ಎಷ್ಟು ತಲೆಮಾರು ಇರ್ತದೆ ಅನ್ನೋದು ಅವರಿಗೂ ಗೊತ್ತಿರುತ್ತದೆ. ಹಾಗಿರೋದ್ರಿಂದ ಈ ಚುನಾವಣೆ ಅಲ್ಪಸಂಖ್ಯಾತರ ಸ್ವಾಭಿಮಾನ, ಅಲ್ಪಸಂಖ್ಯಾತರ ರಾಜಕೀಯ ಭವಿಷ್ಯ. ಅಲ್ಪಸಂಖ್ಯಾತರು ಏನು ಕಾಂಗ್ರೆಸ್ಸನ್ನು ನಂಬಿಕೊಂಡು ಇದೆ ನಮ್ಮ ಜೀವನಾಡಿ ಅಂತ ಅಂದಿದ್ರೋ ಅದಕ್ಕೆ ಮುಕ್ತಿ ಕೊಡುವ ಕೊನೆಗಾಲ ಅಂತ ಕಾಣಿಸ್ತಿದೆ ಎಂದು ತಿಳಿಸಿದರು.
ಇಡೀ ರಾಷ್ಟ್ರದಲ್ಲಿ ದಾವಣಗೆರೆ ಉಪಚುನಾವಣೆ ಒಂದು ಮುನ್ನೋಟ ಆಗಿದೆ. ಆ ಮುನ್ನೋಟದಲ್ಲಿ ಅಲ್ಪಸಂಖ್ಯಾತರು ಎಚ್ಚೆತ್ತುಕೊಂಡು, ಎಷ್ಟೇ ನೀವು ದೊಡ್ಡವರಾದರೂ ಕೂಡ ನಮಗೆ, ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದರೆ ನಾವು ನಿಮ್ಮನ್ನು ಸಹಿಸೋದಿಲ್ಲ ಅನ್ನೋದಕ್ಕೆ ದಾವಣಗೆರೆ ಉಪಚುನಾವಣೆ ಒಂದು ದಿಕ್ಸೂಚಿ ಆಗಿದೆ. ಈ ಚುನಾವಣೆಯಲ್ಲಿ ನೂರಕ್ಕೆ ನೂರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಗೆಲುವು ಸಾಧಿಸುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
41 ಲಕ್ಷ ಬೋಗಸ್ ಕಾರ್ಡ್: ನರೇಗಾದಲ್ಲಿ 41 ಲಕ್ಷ ಬೋಗಸ್ ಕಾರ್ಡ್ ಇದೆ ಅಂತ ನಾನು ಹೇಳಿದ್ದಲ್ಲ, ಸಿಎಜಿ ರಿಪೋರ್ಟ್ ಹೇಳಿದೆ. ಸಿಎಜಿ ರಿಪೋರ್ಟ್ ಆದ ಮೇಲೆ ಪ್ರಧಾನಿಗಳು ಎಲ್ಲವನ್ನೂ ಚೆಕ್ ಮಾಡಿಸಿದ್ರು. ಕೇವಲ ಕರ್ನಾಟಕದಲ್ಲಿ ಇರಲಿಲ್ಲ, ಎಲ್ಲೆಲ್ಲಿ ಕಾಂಗ್ರೆಸ್ ಸರ್ಕಾರ ಇತ್ತೋ ಪುಣ್ಯಾತ್ಮರು ಎಲ್ಲ ಕಡೆನೂ ಬಿಲ್ಲು ತಕೊಂಡುಬಿಟ್ಟಿದ್ರು. ಈ ಬಿಲ್ಲು ತಕೊಂಡವ್ರನ್ನ ಬಿಡೋದಿಲ್ಲ ಅಂತ ಹೇಳಿ ಕಾಂಗ್ರೆಸ್ಸು ಅದಕ್ಕೆ ಏನು ಮಾಡಿದ್ರು, ವಿಕಸಿತ ಭಾರತ ಮಾಡಿ ಮಹಾತ್ಮ ಗಾಂಧಿ ಹೆಸರಿಗೆ ಇಷ್ಟೊಂದು ಧೋಖ ಮಾಡೋರು ಇನ್ಯಾರಿಗೆ ಬಿಡ್ತಾರೆ ಅಂತ ಕೇಂದ್ರ ಸರ್ಕಾರ ವಿಬಿ-ಜಿ ರಾಮ್ ಜಿ ಯೋಜನೆ ಜಾರಿಗೆ ತಂದಿತು ಎಂದು ಹೇಳಿದರು.
ಓಲೈಕೆ ರಾಜಕಾರಣ ಮಾಡೋರಲ್ಲ…: ಓಲೈಕೆ ರಾಜಕಾರಣ ನಾವು ಮಾಡೋವರಲ್ಲ. ನೀವೇನಾದ್ರೂ ಮಾಡಿದ್ದಿದ್ರೆ ಅದು ನೀವು ಮಾಡ್ಕೋಬೇಕೇ ಹೊರತು, ನಾವಲ್ಲ. ಸ್ವಂತ ಬಲದಲ್ಲಿ ಮಾತ್ರ ಹುಲಿಯಾಗಿ ಗರ್ಜಿಸಿದ್ರೆ ಓಲೈಕೆಯ ರಾಜಕಾರಣ ಮಾಡೋದಕ್ಕೆ ಆಗೋದಿಲ್ಲ. ಕೂಪ ಮಂಡೂಕದ ಭಾವನೆಯಲ್ಲಿ ಸನ್ಮಾನ್ಯ ಸಿದ್ದರಾಮಯ್ಯನವರು ಮಾತಾಡೋದನ್ನ ನಿಲ್ಲಿಸಿ, ಇನ್ನೊಬ್ಬರ ಬಗ್ಗೆ ಗೌರವದಿಂದ ನಡೆದುಕೊಳ್ಳೋದನ್ನ ಮಾಡಿ. ಕೇಂದ್ರ ಸಚಿವರು ಇರಬಹುದು, ರಾಷ್ಟ್ರದ ಪ್ರಧಾನಿಗಳು ಇರಬಹುದು, ರಾಷ್ಟ್ರದ ಇತರೆ ಮಂತ್ರಿಗಳು ಇರಬಹುದು ಅವರಿಗೆ ಗೌರವ ಕೊಡುವುದನ್ನು ಕಲಿಯಿರಿ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಸಲಹೆ ನೀಡಿದರು.






















