Youtubeನಿಂದ ಸ್ಯಾಂಡಲ್‌ವುಡ್‌ಗೆ: KEB ಪಯಣ
ಬೆಂಗಳೂರು: ಕನ್ನಡದ ಜನಪ್ರಿಯ ಯೂಟ್ಯೂಬ್ ಚಾನೆಲ್‌ಗಳಲ್ಲಿ ಒಂದಾಗಿದ್ದ ‘KEB’ (ಕರ್ನಾಟಕ ಎಂಟರ್ಟೈನ್‌ಮೆಂಟ್ ಬೋರ್ಡ್) ಹಲವು ವರ್ಷಗಳ ವಿರಾಮದ ಬಳಿಕ ಮತ್ತೆ ಸಕ್ರಿಯಗೊಂಡಿದ್ದು, ಇದೀಗ ಸಿನಿಮಾ ನಿರ್ಮಾಣದತ್ತ ಹೆಜ್ಜೆ ಇಟ್ಟಿದೆ. ಈ ಚಾನೆಲ್ ಅನ್ನು ನಟ ಡಾಲಿ ಧನಂಜಯ್ ಮತ್ತು ಅವರ ಗೆಳೆಯರು ಆರಂಭಿಸಿದ್ದರು.
ಒಂದು ಕಾಲದಲ್ಲಿ ಯೂಟ್ಯೂಬ್‌ನಲ್ಲಿ ಹಾಸ್ಯ ವಿಡಿಯೋಗಳ ಮೂಲಕ ಜನಪ್ರಿಯತೆ ಗಳಿಸಿದ್ದ ‘ಕೆಇಬಿ’ ತಂಡದಲ್ಲಿ ಕೆಲಸ ಮಾಡಿದ್ದ ಹಲವರು ಇಂದು ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ನಟರು ಮತ್ತು ನಿರ್ದೇಶಕರಾಗಿದ್ದಾರೆ. ನಾಗಭೂಷಣ್, ಮೈಸೂರು ಪೂರ್ಣ, ಶಶಾಂಕ್ ಸೋಗಾಲ, ಮಹದೇವ ಪ್ರಸಾದ್ ಸೇರಿದಂತೆ ಹಲವು ಪ್ರತಿಭೆಗಳು ಈ ತಂಡದ ಭಾಗವಾಗಿದ್ದರು.
ಆದರೆ ಕಳೆದ ಏಳು ವರ್ಷಗಳಿಂದ ಚಾನೆಲ್ ಸಂಪೂರ್ಣ ನಿಶ್ಚಲವಾಗಿತ್ತು. ಇದೀಗ ಮತ್ತೆ ಹಳೆಯ ತಂಡ ಒಂದಾಗಿ ಯೂಟ್ಯೂಬ್‌ನಲ್ಲಿ ಹೊಸ ವಿಡಿಯೋ ಹಂಚಿಕೊಂಡು, ‘ಕೆಇಬಿ’ ಹೊಸ ಅಧ್ಯಾಯಕ್ಕೆ ಚಾಲನೆ ನೀಡಿದೆ. ವಿಶೇಷವೆಂದರೆ, ಈ ಬಾರಿ ಕೇವಲ ಯೂಟ್ಯೂಬ್ ವಿಡಿಯೋಗಳಲ್ಲ, ಸಿನಿಮಾ ನಿರ್ಮಾಣದ ಮೂಲಕ ಹೊಸ ಪ್ರಯತ್ನಕ್ಕೆ ಕೈ ಹಾಕಲಾಗಿದೆ.
ಸಿನಿಮಾ ಘೋಷಣೆ – ‘ಪ್ಯಾನ್ ಯೂನಿವರ್ಸ್’ ಪ್ರಯೋಗ: ‘ಕೆಇಬಿ’ ತಂಡವು ಹಾಸ್ಯಮಯ ಕಥೆಯೊಂದನ್ನು ಸಿನಿಮಾ ರೂಪದಲ್ಲಿ ತರಲು ಮುಂದಾಗಿದೆ. ಈ ಚಿತ್ರದ ಕಥೆ ಮತ್ತು ಚಿತ್ರಕತೆ ಮೈಸೂರು ಪೂರ್ಣ ಅವರು ರಚಿಸಿದ್ದು, ಡಾಲಿ ಧನಂಜಯ್ ನಿರ್ಮಾಣ ಹೊಣೆ ಹೊತ್ತಿದ್ದಾರೆ. ‘ಕೆಇಬಿ’ ಮತ್ತು ಡಾಲಿ ಪಿಚರ್ಸ್ ಒಟ್ಟಿಗೆ ಈ ಚಿತ್ರವನ್ನು ಪ್ರೆಸೆಂಟ್ ಮಾಡಲಿವೆ.
ಏಪ್ರಿಲ್ 1 ರಂದು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಚಿತ್ರದ ಶೀರ್ಷಿಕೆಯನ್ನು ಚೈನೀಸ್ ಸೇರಿದಂತೆ ವಿವಿಧ ಭಾಷೆಯಲ್ಲಿ ನೀಡಿರುವುದು ವಿಶೇಷ. ಇದನ್ನು “ಪ್ಯಾನ್ ಯೂನಿವರ್ಸ್ ಸಿನಿಮಾ” ಎಂದು ತಂಡವೇ ಹೇಳಿಕೊಂಡಿದ್ದು, ಹೊಸ ರೀತಿಯ ಪ್ರಯೋಗಕ್ಕೆ ಸಜ್ಜಾಗಿದೆ.
ಡಾಲಿ ಧನಂಜಯ್ ಪ್ರತಿಕ್ರಿಯೆ : ಚಿತ್ರದ ಬಗ್ಗೆ ಮಾತನಾಡಿದ ಡಾಲಿ ಧನಂಜಯ್, “ಮೈಸೂರು ಪೂರ್ಣ ಅವರು ಬರೆದಿದ್ದ ಕಥೆ ಹಲವು ತಿಂಗಳುಗಳಿಂದ ನನ್ನ ಬಳಿ ಇತ್ತು. ಇತ್ತೀಚೆಗೆ ಓದಿದಾಗ ಇದು ಖಂಡಿತ ಸಿನಿಮಾ ಆಗಬೇಕು ಅನ್ನಿಸಿತು. ಇದು ಅದ್ಭುತ ಕಥೆ” ಎಂದು ಹೇಳಿದ್ದಾರೆ.
ಕೆಇಬಿ ಹಂಚಿಕೊಂಡಿರುವ ವಿಡಿಯೋದಲ್ಲಿ ಡಾಲಿ ಧನಂಜಯ್ ಧ್ವನಿಯೂ ಕೇಳಿಬಂದಿದ್ದು, “ಸ್ಕ್ರಿಪ್ಟ್ ಓದಿದ್ದೇನೆ… ಸಿನಿಮಾ ಮಾಡೋಣ!” ಎಂಬ ಮಾತು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಟೈಟಲ್ ಬಗ್ಗೆ ಕುತೂಹಲ : ಚಿತ್ರತಂಡವು ವಿವಿಧ ಭಾಷೆಗಳಲ್ಲಿ ಪೋಸ್ಟರ್ ಹಂಚಿಕೊಂಡು, “ಟೈಟಲ್ guess ಮಾಡಿ” ಎಂದು ಅಭಿಮಾನಿಗಳಿಗೆ ಸವಾಲು ಹಾಕಿದೆ. ಸಿನಿ ವಲಯದಲ್ಲಿ ಈ ಚಿತ್ರದ ಶೀರ್ಷಿಕೆ “Mother Promise” ಆಗಿರಬಹುದು ಎಂಬ ಅಂದಾಜು ವ್ಯಕ್ತವಾಗುತ್ತಿದೆ. ಆದರೆ ಅಧಿಕೃತ ಘೋಷಣೆ ಇನ್ನಷ್ಟೇ ಬಾಕಿಯಿದೆ.























