ಫೇಕ್ ಗೋಲ್ಡ್, ಬೇನಾಮಿ ಸಾಲಗಾರರು – ದೊಡ್ಡ ವಂಚನೆ ಬಯಲು
ದಾಂಡೇಲಿ ( ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಭಾರೀ ಆರ್ಥಿಕ ಹಗರಣ ಬೆಳಕಿಗೆ ಬಂದಿದ್ದು, ನಕಲಿ ಚಿನ್ನವನ್ನು ಅಡವಿಟ್ಟು ಕೋಟ್ಯಾಂತರ ರೂಪಾಯಿ ವಂಚನೆ ನಡೆಸಿದ ಪ್ರಕರಣ ದಾಖಲಾಗಿದೆ. ನಗರದ ಜೆ.ಎನ್. ರಸ್ತೆಯಲ್ಲಿರುವ ತಾಮೀರ್ ಕೋ-ಆಪರೇಟಿವ್ ಕ್ರೇಡಿಟ್ ಸೊಸೈಟಿಯಲ್ಲಿ ಈ ಅವ್ಯವಹಾರ ನಡೆದಿರುವುದು ಪತ್ತೆಯಾಗಿದೆ.
ಸಹಕಾರಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುಮಾರು ₹6 ಕೋಟಿ ಮೌಲ್ಯದ ವಂಚನೆ ನಡೆದಿರುವುದಾಗಿ ಅಂದಾಜಿಸಲಾಗಿದೆ. ವಿಶೇಷವಾಗಿ, 208 ನಕಲಿ ಖಾತೆಗಳ ಮೂಲಕ ಈ ಮೋಸದ ಜಾಲ ಹಬ್ಬಿಸಿದ್ದರೆಂಬ ಸಂಗತಿ ತನಿಖೆಯಲ್ಲಿ ಹೊರಬಂದಿದೆ.
ಹೇಗೆ ನಡೆದಿತ್ತು ವಂಚನೆ? : ಪ್ರಾಥಮಿಕ ತನಿಖೆಯ ಪ್ರಕಾರ, 2021ರಿಂದ 2024ರವರೆಗೆ ಸಂಸ್ಥೆಯ ಸ್ಥಳೀಯ ಶಾಖಾ ವ್ಯವಸ್ಥಾಪಕರು ಹಾಗೂ ಕೆಲವು ಸಿಬ್ಬಂದಿಗಳು ಸೇರಿಕೊಂಡು ಈ ಅವ್ಯವಹಾರ ನಡೆಸಿದ್ದಾರೆ. ನಕಲಿ ಚಿನ್ನವನ್ನು ಅಡವಿಟ್ಟು, ಬೇನಾಮಿ ಸಾಲಗಾರರನ್ನು ಸೃಷ್ಟಿಸಿ, ಅವರ ಹೆಸರಿನಲ್ಲಿ ಸಾಲ ಮಂಜೂರಾತಿ ಮಾಡಿಸಿಕೊಂಡು ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದು ತಿಳಿದುಬಂದಿದೆ.
ಆರೋಪಿಗಳ ವಿರುದ್ಧ ಪ್ರಕರಣ : ಈ ಪ್ರಕರಣದಲ್ಲಿ ಶಾಖಾ ವ್ಯವಸ್ಥಾಪಕ ಸೇರಿ ಹಲವು ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ತನಿಖೆ ತೀವ್ರ : ನಗರ ಠಾಣೆಯ ಅಪರಾಧ ವಿಭಾಗದ ಪಿ.ಎಸ್.ಐ ಕಿರಣ ಪಾಟೀಲ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ಪ್ರಕರಣದ ವ್ಯಾಪ್ತಿ ದೊಡ್ಡದಿರುವುದರಿಂದ, ಉನ್ನತ ಮಟ್ಟದ ತನಿಖೆ ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಸ್ಥಳೀಯ ಗ್ರಾಹಕರು “ಸಂಪೂರ್ಣ ಹಾಗೂ ನಿಷ್ಪಕ್ಷಪಾತ ತನಿಖೆ ನಡೆದರೆ ಇನ್ನಷ್ಟು ಪ್ರಭಾವಿ ವ್ಯಕ್ತಿಗಳ ಪಾತ್ರ ಬಹಿರಂಗವಾಗಬಹುದು” ಎಂದು ಒತ್ತಾಯಿಸಿದ್ದಾರೆ. ಪೊಲೀಸರು ಮುಂದಿನ ತನಿಖೆಯನ್ನು ವೇಗಗೊಳಿಸಿದ್ದು, ಪ್ರಕರಣದ ಇನ್ನಷ್ಟು ಅಂಶಗಳು ಬಹಿರಂಗವಾಗುವ ನಿರೀಕ್ಷೆಯಿದೆ.






















