Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ದಾಂಡೇಲಿ 24×7 ನೀರಿನ ಯೋಜನೆಗೆ ಕಳಪೆ ಕಾಮಗಾರಿ ಆರೋಪ: ಸಾರ್ವಜನಿಕರ ಆಕ್ರೋಶ

ದಾಂಡೇಲಿ 24×7 ನೀರಿನ ಯೋಜನೆಗೆ ಕಳಪೆ ಕಾಮಗಾರಿ ಆರೋಪ: ಸಾರ್ವಜನಿಕರ ಆಕ್ರೋಶ

0
188

ದಾಂಡೇಲಿ (ಉತ್ತರ ಕನ್ನಡ): ದಾಂಡೇಲಿ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ₹60 ಕೋಟಿ ವೆಚ್ಚದಲ್ಲಿ ಜಾರಿಯಲ್ಲಿರುವ 24×7 ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಅದರ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಲು ಗುತ್ತಿಗೆದಾರ ಸಂಸ್ಥೆಗೆ 2026ರ ಮೇ 19ರವರೆಗೆ ಗಡುವು ನೀಡಲಾಗಿದೆ. ಆದರೆ ಕಾಮಗಾರಿ ನಡೆಯುತ್ತಿರುವ ಹಲವು ಪ್ರದೇಶಗಳಲ್ಲಿ ತಾಂತ್ರಿಕ ದೋಷಗಳು ಕಂಡುಬರುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿದೆ.

ನಗರದ ವಿವಿಧ ವಾರ್ಡ್‌ಗಳಲ್ಲಿ ಅಳವಡಿಸಿರುವ ಪೈಪ್‌ಲೈನ್‌ಗಳು ನೀರಿನ ಒತ್ತಡ ತಾಳದೇ ಕೆಲವು ಕಡೆ ಕಿತ್ತುಬರುವ ಘಟನೆಗಳು ವರದಿಯಾಗುತ್ತಿವೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಇನ್ನೂ ಯೋಜನೆ ಪೂರ್ಣಗೊಳ್ಳದ ಹಂತದಲ್ಲಿಯೇ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಅನುಮಾನ ಹುಟ್ಟಿಸಿದೆ.

ಪೈಪ್‌ಲೈನ್ ಅಳವಡಿಕೆಯಲ್ಲಿ ದೋಷಗಳ ಆರೋಪ: ಸಾರ್ವಜನಿಕರ ಪ್ರಕಾರ, ಕೆಲವೆಡೆ ಪೈಪ್‌ಲೈನ್ ಅಳವಡಿಕೆ ಸರಿಯಾಗಿ ಮಾಡದಿರುವುದು, ರಸ್ತೆಗಳು ತೋಡಿದ ನಂತರ ಅವುಗಳನ್ನು ಸರಿಯಾಗಿ ಮರುಸ್ಥಾಪನೆ ಮಾಡದಿರುವುದು ಹಾಗೂ ಕೆಲವು ಭಾಗಗಳಲ್ಲಿ ಲೀಕೆಜ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಇದರಿಂದ ಭವಿಷ್ಯದಲ್ಲಿ 24 ಗಂಟೆಗಳ ನಿರಂತರ ನೀರು ಪೂರೈಕೆ ಸಾಧ್ಯವಾಗುವುದೇ ಎಂಬ ಪ್ರಶ್ನೆ ಎದುರಾಗಿದೆ.

“ಇನ್ನೂ ಕಾಮಗಾರಿ ಪೂರ್ಣವಾಗಿಲ್ಲ. ಈಗಲೇ ಪೈಪ್‌ಗಳು ಒತ್ತಡ ತಾಳದೇ ಕಿತ್ತುಬರುತ್ತಿವೆ ಎಂದರೆ, ಯೋಜನೆ ಪೂರ್ಣಗೊಂಡ ಬಳಿಕ 24 ಗಂಟೆಗಳ ನೀರು ಪೂರೈಕೆ ವ್ಯವಸ್ಥೆ ಹೇಗೆ ಸ್ಥಿರವಾಗಿ ನಡೆಯಲಿದೆ?” ಎಂಬ ಪ್ರಶ್ನೆ ಸ್ಥಳೀಯ ನಾಗರಿಕರಲ್ಲಿ ಕೇಳಿಬರುತ್ತಿದೆ.

ತುರ್ತುಗತಿಯಲ್ಲಿ ಕಾಮಗಾರಿ? : ಮೇ 19ರ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸುವ ಒತ್ತಡದ ಹಿನ್ನೆಲೆಯಲ್ಲಿ ತುರ್ತುಗತಿಯಲ್ಲಿ ಕೆಲಸ ಮುಗಿಸಲು ಹೋಗಿ ಗುಣಮಟ್ಟದ ಮೇಲೆ ರಾಜಿ ಮಾಡಿಕೊಳ್ಳಲಾಗುತ್ತಿದೆ ಎಂಬ ಶಂಕೆಯೂ ವ್ಯಕ್ತವಾಗಿದೆ. ಇದರ ಪರಿಣಾಮವಾಗಿ ಭವಿಷ್ಯದಲ್ಲಿ ಮತ್ತೆ ದುರಸ್ತಿ ಕಾರ್ಯಗಳಿಗೆ ದೊಡ್ಡ ಪ್ರಮಾಣದ ಹಣ ವೆಚ್ಚವಾಗುವ ಸಾಧ್ಯತೆ ಇದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

ಹೊಣೆಗಾರಿಕೆ ಯಾರದು? : ಈ ಹಿನ್ನೆಲೆಯಲ್ಲಿ ಮತ್ತೊಂದು ಪ್ರಮುಖ ಪ್ರಶ್ನೆ ಎದುರಾಗಿದೆ. ಕಳಪೆ ಕಾಮಗಾರಿಗೆ ಹೊಣೆಗಾರರು ಯಾರು?, ಗುತ್ತಿಗೆದಾರ ಸಂಸ್ಥೆಯಾ?, ಕಾಮಗಾರಿ ಮೇಲ್ವಿಚಾರಣೆ ಮಾಡಬೇಕಾದ ತಾಂತ್ರಿಕ ಅಧಿಕಾರಿಗಳಾ?, ಅಥವಾ ಯೋಜನೆಯನ್ನು ತ್ವರಿತವಾಗಿ ಜಾರಿಗೆ ತರುವಂತೆ ಒತ್ತಾಯಿಸಿದವರಾ?

ತಾಂತ್ರಿಕ ಪರಿಶೀಲನೆಗೆ ಆಗ್ರಹ : ನಗರದ ನಾಗರಿಕರು ಯೋಜನೆ ಪೂರ್ಣಗೊಳ್ಳುವ ಮೊದಲು ಸಮಗ್ರ ತಾಂತ್ರಿಕ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಕಳಪೆ ಕಾಮಗಾರಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇಲ್ಲವಾದರೆ ₹60 ಕೋಟಿ ವೆಚ್ಚದ ಮಹತ್ವಾಕಾಂಕ್ಷಿ ಯೋಜನೆ ಮತ್ತೊಂದು ಅರ್ಧಮರ್ಧ ಅಭಿವೃದ್ಧಿ ಕಾಮಗಾರಿ ಆಗಿ ಉಳಿಯುವ ಭೀತಿ ವ್ಯಕ್ತವಾಗಿದೆ.

ಮೇ 19ರ ಗಡುವು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ, ದಾಂಡೇಲಿಗೆ ನಿಜವಾಗಿಯೂ 24×7 ಶುದ್ಧ ಕುಡಿಯುವ ನೀರು ಪೂರೈಕೆ ಸಿಗುತ್ತದೆಯೇ? ಅಥವಾ ಈ ಯೋಜನೆ ಕಾಗದದಲ್ಲೇ ಉಳಿಯುತ್ತದೆಯೇ? ಎಂಬುದನ್ನು ಕಾಲವೇ ಉತ್ತರಿಸಬೇಕಿದೆ ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.