ದಾವಣಗೆರೆ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರ್ಣಗೊಂಡಿದೆ. ಈ ಅವಧಿಯ ಭ್ರಷ್ಟಾಚಾರ, ಬೆಲೆ ಏರಿಕೆ, ದುರಾಡಳಿತದ ವಿರುದ್ಧವಾಗಿ ಬಿಜೆಪಿ ಚಾರ್ಜ್ ಶೀಟ್‌ನ್ನು ಬಿಡುಗಡೆ ಮಾಡಿತು.
ಈ ಚಾರ್ಚ್ ಶೀಟ್ ಬಿಜೆಪಿ ಸೃಷ್ಟಿ ಮಾಡಿದಲ್ಲ, ಮಾಧ್ಯಮಗಳಲ್ಲಿ ಬಂದಂತಹ ಸುದ್ದಿಗಳನ್ನು ಆಧರಿಸಿ ಬಿಡುಗಡೆ ಮಾಡಲಾಗಿದೆ.ಈ ಎಲ್ಲಾ ಚರ್ಚೆ ಜನಮಾನಸದಲ್ಲಿ ಆಗಿರುವಂತಹ ವಿಚಾರವನ್ನು ನಿಮ್ಮ ಮುಂದೆ ಇಟ್ಟುಕೊಂಡೇ ಈ ಆರೋಪ ಪಟ್ಟಿಯನ್ನು ತಯಾರು ಮಾಡಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷದಲ್ಲಿ ಕೆಟ್ಟ ಕಾರಣಕ್ಕೆ ಈ ಸುದ್ದಿಯಲ್ಲಿದೆಯೇ ಹೊರತು, ಒಂದು ದಿನವೂ ಅಭಿವೃದ್ಧಿ ಕೆಲಸ ಮಾಡಿದ್ದೇವೆ ಅಂತ ಸುದ್ದಿಯಲ್ಲಿರಲಿಲ್ಲ ಎಂದು ಟೀಕಿಸಿದರು.
ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಬಲಿಯಾದವರ ಸಂಖ್ಯೆ ನೂರಾರು, ಭ್ರಷ್ಟಾಚಾರ, ಬೆಲೆ ಏರಿಕೆ, ದರೋಡೆ ಪ್ರಕರಣಗಳು ಡ್ರಗ್ಸ್ ದಂಧೆ, ರೈತರ ಆತ್ಮಹತ್ಯೆಯುಲ್ಲಿ ಇಡೀ ದೇಶದಲ್ಲೇ ಕರ್ನಾಟಕಕ್ಕೆ ಎರಡನೇ ಸ್ಥಾನ, ಸರ್ಕಾರಿ ನೌಕರರು ಆತ್ಮಹತ್ಯೆ. ಬಾಣಂತಿ ಮತ್ತು ಹಸುಗೂಸುಗಳ ಸರಣಿ ಸಾವುಗಳು ನಡೆದಿವೆ ಎಂದು ಈ ಮೂರು ವರ್ಷಗಳ ಅವಧಿಯಲ್ಲಿ ನಡೆದಿರುವ ಘಟನೆ, ಚಳವಳಿಗಳನ್ನು ವಿವರಿಸಿದರು.
ಮಾನ-ಮರ್ಯಾದೆಯ ಪ್ರಶ್ನೆ : ಸಿದ್ದರಾಮಯ್ಯ ಅವರೇ ನೀವು ಹೇಳ್ತೀರಲ್ಲ ನಮಗೆ ಮಾನ-ಮರ್ಯಾದೆ ಇದೆಯಾ ಅಂತ. ಮಾನ-ಮರ್ಯಾದೆ ಇದ್ದವರು ಇಷ್ಟೆಲ್ಲಾ ಕೆಟ್ಟ ಕೆಲಸವನ್ನ ಮಾಡಿ ಅಧಿಕಾರಕ್ಕೆ ಅಂಟಿಕೊಳ್ಳಲ್ಲ.ಹೀಗಾಗಿ, ಮಾನ-ಮರ್ಯಾದೆ ಇದೆಯಾ ಅನ್ನೋದು ನಿಮಗೆ ಅನ್ವಯಿಸುತ್ತದೆ. ನಿಮ್ಮನ್ನು ನೀವೇ ಕೇಳಿಕೊಳ್ಳಿ ನಿಮ್ಮ ಆತ್ಮಸಾಕ್ಷಿಗನುಗುಣವಾಗಿ ನಿಮಗೆ ಮಾನ-ಮರ್ಯಾದೆ ಇದೆಯಾ ಅಂತ ಕೇಳಿಕೊಳ್ಳಿ ಎಂದು ಟೀಕಾಪ್ರಹಾರ ನಡೆಸಿದರು.
ದರೋಡೆಕೋರ ಸರ್ಕಾರ : ಕಾಂಗ್ರೆಸ್‌ನವರು ಈಗ ಬೆಲೆ ಏರಿಕೆ ಆಗಿರೋದು ಯುದ್ಧದ ಕಾರಣಕ್ಕೆ ಅಂತ ಹೇಳುತ್ತಾರೆ.. ಅದಕ್ಕೂ ಮುಂಚೆ ಜೇಬಗಳ್ಳರು ಅಂತ ಕರೆದರು. ಅದಕ್ಕೆ ನಾವುಗಳು ಹೇಳುತ್ತೇವೆ ನಿಮ್ಮ ಸರ್ಕಾರವನ್ನು ’ದರೋಡೆಕೋರ ಸರ್ಕಾರ’ ಅಂತ ಕರೆಯೋದ್ರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಬಿಜೆಪಿಯ ಚಾರ್ಚ್ ಶೀಟ್‌ನಲ್ಲಿ ಏನೇನಿದೆ ? : ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹೊರ ತಂದಿರುವ ಪಟ್ಟಿಯಲ್ಲಿ ದಾವಣಗೆರೆ ಆಡಳಿತದಲ್ಲಿ ವಿಫಲವಾಗಿದೆ. ಇಲ್ಲಿ ದುರಾಡಳಿತ ನಡೆಸಿದೆ. ಇತ್ತೀಚಿಗೆ ನಡೆದ ಪೊಲೀಸ್ ಮತ್ತು ಗೂಂಡಾಗಳಿ ನಡುವೆ ನಡೆದ ಸಂಘರ್ಷವನ್ನು ಮುಖ್ಯವಾಗಿ ತೋರಿಸಲಾಗಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ, ಆಡಳಿತದಲ್ಲಿ ವಿಫಲವಾಗಿರುವುದು. ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಮುಸುಕಿನ ಗುದ್ದಾಟ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಅವ್ಯವಸ್ಥೆಯನ್ನು ಪಟ್ಟಿ ಮಾಡಿದೆ.






















