Home Advertisement
Home ನಮ್ಮ ಜಿಲ್ಲೆ ಕಲಬುರಗಿ ಶಿವರಾತ್ರಿ ಪೂಜೆಗೆ ನಿರಾಕರಣೆ: ಕಲಬುರಗಿ ಕೋಟೆ ಸುತ್ತ ಉದ್ವಿಗ್ನ ಸ್ಥಿತಿ

ಶಿವರಾತ್ರಿ ಪೂಜೆಗೆ ನಿರಾಕರಣೆ: ಕಲಬುರಗಿ ಕೋಟೆ ಸುತ್ತ ಉದ್ವಿಗ್ನ ಸ್ಥಿತಿ

0
150

ಕಲಬುರಗಿ: ರಾಜ್ಯಾದ್ಯಂತ ತೀವ್ರ ಚರ್ಚೆ ಮತ್ತು ವಿವಾದ ಸ್ವರೂಪ ಪಡೆದ ಆಳಂದದ ಲಾಡ್ಲೆ ಮಶಾಖ್ ದರ್ಗಾ ಆವರಣದ ರಾಘವ ಚೈತನ್ಯ ಶಿವಲಿಂಗ ಪೂಜೆ ವಿವಾದದಂತೆ, ಇದೀಗ ಮತ್ತೊಂದು ದೇವಸ್ಥಾನದ ಪೂಜೆ ವಿವಾದ ಮುನ್ನಲೆಗೆ ಬಂದಿದ್ದು, ಮಹಾಶಿವರಾತ್ರಿ ಅಂಗವಾಗಿ ಕಲಬುರಗಿ ಕೋಟೆ (ಬಹುಮನಿ ಕೋಟೆ)ಯ ಶ್ರೀ ಸ್ವಯಂಭು ಸೋಮೇಶ್ವರ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲು ಕೇಂದ್ರ ಪುರಾತತ್ವ ಇಲಾಖೆ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪೊಲೀಸರು ಹಿಂದೂ ಕಾರ್ಯಕರ್ತರನ್ನು ತಡೆದ ಪರಿಣಾಮ ಪ್ರಕ್ಷುಬ್ಧ ವಾತಾವರಣ ಎದುರಾಯಿತು. ಈ ವೇಳೆ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.

ಏನಿದು ವಿವಾದ?: ಮಹಾಶಿವರಾತ್ರಿ ಅಂಗವಾಗಿ ಕಲಬುರಗಿ ಕೋಟೆಯ ಸ್ವಯಂಭು ಸೋಮೇಶ್ವರ ಮಂದಿರಕ್ಕೆ ಪಿಎಸ್‌ಐ ಅಕ್ರಮದ ನೇಮಕಾತಿ ಆರೋಪಿ, ಹಿಂದೂ ಕಾರ್ಯಕರ್ತೆ ದಿವ್ಯಾ ಹಾಗರಗಿ ನೇತೃತ್ವದಲ್ಲಿ ಹೂವು, ಕಾಯಿ, ಕರ್ಪೂರ ಹಿಡಿದುಕೊಂಡು ನೂರಾರು ಹಿಂದೂ ಕಾರ್ಯಕರ್ತರು ಕೋಟೆಯ ಮುಂಭಾಗದಲ್ಲಿ ಗುಡಿ ಪ್ರವೇಶಿಸುವ ಮುನ್ನವೇ ಸ್ಥಳೀಯ ಪೊಲೀಸರು ಹಿಂದೂ ಕಾರ್ಯಕರ್ತರು ತಡೆದು ಪೂಜೆಗೆ ಅವಕಾಶ ಇಲ್ಲ. ಪುರಾತತ್ವ ಇಲಾಖೆಯಿಂದ ಸಾರ್ವಜನಿಕರಿಗೆ ಪೂಜೆ ಸಲ್ಲಿಸುವ ಅನುಮತಿ ನೀಡಿಲ್ಲ. ಹೀಗಾಗಿ, ಇಲ್ಲಿಂದ ನಿರ್ಗಮಿಸಬೇಕು ಎಂದು ಎಸಿಪಿ ಶಿವನಗೌಡ ಸ್ಥಳದಲ್ಲಿದ್ದ ಹಿಂದೂ ಕಾರ್ಯಕರ್ತರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಹಿಂದೂ ಕಾರ್ಯಕರ್ತರು ಹೋದಬಾರಿ ಪೂಜೆಗೆ ಇಲ್ಲದ ಅನುಮತಿ ಈಗೇಕೆ? ಎಂದು ಪ್ರಶ್ನಿಸಿದರು. ಪೊಲೀಸರು ಪೂಜೆಗೆ ಅವಕಾಶ ನೀಡದಿದ್ದರಿಂದ ನಡುರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕೋಟೆಯ ಸುತ್ತಮುತ್ತ ನೂರಾರು ಪೊಲೀಸರನ್ನು ನಿಯೋಜಿಸಿ, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ, ಕೋಟೆ ಖಾಕಿ ಕಣ್ಗಾವಲಿನಲ್ಲಿರಿಸಲಾಗಿತ್ತು.

ಹಲವರ ಬಂಧನ, ಬಿಡುಗಡೆ: ಪೂಜೆ ಮುಂದಾಳತ್ವ ವಹಿಸಿದ್ದ ದಿವ್ಯಾ ಹಾಗರಗಿ, ಸಾಗರ್ ರಾಠೋಡ್, ಅಣ್ಣರಾವ್ ಪಾಟೀಲ್, ಭರತ್ ಮಡಿವಾಳ, ಶಶಿಕುಮಾರ್ ಶೆಟ್ಟಿ, ಪ್ರಶಾಂತ್ ಜಾಧವ, ಪವನ್ ಪೂಜಾರಿ, ಅಭಿಷೇಕ್ ಕನಸುರೆ, ದಿಲೀಪ್ ಕನಸುರೆ, ನಾಗರಾಜ್ ಕಾನೂರ್, ನಿತೀನ್ ಠಾಕೂರ್, ನಾಗರಾಜ್ ವೀರನಾಯಕ್ ಸೇರಿ ಅನೇಕ ಹಿಂದೂ ಕಾರ್ಯಕರ್ತರನ್ನು ಪೊಲೀಸ್ ವಾಹದನದಲ್ಲಿ ಕೂರಿಸಿಕೊಂಡು ಹೋಗಿ ಫರಹತಾಬಾದ್ ಠಾಣೆಗೆ ಕರದೊಯ್ದು, ನಂತರ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಹಿಂದೂ ಕಾರ್ಯಕರ್ತೆ ದಿವ್ಯಾ ಹಾಗರಗಿ, ಸಾರ್ವಜನಿಕರಿಗೆ ಕೋಟೆಯೊಳಗೆ ನಿತ್ಯ ಪೂಜೆಗೆ ಅವಕಾಶ ನೀಡಬೇಕು. 2-3 ವರ್ಷಗಳಿಂದ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದರೂ ಈ ಬಾರಿ ಅವಕಾಶ ನೀಡಿಲ್ಲ. ಪುರಾತತ್ವ ಇಲಾಖೆಯ ಅಧಿಕಾರಿಗಳು ತೆಗೆದುಕೊಂಡ ನಿರ್ಧಾರ ಖಂಡನೀಯ. ಕೋಟೆಯೊಳಗೆ ಶೀಲಾವಶೇಷಗಳು, ಸ್ಮಾರಕಗಳ ಸಂರಕ್ಷಿಸುವ ಕೆಲಸವೂ ಇಲಾಖೆ ಮಾಡಲಿ. ಹಿಂದೂ ಸಮಾಜ ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲ ಇಲ್ಲ ಎಂದಿದ್ದಾರೆ.

Previous articleT20 World Cup: ಇಂದು ಭಾರತ – ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ
Next articleತಾಯಿಯ ಬೇಬಿಬಂಪ್‌ ಫೋಟೋಶೂಟ್‌ ವೇಳೆ ಮೊದಲ ಮಗು ಸಾವು