ಮಂತ್ರಾಲಯ: ಭಕ್ತರ ಸಮ್ಮುಖದಲ್ಲಿ 405ನೇ ಪಟ್ಟಾಭಿಷೇಕ ಮಹೋತ್ಸವ ಆಚರಣೆ
ರಾಯಚೂರು: ಮಂತ್ರಾಲಯದ ಶ್ರೀಮಠದಲ್ಲಿ ಗುರುವಾರ ಗುರುವೈಭವೋತ್ಸವದ ಅಂಗವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳು ಅವರ 405ನೇ ಪಟ್ಟಾಭಿಷೇಕ ಮಹೋತ್ಸವ ಭಕ್ತಿ ಭಾವದಿಂದ ನೆರವೇರಿತು.
ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ಶ್ರೀ ರಾಘವೇಂದ್ರ ಸ್ವಾಮಿಗಳವರ ಪವಿತ್ರ ಮೂಲ ಪಾದುಕೆಗಳಿಗೆ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಪುಷ್ಪಾಭಿಷೇಕ, ಕನಕಾಭಿಷೇಕ ಹಾಗೂ ರತ್ನಾಭಿಷೇಕಗಳನ್ನು ನೆರವೇರಿಸಿದರು. ವಿವಿಧ ವೇದಘೋಷಗಳ ಮಧ್ಯೆ ನಡೆದ ಈ ಧಾರ್ಮಿಕ ವಿಧಿವಿಧಾನಗಳು ಭಕ್ತರಲ್ಲಿ ಭಕ್ತಿ ಸಂಭ್ರಮ ಮೂಡಿಸಿತು.
ಇದನ್ನೂ ಓದಿ: ಕರ್ನಾಟಕ ಜಾಗತಿಕ ಕಂಪನಿಗಳ ನೆಲೆ: AI ಪ್ರತಿಭೆಗಳ ಕೇಂದ್ರ
ಅಭಿಷೇಕಗಳ ನಂತರ ವಿಶೇಷ ಪೂಜೆಗಳು, ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಿತು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಈ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ರಾಯರ ಆಶೀರ್ವಾದ ಪಡೆದರು.
ನಂತರ ಶ್ರೀಮಠದ ಪ್ರಕಾರದ ಪವಿತ್ರ ಆವರಣದಲ್ಲಿ ಭವ್ಯವಾದ ರಥೋತ್ಸವ ನಡೆಯಿತು. ಅಲಂಕರಿಸಲಾದ ರಥದಲ್ಲಿ ಶ್ರೀ ರಾಯರ ಪ್ರತಿಮೆಯನ್ನು ವಿರಾಜಮಾನಗೊಳಿಸಿ ಭಕ್ತರ ಘೋಷಣೆಗಳ ನಡುವೆ ಮೆರವಣಿಗೆ ನಡೆಸಲಾಯಿತು. ರಥೋತ್ಸವದ ವೇಳೆ ಭಕ್ತರು ‘ಗುರು ರಾಯರೇ ಶರಣು’ ಎಂಬ ಘೋಷಣೆಗಳೊಂದಿಗೆ ಭಕ್ತಿ ವ್ಯಕ್ತಪಡಿಸಿದರು.
ಇದನ್ನೂ ಓದಿ: AI ಕ್ಷೇತ್ರದಲ್ಲಿ ₹10 ಲಕ್ಷ ಕೋಟಿ ಹೂಡಿಕೆ – ರಿಲಯನ್ಸ್ ಜಿಯೊ ಘೋಷಣೆ
ಗುರುವೈಭವೋತ್ಸವದ ಅಂಗವಾಗಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಜನೆ, ವೇದಪಾರಾಯಣ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ಕೂಡ ನಡೆದವು. ಭದ್ರತಾ ದೃಷ್ಟಿಯಿಂದ ಪೊಲೀಸ್ ಇಲಾಖೆ ಮತ್ತು ಮಠದ ಸ್ವಯಂಸೇವಕರು ಸೂಕ್ತ ವ್ಯವಸ್ಥೆ ಮಾಡಿದ್ದರು.






















