ದಾವಣಗೆರೆ: ಇಸ್ರೇಲ್ ಮತ್ತು ಇರಾನ್ ನಡುವೆ ಶನಿವಾರ ಆರಂಭವಾಗಿರುವ ಯುದ್ಧ ಹಿನ್ನೆಲೆಯಲ್ಲಿ ಜಿಲ್ಲೆಯ ಜಗಳೂರು ತಾಲೂಕು ಮತ್ತು ಬಳ್ಳಾರಿ ಮೂಲದ 50 ಜನರ ಪ್ರವಾಸಿಗರು ವಿಮಾನ ರದ್ದುಗೊಂಡು ದುಬೈನಲ್ಲಿ ಸುರಕ್ಷಿತವಾಗಿದ್ದರೂ ಊಟವಿಲ್ಲದೆ, ನಿದ್ರೆಯಿಲ್ಲದೆ ಪರದಾಡುತ್ತಿದ್ದಾರೆ.
ಕಳೆದ ಫೆ. 23ರಂದು ಜಗಳೂರು ತಾಲೂಕಿನ ತೋರಣಘಟ್ಟ ಗ್ರಾಮದ 15 ಜನ ಮತ್ತು ಬಳ್ಳಾರಿ ಮತ್ತು ಸುತ್ತಮುತ್ತಲ ಪ್ರದೇಶದ 35 ಜನರು ಸೇರಿ ಒಟ್ಟು 50 ಜನರು ಬೆಂಗಳೂರಿನಿಂದ ಏರೋ ಅರೇಬಿಯಾ ವಿಮಾನದಲ್ಲಿ ದುಬೈ ಪ್ರವಾಸಕ್ಕೆ ತೆರಳಿದ್ದರು. ಒಂದು ದಿವಸ ಶಾರ್ಜಾ, ಮೂರು ದಿವಸ ದುಬೈ ಮತ್ತು ಒಂದು ದಿವಸ ಅಬುದಾಬಿಯ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡಿ ಶನಿವಾರ 9.30ರ ಸುಮಾರಿಗೆ ಏರೋ ಅರೆಬಿಯಾ ವಿಮಾನದ ಮೂಲಕ ಬೆಂಗಳೂರಿಗೆ ವಾಪಾಸ್ ಆಗಬೇಕಿತ್ತು.
ಆದರೆ ಇಸ್ರೇಲ್ ಮತ್ತು ಇರಾನ್ ನಡುವೆ ಶನಿವಾರ ಯುದ್ಧ ಆರಂಭವಾಗಿದ್ದರಿಂದ ದುಬೈನಿಂದ ಬೆಂಗಳೂರಿಗೆ ತೆರಳಬೇಕಾಗಿದ್ದ ಏರೋ ಅರೇಬಿಯಾ ವಿಮಾನ ರದ್ದುಗೊಳಿಸಿದ್ದರಿಂದ 50 ಜನ ಪ್ರವಾಸಿಗರು ದಿಕ್ಕು ತೋಚದಂತಾಗಿ ದುಬೈನ ಎಕ್ಸ್ಮ್ಯಾಪಲ್ ಹೋಟೆಲ್‌ನಲ್ಲಿ ಸುರಕ್ಷಿತವಾಗಿ ತಂಗಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯ ಮಣ್ಣಲ್ಲಿ ಹೊಸ ಇತಿಹಾಸ ಬರೆದ ಜಮ್ಮು-ಕಾಶ್ಮೀರ
ಪ್ರವಾಸದಲ್ಲಿ ಜಿ.ಎ. ಚಂದ್ರಶೇಖರ್ (67), ಉಮಾದೇವಿ (60), ಜಿ.ಎಚ್. ರಾಮಾಂಜನೇಯ (65), ಮಂಜುಳಾ (60), ಜಿ.ಬಿ.ಶಿವಕುಮಾರ್ (63), ವರಲಕ್ಷ್ಮೀ (56), ಲೋಕೇಶ್ (55), ಶಶಿಕಲಾ (50), ಕೋಟಿರೆಡ್ಡಿ (59), ಸಂಪನಗೌಡ (72), ಗುರುಬಸವನರೆಡ್ಡಿ (72), ಚನ್ನಮ್ಮ (70), ವೀರಣ್ಣ (78), ವೆಂಕಟರಮಣ (78), ಪರರೆಡ್ಡಿ (75), ರುದ್ರಮ್ಮ (60), ನಾಗವೇಣಿ (58), ಬಸವನಗೌಡ (70), ದೊಡ್ಡಬಸಮ್ಮ (68), ಆದಿಶೇಷ ರೆಡ್ಡಿ (65), ಲಕ್ಷ್ಮಿದೇವಿ (62) ಸೇರಿದಂತೆ ಒಟ್ಟು 50 ಜನರು ಪ್ರವಾಸ ಬೆಳೆಸಿದ್ದರು.
ಹೋಟೆಲ್ ಮಾಲೀಕರಿಂದ ದುರುಪಯೋಗ: ಮೊದಲೇ ವಿಮಾನ ರದ್ದುಗೊಂಡು ಆತಂಕದಲ್ಲಿ ಸಿಲುಕಿರುವ 50 ಜನರು ದುಬೈ ಎಕ್ಸ್ಮ್ಯಾಪಲ್ ಹೋಟೆಲ್‌ನಲ್ಲಿ ಸುರಕ್ಷಿತವಾಗಿ ತಂಗಿದ್ದರೂ ಮೂರು ಜನರು ಒಳಗೊಂಡ ಒಂದು ರೂಮ್‌ಗೆ 30 ಸಾವಿರ ರೂ. ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಈಗಾಗಲೇ ಪ್ರವಾಸಕ್ಕೆ ತೆರಳಿ ಜೇಬಿನಲ್ಲಿದ್ದ ಎಲ್ಲ ಹಣ ಖರ್ಚು ಮಾಡಿರುವ ಪ್ರವಾಸಿಗರು ಈಗ ಊಟ, ಬಾಡಿಗೆ ಕಟ್ಟಲು ಹಣವಿಲ್ಲದೇ ಪರದಾಡುವಂತಾಗಿದೆ. ಈ ಪರಿಸ್ಥಿತಿ ದುರುಪಯೋಗ ಮಾಡಿಕೊಳ್ಳುತ್ತಿರುವ ಹೋಟೆಲ್ ಮಾಲೀಕರ ವಿರುದ್ಧ ಭಾರತೀಯ ರಾಯಭಾರಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಹೋಟೆಲ್‌ನಲ್ಲಿ ತಂಗಿರುವ ಪ್ರವಾಸಿಗಳ ಆಗ್ರಹವಾಗಿದೆ.
ಕುಟುಂಬದವರಲ್ಲಿ ಆತಂಕ: ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ಪ್ರಾರಂಭವಾಗಿ ಅತಂತ್ರವಾಗಿರುವ ಪ್ರವಾಸಿಗರ ಕುಟುಂಬದವರು ಆತಂಕದಲ್ಲಿ ಸಿಲುಕಿದ್ದಾರೆ. ಮಾತ್ರವಲ್ಲ, ಪ್ರವಾಸಕ್ಕೆ ತೆರಳಿದವರು 60 ವರ್ಷದ ಮೇಲ್ಪಟ್ಟವರೇ ಇರುವುದರಿಂದ ಇನ್ನಷ್ಟು ಆತಂಕಕ್ಕೊಳಗಾಗಿದ್ದಾರೆ. ಭಾರತೀಯ ರಾಯಭಾರಿ ಅಧಿಕಾರಿಗಳು ಸುರಕ್ಷಿತವಾಗಿ ನಮ್ಮನ್ನು ಕರ್ನಾಟಕಕ್ಕೆ ತಲುಪಿಸಬೇಕೆಂದು ಪ್ರವಾಸಿಗರು ಮನವಿ ಮಾಡಿದ್ದಾರೆ.






















