Home Advertisement
Home ನಮ್ಮ ಜಿಲ್ಲೆ ಧಾರವಾಡ ನೇಮಕಾತಿ ಆರಂಭಿಸದಿದ್ದರೆ ಸದನದಲ್ಲೂ ಹೋರಾಟ

ನೇಮಕಾತಿ ಆರಂಭಿಸದಿದ್ದರೆ ಸದನದಲ್ಲೂ ಹೋರಾಟ

0
27

ಹುಬ್ಬಳ್ಳಿ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಹಾಗೂ ನೇಮಕಾತಿ ಪ್ರಕ್ರಿಯೆ ವೇಗಗೊಳಿಸುವಂತೆ ಆಗ್ರಹಿಸಿ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಧಾರವಾಡ ಜಯನಗರ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಮತ್ತು ಯುವಕರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ಲಕ್ಷಾಂತರ ಅಭ್ಯರ್ಥಿಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವ ಮಧು ಬಂಗಾರಪ್ಪ ಸೇರಿದಂತೆ ಇತರ ಸಚಿವರ ಭಾವಚಿತ್ರಗಳಿಗೆ ಚಪ್ಪಲಿ ಸೇವೆ ನಡೆಸಿ ತಮ್ಮ ಅಸಮಾಧಾನ ಹೊರಹಾಕಿದರು. ಸರ್ಕಾರ ಉದ್ಯೋಗದ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದೆ. ತಕ್ಷಣ ಸ್ಪಷ್ಟ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು. ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಬಿಜೆಪಿ ನಾಯಕರು ಸಹ ಬೆಂಬಲ ವ್ಯಕ್ತಪಡಿಸಿ, ಸರ್ಕಾರ ನಡೆಯನ್ನು ತೀವ್ರವಾಗಿ ಖಂಡಿಸಿದರು.

ಇದನ್ನೂ ಓದಿ: ಮಹಿಳಾ ಆರೋಗ್ಯಕ್ಕೆ ಬೃಹತ್ ರಕ್ಷಣಾ ಕವಚ: ದೇಶಾದ್ಯಂತ HPV ಲಸಿಕಾ ಅಭಿಯಾನ

ಪ್ರತಿಭಟನಾ ಸಭೆಯಲ್ಲಿ ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 40,000 ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಅವರದ್ದೇ ಸರ್ಕಾರದ ದಾಖಲೆ ಹೇಳುವ ಪ್ರಕಾರ 8,157 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮಾತ್ರ ಆಗಿದೆ. 2.64 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಒಪ್ಪಿಕೊಂಡ ಮೇಲೆ, 8,000 ನೇಮಕಾತಿ ಮಾಡಿದ್ದು ಸಾಧನೆ ಎಂಬಂತೆ ಬೀಗುವುದು ನಾಚಿಕೆಗೇಡಿನ ಸಂಗತಿ. ರಸ್ತೆಗಿಳಿದು ಹೋರಾಡುತ್ತಿರುವ ಯುವಕರ ಆಕ್ರೋಶ ಮತ್ತು ನೋವು ಸರ್ಕಾರಕ್ಕೆ ಕಾಣುತ್ತಿಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ: ʻಹಿಮೋಫಿಲಿಯಾ’ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್‌

​ರಾಜ್ಯ ಸರ್ಕಾರದಲ್ಲಿ ಬರೋಬ್ಬರಿ 2,85,000 ಹುದ್ದೆಗಳು ಖಾಲಿ ಇವೆ. ಆರ್ಥಿಕ ಇಲಾಖೆ ಸುಮಾರು 55,000 ಹೊಸ ನೇಮಕಾತಿಗಳಿಗೆ ಅನುಮತಿ ನೀಡಿದ್ದರೂ, ರಾಜ್ಯ ಸರ್ಕಾರ ಮಾತ್ರ ಒಂದೇ ಒಂದು ನೇಮಕಾತಿ ಮಾಡಿಲ್ಲ. ​ಕೇಂದ್ರದಲ್ಲಿ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸರ್ಕಾರ 10 ವರ್ಷಗಳಲ್ಲಿ 7,30,000 ಹೊಸ ನೇಮಕಾತಿಗಳನ್ನು ಮಾಡಿದೆ. ಕನಿಷ್ಠ ಅದರ ಶೇ. 10 ರಷ್ಟು ಹುದ್ದೆಗಳನ್ನಾದರೂ ಭರ್ತಿ ಮಾಡುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ. ವಿದ್ಯಾರ್ಥಿಗಳ ನ್ಯಾಯಯುತ ಧ್ವನಿ ಹತ್ತಿಕ್ಕಲು ಸರ್ಕಾರ ಧಾರವಾಡದಾದ್ಯಂತ ಪೊಲೀಸರನ್ನು ನಿಯೋಜಿಸಿ ‘ಕಾಶ್ಮೀರ’ದಂತೆ ಆತಂಕದ ವಾತಾವರಣ ನಿರ್ಮಿಸಿದೆ. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ನೇಮಕಾತಿ ಅಧಿಸೂಚನೆ ಪ್ರಕಟಿಸಿ, ಪ್ರಕ್ರಿಯೆ ಶುರು ಮಾಡಬೇಕು. ಇಲ್ಲವಾದಲ್ಲಿ, ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತು ಸದನದ ಒಳಗೆ ಹಾಗೂ ಹೊರಗೆ ಸರ್ಕಾರದ ವಿರುದ್ಧ ಬೃಹತ್ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.

Previous articleಕ್ಯಾಪ್ಟನ್ ಅಮನ್‌ಕುಮಾರ್‌ ಸಿಂಗ್‌ ಹೃದಯಾಘಾತಕ್ಕೆ ಬಲಿ
Next articleಯುವಕರಿಗೆ ಬೇಕಿರುವುದು ವಾಗ್ದಾನ ಅಲ್ಲ, ನೇಮಕಾತಿ ಆದೇಶ ಪತ್ರ