ದಾಂಡೇಲಿ (ಉತ್ತರ ಕನ್ನಡ): ಬಹುಕಾಲದಿಂದ ನಿರೀಕ್ಷೆಯಲ್ಲಿರುವ ಕಾಳಿ ನದಿ ನೀರು ಪೂರೈಕೆ ಯೋಜನೆ ಕಾಮಗಾರಿ ವಿಳಂಬವಾಗಿರುವುದನ್ನು ಖಂಡಿಸಿ ಹಳಿಯಾಳ ತಾಲ್ಲೂಕಿನ ರೈತರು ಹಾಗೂ ವಿವಿಧ ಸಂಘಟನೆಗಳು ಸೋಮವಾರ ಸ್ವಯಂಪ್ರೇರಿತ ಬಂದ್ ಆಚರಿಸಿ ಪ್ರತಿಭಟನೆ ನಡೆಸಿದರು.
ಹಳಿಯಾಲ ತಾಲೂಕಿನ ವಿವಿಧ ಗ್ರಾಮಗಳಿಂದ ರೈತರು, ಯುವಕರು ಮತ್ತು ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. “ಕಾಳಿ ನದಿ ನೀರು ನಮ್ಮ ಹಕ್ಕು – ತಕ್ಷಣ ಯೋಜನೆ ಪೂರ್ಣಗೊಳಿಸಿ”, “ರೈತರ ಬದುಕು ಉಳಿಸಿ” ಎಂಬ ಘೋಷಣೆಗಳನ್ನು ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನೀರಾವರಿ ಕೊರತೆಯಿಂದ ರೈತರ ಸಂಕಷ್ಟ : ರೈತರ ಅಭಿಪ್ರಾಯದ ಪ್ರಕಾರ, ಹಲವು ವರ್ಷಗಳ ಹಿಂದೆ ಘೋಷಿಸಲಾದ ಈ ಯೋಜನೆ ಇನ್ನೂ ಪೂರ್ಣಗೊಳ್ಳದೇ ನಿಧಾನಗತಿಯಲ್ಲಿ ಸಾಗುತ್ತಿದೆ. ಇದರಿಂದ ಕೆರೆಗಳು ಹಾಗೂ ಬಾಂದಾರುಗಳಿಗೆ ನೀರು ತುಂಬಿಸುವ ಕಾರ್ಯ ಮುಂದುವರಿಯದೇ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.
ಮಳೆ ಅವಲಂಬಿತ ಕೃಷಿಯಿಂದ ಉತ್ಪಾದನೆ ಅಸ್ಥಿರವಾಗಿದ್ದು, ರೈತ ಕುಟುಂಬಗಳ ಜೀವನ ಸಂಕಷ್ಟಕರವಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ರೈತ ಮುಖಂಡರ ಆರೋಪ : ಪ್ರತಿಭಟನಾ ಸಭೆಯಲ್ಲಿ ರೈತ ಮುಖಂಡರಾದ ಸಂದೀಪ ಕುಮಾರ ಬೊಬಾಟೆ, ನಾಗೇಂದ್ರ ಶಿವೋಜಿ ಹಾಗೂ ಶಂಕರ ಕಾಜಗಾರ ಮಾತನಾಡಿ, “ಕಾಳಿ ನದಿ ನೀರು ಯೋಜನೆ ಪೂರ್ಣಗೊಂಡರೆ ಹಳಿಯಾಳ ಭಾಗದ ಸಾವಿರಾರು ಎಕರೆ ಕೃಷಿಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಯೋಜನೆ ವರ್ಷಗಳ ಕಾಲ ವಿಳಂಬವಾಗುತ್ತಿದೆ” ಎಂದು ಆರೋಪಿಸಿದರು.
ಹೋರಾಟ ತೀವ್ರಗೊಳಿಸುವ ಎಚ್ಚರಿಕೆ : ಸರ್ಕಾರ ತಕ್ಷಣ ಕಾಮಗಾರಿಯನ್ನು ವೇಗಗೊಳಿಸಿ ಆದಷ್ಟು ಬೇಗ ಯೋಜನೆ ಪೂರ್ಣಗೊಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ. ರೈತರ ಈ ಪ್ರತಿಭಟನೆಯಿಂದ ಹಳಿಯಾಳ ಭಾಗದಲ್ಲಿ ಕಾಳಿ ನದಿ ನೀರು ಯೋಜನೆ ಕುರಿತ ಚರ್ಚೆ ಮತ್ತೊಮ್ಮೆ ಜೋರಾಗಿದೆ. ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳು ಈ ಕುರಿತು ಯಾವ ಕ್ರಮ ಕೈಗೊಳ್ಳುತ್ತವೆ ಎಂಬುದರತ್ತ ಈಗ ಸಾರ್ವಜನಿಕರ ಗಮನ ಕೇಂದ್ರೀಕೃತವಾಗಿದೆ.























