ಧಾರವಾಡ: ಭಾರತದ ಮೂಲ ಶಕ್ತಿ ಅಧ್ಯಾತ್ಮವಾಗಿದ್ದು, ಧರ್ಮ ಕೇವಲ ಪೂಜಾ ಪದ್ಧತಿಯಲ್ಲ. ಯಾರಿಗೂ ತೊಂದರೆ ಕೊಡದೇ ಎಲ್ಲರೂ ಬದುಕಲು ಅವಕಾಶ ಕೊಡುವುದು ನಮ್ಮ ದೇಶದ ಸಂಪ್ರದಾಯ. ಹೀಗಾಗಿ ಹಣ ಗಳಿಸಲು ವಿದೇಶಕ್ಕೆ ಹೋದವರು ಜೀವ ಉಳಿಸಿಕೊಳ್ಳಲು ತಾಯ್ನಾಡಿಗೆ ಬರುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಧಾರವಾಡ ತಾಲೂಕು ಉಪ್ಪಿನಬೆಟಗೇರಿಯಲ್ಲಿ ಶ್ರೀ ಗುರು ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಾದಿ ಶಿವಶರಣರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವು ಸಾಗಬೇಕು. ನಾವೆಲ್ಲರೂ ಧರ್ಮದಿಂದ ಬಾಳಿ ಬದುಕಬೇಕಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಪ್ರಸಕ್ತ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧದಲ್ಲಿ, ಯುದ್ಧ ಮಾಡುವವರು ಮನುಷ್ಯರನ್ನು ಮಾನವೀಯತೆಯಲ್ಲಿ ನೋಡದೇ ಕೇವಲ ಸಾವಿನ ಅಂಕಿ ಸಂಖ್ಯೆಯಲ್ಲಿ ನೋಡುತ್ತಿರುವುದು ಮಾನವೀಯತೆ ಮರೆಯಾದಂತೆ ಆಗಿದೆ. ಮನುಕುಲದ ಒಳಿತಿಗಾಗಿ ಈಗ ನಡೆಯುತ್ತಿರುವ ಯುದ್ಧ ನಿಲ್ಲಬೇಕಾಗಿದೆ ಎಂದರು.
ಯಾವುದೇ ಅಪೇಕ್ಷೆ ಇಲ್ಲದೇ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಬಂದಿರುವ ನಿಮ್ಮದು ಪವಿತ್ರವಾದ ಭಕ್ತಿಯಾಗಿದೆ. ಈ ಗ್ರಾಮಕ್ಕೆ ದೊಡ್ಡ ಇತಿಹಾಸವಿದೆ. ಇತಿಹಾಸವನ್ನು ತಿಳಿದುಕೊಂಡವರು ಭವಿಷ್ಯವನ್ನು ನಿರ್ಮಿಸುತ್ತಾರೆ. ಬದುಕು ಮತ್ತು ಮಠಕ್ಕೆ ಬಹಳಷ್ಟು ಅವಿನಾಭಾವ ಸಂಬಂಧವಿರುತ್ತದೆ. ಜನರ ಬದುಕಿನಲ್ಲಿ ಮೌಲ್ಯಗಳನ್ನು ತುಂಬುವ ಕೆಲಸವನ್ನು ಮಠ ಮಾನ್ಯಗಳು ಮಾಡುತ್ತಿವೆ ಎಂದರು.
ಈಗಾಗಲೇ ನನಗೆ ಜಾತ್ಯಾತೀತವಾಗಿ ಮತ್ತು ಪಕ್ಷಾತೀತವಾಗಿ ಉಪ್ಪಿನಬೆಟಗೇರಿ ಗ್ರಾಮದ ಜನತೆ ಮತ್ತು ಪೂಜ್ಯರು ಆಶೀರ್ವಾದ ಮಾಡಿದ್ದಾರೆ. ಶ್ರೀಮಠದ ಕುಮಾರ ವಿರೂಪಾಕ್ಷ ಶ್ರೀಗಳ ಆಶೀರ್ವಾದದಿಂದಲೇ ನಾನು ಜೀವನದಲ್ಲಿ ಇಷ್ಟು ಎತ್ತರಕ್ಕೇರಿದ್ದೇನೆ. ಶ್ರೀಮಠದ ಮೇಲಿರುವ ನನ್ನ ಭಕ್ತಿ ಚಿರಸ್ಥಾಯಿಯಾಗಿ ಉಳಿಯಲಿದೆ. ಗ್ರಾಮಕ್ಕೆ ಗ್ರಾಮದ ಜನತೆಗಾಗಿ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ನಮ್ಮ ಸಂಸ್ಕಾರ ಕಾಯಕ ಸಂಸ್ಕಾರವಾಗಿದ್ದು, ಕಾಯಕ ಪೂಜೆಗಿಂತ ದೊಡ್ಡದು. ದುಡ್ಡೇ ದೊಡ್ಡಪ್ಪ ಅಲ್ಲಾ, ದುಡಿಮೆಯೇ ದೊಡ್ಡಪ್ಪ. ಹೃದಯದಲ್ಲಿ ಧರ್ಮವನ್ನು ತುಂಬುವುದು ಮಠಗಳ ಕಾರ್ಯವಾಗಿದ್ದು, ಎಲ್ಲಿಯವರೆಗೆ ಭಕ್ತರಿರುತ್ತಾರೆ ಅಲ್ಲಿಯವರೆಗೆ ಮಠ ಮಾನ್ಯಗಳು ಇರುತ್ತವೆ ಎಂದರು.
ಸೋಮವಾರದ ಕಾರ್ಯಕ್ರಮ: 23ರಂದು ಬೆಳಿಗ್ಗೆ 10 ಗಂಟೆಗೆ ಸಹಸ್ರ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದ್ದು, ಮಣಕವಾಡ ಅನ್ನದಾನೇಶ್ವರ ದೇವಮಂದಿರ ಮಹಾಮಠದ ಅಭಿನಯ ಮೃತ್ಯುಂಜಯ ಸ್ವಾಮೀಜಿ, ಅಂಕಲಗಿ ಕುಂದರಗಿ ಅಡವಿಸಿದ್ದೇಶ್ವರ ಮಠದ ಡಾ.ಅಮರಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮಮದಾಪುರ ಮುರುಘೇಂದ್ರ ಶಿವಯೋಗಿಗಳ ವಿರಕ್ತಮಠದ ಅಭಿನವ ಮುರುಘೇಂದ್ರ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಮಹೋತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ನೆರವೇರಲಿದ್ದು, ಸಂಜೆ 5 ಗಂಟೆಗೆ ಶ್ರೀ ಜಗದ್ಗುರು ವಿರೂಪಾಕ್ಷೇಶ್ವರ ರಥೋತ್ಸವವು ವಿಜೃಂಭಣೆಯಿಂದ ಜರುಗಲಿದೆ. ರಾತ್ರಿ 10 ಗಂಟೆಗೆ ಶ್ರೀ ಗುರು ವಿರೂಪಾಕ್ಷೇಶ್ವರ ನಾಟ್ಯ ಸಂಘದವರಿಂದ ‘ಮಾತು ಬಿದ್ದಿತು, ಮೌನ ಗೆದ್ದಿತು’ ಸಾಮಾಜಿಕ ನಾಟಕ ನಡೆಯಲಿದೆ.























