ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಯುವ ಎಡಗೈ ವೇಗಿ ಮಂಗೇಶ್ ಯಾದವ್ ಅವರನ್ನು ಈ ಆವೃತ್ತಿಗೆ ಖರೀದಿಸಿದೆ. ಮಾರ್ಚ್ 28ರಂದು ಆರಂಭಗೊಳ್ಳಲಿರುವ ಐಪಿಎಲ್ 19ನೇ ಆವೃತ್ತಿಯಲ್ಲಿ ಈ ಮಂಗೇಶ್ ಯಾದವ್, ತಂಡದ ಎಡಗೈ ಬೌಲರ್‌ಗಳ ಸಮಸ್ಯೆಯನ್ನು ನೀಗಿಸುವ ಭರವಸೆ ನೀಡಿದ್ದು, ಈತನಿಗೆ ಫ್ರಾಂಚೈಸಿ ಬರೋಬ್ಬರಿ 5.2 ಕೋಟಿ ನೀಡಿದೆ.
ಮಂಗೇಶ್ ಯಾದವ್ ವೃತ್ತಿಪರ ಕ್ರಿಕೆಟ್‌ನಲ್ಲಿ ಚೆಂಡನ್ನು ಬೌಲಿಂಗ್ ಮಾಡುವ ಮೊದಲು, ಅವರ ತಂದೆ ರಾಮಾವಧ್ ಯಾದವ್ ರಾತ್ರಿಯಿಡೀ ಕೆಲಸ ಮಾಡುತ್ತಿದ್ದರು. ತಮ್ಮ ಮಗನ ಕನಸಿಗೆ ಹಣವನ್ನು ಹೇಗೆ ದುಡಿಯುವುದು ಎಂಬುದನ್ನೇ ಆಲೋಚಿಸುತ್ತಾ ಹಲವು ರಾತ್ರಿಗಳನ್ನು ನಿದ್ದೆ ಇಲ್ಲದೇ ಕಳೆದಿದ್ದಾರೆ. ಮಂಗೇಶ್ ಯಾದವ್ ಈಗ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನೊಂದಿಗೆ 5.2 ಕೋಟಿ ಒಪ್ಪಂದಕ್ಕೆ ಒಳಪಟ್ಟಿದ್ದಾರೆ.
ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ ಬೋರ್ಗಾಂವ್‌ನ 23 ವರ್ಷದ ಯುವಕ ಸಾಧಾರಣ ವಾತಾವರಣದಲ್ಲಿ ಕ್ರಿಕೆಟ್ ಆಡುತ್ತಾ ಬೆಳೆದ ಮಂಗೇಶ್, ಟೆನಿಸ್ ಬಾಲ್ ಪಂದ್ಯಾವಳಿಗಳಲ್ಲಿ ಸಾಮರ್ಥ್ಯವನ್ನು ಗುರುತಿಸಿಕೊಂಡಿದ್ದರು. ಕೋಚ್ ಫೂಲ್ ಚಂದ್ ಶರ್ಮಾ ಅವರ ಅಡಿಯಲ್ಲಿ ತರಬೇತಿ ಪಡೆಯಲು ದೆಹಲಿಗೆ ಪ್ರಯಾಣಿಸಲು ಪ್ರೋತ್ಸಾಹಿಸಿದವರು ಅವನ ಚಿಕ್ಕಪ್ಪ.
ಮಂಗೇಶ್‌ಗೆ ಮಧ್ಯಪ್ರದೇಶ ಟಿ20 ಲೀಗ್‌ನಲ್ಲಿ ದೊಡ್ಡ ತಿರುವು ಸಿಕ್ಕಿತು, ಅಲ್ಲಿ ಮಂಗೇಶ್ ಕೇವಲ ಆರು ಪಂದ್ಯಗಳಲ್ಲಿ 12.00 ಸರಾಸರಿಯಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದರು. ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶವನ್ನು ಪ್ರತಿನಿಧಿಸಿದರು. ಸದ್ಯ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವ ಅವಕಾಶ ದೊರೆತಿದೆ.





















