ಬೆಂಗಳೂರು: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೊಸ ವಿವಾದ ತಲೆದೋರಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ವಿರುದ್ಧ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಾಶಪ್ಪನವರ್, ಶಾಸಕರು ಹಾಗೂ ಸಚಿವರಿಗೆ ಟಿಕೆಟ್ ನೀಡದೇ ಆನ್‌ಲೈನ್ ಬುಕ್ಕಿಂಗ್ ಮೂಲಕ ಮಾತ್ರ ಟಿಕೆಟ್ ಮಾರಾಟ ಮಾಡುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದರು. “₹5,000 ಮೌಲ್ಯದ ಟಿಕೆಟ್‌ಗಳು ಕಪ್ಪು ಮಾರುಕಟ್ಟೆಯಲ್ಲಿ ಅಧಿಕ ಮೊತ್ತಕ್ಕೆ ಮಾರಾಟವಾಗುತ್ತಿವೆ. ಇದು ವ್ಯವಸ್ಥೆಯ ದೋಷವನ್ನು ತೋರಿಸುತ್ತದೆ” ಎಂದು ಅವರು ಹೇಳಿದರು.
ನಾವು VIPಗಳು ಕನಿಷ್ಠ ಐದು ಟಿಕೆಟ್ ಬೇಕು : ಇದೇ ವೇಳೆ, ಚುನಾಯಿತ ಪ್ರತಿನಿಧಿಗಳಿಗೆ ಕನಿಷ್ಠ ಐದು ಟಿಕೆಟ್‌ಗಳನ್ನು ಪ್ರತ್ಯೇಕ ಆಸನ ವ್ಯವಸ್ಥೆಯೊಂದಿಗೆ ನೀಡಬೇಕು ಎಂದು ಅವರು ಒತ್ತಾಯಿಸಿದರು. “ನಾವು ವಿಐಪಿಗಳು; ಸಾರ್ವಜನಿಕರೊಂದಿಗೆ ಸರತಿ ಸಾಲಿನಲ್ಲಿ ನಿಲ್ಲಲು ಸಾಧ್ಯವಿಲ್ಲ. ಕಳೆದ ಬಾರಿ ನಮಗೆ ಸಾಮಾನ್ಯ ಗ್ಯಾಲರಿಯಲ್ಲಿ ಆಸನ ನೀಡಲಾಗಿತ್ತು. ಈ ಬಾರಿ ಅದು ಮರುಕಳಿಸಬಾರದು” ಎಂದು ಅವರು ಸ್ಪಷ್ಟಪಡಿಸಿದರು.
ವಿಧಾನಸಭೆಯಲ್ಲೂ IPL ಟಿಕೆಟ್ ಪ್ರಸ್ತಾಪ: ಐಪಿಎಲ್ ಟಿಕೆಟ್ ವಿಚಾರವನ್ನು ವಿಧಾನಸಭೆಯಲ್ಲೂ ಪ್ರಸ್ತಾಪಿಸಲಾಗಿದ್ದು, ಬಿಜೆಪಿ, ಕಾಂಗ್ರೆಸ್ ಶಾಸಕರೂ ಸಹ ಟಿಕೆಟ್ಗಾಗಿ ಒಕ್ಕೊರಲಿನಿಂದ ಮನವಿ ಮಾಡಿದರು. ಅಲ್ಲಿ ನಮಗೊಂದು ಪಾಸ್ ಕೊಡಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ದೂರಿದರು. ಶಾಸಕರು, ಸಚಿವರಿಗೆ ಪ್ರತ್ಯೇಕ ಗ್ಯಾಲರಿ ಮಾಡಿಸಿ ಎಂದು ಆಗ್ರಹಿಸಿದ್ದಾರೆ.
ಸೂಕ್ತ ಕ್ರಮಕ್ಕೆ DK : ಇನ್ನು ಈ ಕುರಿತಂತೆ ಪ್ರತಿಕ್ರೀಯೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕರು ಕೇಳೋದ್ರಲ್ಲಿ ತಪ್ಪೇನಿಲ್ಲ. ನಾನೂ ಕೂಡ ಅಲ್ಲಿ ಸದಸ್ಯ. ಕೆಎಸ್‌ಸಿಎ ಅಧ್ಯಕ್ಷರನ್ನು ಕರೆಸಿ ಮಾತನಾಡುತ್ತೇನೆ. ಸ್ಪೀಕರ್ ಖಾದರ್ ಆದೇಶ, ಪ್ರತಿಪಕ್ಷ ಸದಸ್ಯರು ಸೇರಿ ಶಾಸಕರ ಮನವಿಯನ್ನು ಕೆಎಸ್ಸಿಎಗೆ ತಿಳಿಸುತ್ತೇನೆ. ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.






















