Home Advertisement
Home ಸಿನಿ ಮಿಲ್ಸ್ ಚೈತ್ರ ನವರಾತ್ರಿಗೆ ಕೃಷ್ಣನ ನೆನೆದ ಮೋದಿ – ಕನ್ನಡಿಗರಲ್ಲಿ ಸಂತಸ

ಚೈತ್ರ ನವರಾತ್ರಿಗೆ ಕೃಷ್ಣನ ನೆನೆದ ಮೋದಿ – ಕನ್ನಡಿಗರಲ್ಲಿ ಸಂತಸ

0
105

ನವದೆಹಲಿ/ಬೆಂಗಳೂರು: ಚೈತ್ರ ನವರಾತ್ರಿ ಮತ್ತು ಯುಗಾದಿ ಹಬ್ಬದ ಸಂಭ್ರಮದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದ ಹೆಮ್ಮೆಯ ನಟ ಡಾ. ರಾಜ್​​ಕುಮಾರ್ ಅಭಿನಯದ ‘ಶ್ರೀ ಕೃಷ್ಣದೇವರಾಯ’ ಚಿತ್ರದ ಪ್ರಸಿದ್ಧ ಭಕ್ತಿಗೀತೆಯಾದ ‘ಶ್ರೀ ಚಾಮುಂಡೇಶ್ವರಿ’ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕನ್ನಡಿಗರು ಹಾಗೂ ಅಣ್ಣಾವ್ರ ಅಭಿಮಾನಿಗಳಲ್ಲಿ ಅಪಾರ ಸಂತೋಷ ಮೂಡಿಸಿದೆ.

ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ 1970ರಲ್ಲಿ ಬಿಡುಗಡೆಯಾದ ‘ಶ್ರೀ ಕೃಷ್ಣದೇವರಾಯ’ Sri Krishnadevaraya ಚಿತ್ರದ ಪ್ರಸಿದ್ಧ ಭಕ್ತಿಗೀತೆಯಾದ ‘ಶ್ರೀ ಚಾಮುಂಡೇಶ್ವರಿ..’ ಹಾಡಿನ ಯೂಟ್ಯೂಬ್ ಲಿಂಕ್ ಹಂಚಿಕೊಂಡಿದ್ದಾರೆ. ಈ ಹಾಡಿನ ಮೂಲಕ ದೈವಭಕ್ತಿ, ನಂಬಿಕೆ ಮತ್ತು ಆಧ್ಯಾತ್ಮಿಕ ಶಕ್ತಿಯ ಸಂದೇಶವನ್ನು ಜನರಿಗೆ ನೀಡಿದ್ದಾರೆ.

ದೈವ ಭಕ್ತಿ ಸಂದೇಶ: ಹಾಡು ಹಂಚಿಕೊಳ್ಳುವ ವೇಳೆ ಮೋದಿ ಅವರು, “ದೇವಿಯ ಮೇಲಿನ ಅಚಲ ನಂಬಿಕೆಯು ಭಕ್ತರಲ್ಲಿ ಹೊಸ ಪ್ರಜ್ಞೆ ಮತ್ತು ಶಕ್ತಿಯನ್ನು ತುಂಬುತ್ತದೆ” ಎಂದು ಬರೆದು, ದೇವಿಯ ಆರಾಧನೆಯ ಮಹತ್ವವನ್ನು ತಿಳಿಸಿದ್ದಾರೆ.

ಚಿತ್ರದ ಹಿನ್ನೆಲೆ: ‘ಶ್ರೀ ಕೃಷ್ಣದೇವರಾಯ’ ಚಿತ್ರದಲ್ಲಿ ಡಾ. ರಾಜ್‌ಕುಮಾರ್ ಅವರು ವಿಜಯನಗರ ಸಾಮ್ರಾಜ್ಯದ ಮಹಾರಾಜ ಕೃಷ್ಣದೇವರಾಯ ಪಾತ್ರದಲ್ಲಿ ಅಭಿನಯಿಸಿದ್ದು, ಅವರ ಪತ್ನಿಯರ ಪಾತ್ರಗಳಲ್ಲಿ ಜಯಂತಿ ಮತ್ತು ಭಾರತಿ ವಿಷ್ಣುವರ್ಧನ ಅಭಿನಯಿಸಿದ್ದಾರೆ. ಈ ಚಿತ್ರದ ‘ಶ್ರೀ ಚಾಮುಂಡೇಶ್ವರಿ’ ಹಾಡಿಗೆ ಟಿ ಜಿ ಲಿಂಗಪ್ಪ ಸಂಗೀತ ನೀಡಿದ್ದು, ಕೆ. ಪ್ರಭಾಕರ ಶಾಸ್ತ್ರಿ ಸಾಹಿತ್ಯ ರಚಿಸಿದ್ದಾರೆ. ಪಿ. ಲೀಲಾ, ಮತ್ತು ಎಸ್​ ಗೋವಿಂದರಾಜು ಧ್ವನಿಯಲ್ಲಿ ಈ ಗೀತೆ ಮೂಡಿಬಂದಿದೆ.

ಹಬ್ಬದ ಹಿನ್ನೆಲೆ: ಈ ಹಾಡು ಹಂಚಿಕೊಳ್ಳಲು ವಿಶೇಷ ಕಾರಣವೂ ಇದೆ. ಮಾರ್ಚ್ 21ರಂದು ಚೈತ್ರ ನವರಾತ್ರಿಯ ಮೂರನೇ ದಿನವಾಗಿದ್ದು, ಈ ದಿನ ದೇವಿಯನ್ನು Maa Chandraghanta ರೂಪದಲ್ಲಿ ಪೂಜಿಸಲಾಗುತ್ತದೆ. ಇದೇ ಸಮಯದಲ್ಲಿ ಯುಗಾದಿ ಹಾಗೂ ವಸಂತೋತ್ಸವವೂ ನಡೆಯುತ್ತಿರುವ ಹಿನ್ನೆಲೆ, ದೇವಿ ಆರಾಧನೆಗೆ ಹೆಚ್ಚಿನ ಮಹತ್ವ ಸಿಕ್ಕಿದೆ.

ಕನ್ನಡಿಗರಲ್ಲಿ ಸಂತೋಷ: ಪ್ರಧಾನಿ ಮೋದಿ ಕನ್ನಡ ಚಿತ್ರದ ಹಾಡನ್ನು ಹಂಚಿಕೊಂಡಿರುವುದು ಕನ್ನಡ ಸಂಸ್ಕೃತಿಗೆ ನೀಡಿದ ಗೌರವವೆಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ವೈರಲ್ ಆಗಿದ್ದು, ಕನ್ನಡಿಗರು ಕೃತಜ್ಞತೆ ವ್ಯಕ್ತಪಡಿಸುತ್ತಿದ್ದಾರೆ.