ದಾಂಡೇಲಿ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲಾ ಜನತಾದಳ (ಜಾತ್ಯಾತೀತ) ಪಕ್ಷದಲ್ಲಿ ಜಿಲ್ಲಾಧ್ಯಕ್ಷರ ನೇಮಕಾತಿ ವಿಚಾರವಾಗಿ ತೀವ್ರ ಸ್ವರೂಪದ ಆಂತರಿಕ ಕಲಹ ಉಂಟಾಗಿದ್ದು, ಪಕ್ಷದೊಳಗಿನ ಅಸಮಾಧಾನ ಬಹಿರಂಗಗೊಂಡಿದೆ.
ಕಳೆದ 15 ವರ್ಷಗಳಿಂದ ಪಕ್ಷದ ಉಪಾಧ್ಯಕ್ಷರಾಗಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಜಿ.ಕೆ. ಪಟಗಾರ ಅವರನ್ನು ಕಡೆಗಣಿಸಿ, ಏಕಾಏಕಿ ಸೂರಜ್ ನಾಯ್ಕ ಸೋನಿ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಘೋಷಿಸಿರುವುದನ್ನು ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ತೀವ್ರವಾಗಿ ಖಂಡಿಸಿದ್ದಾರೆ.
ಇದನ್ನೂ ಓದಿ: ದಾಂಡೇಲಿ: ಸೈಟ್ ಚೋರಿ ಬಳಿಕ ಸರ್ಕಾರಿ ಮನೆಗಳ ಮೇಲೂ ಕಣ್ಣು
ಕಾರವಾರ ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿ.ಕೆ. ಪಟಗಾರ ಅವರು, ಕಳೆದ ಅನೇಕ ವರ್ಷಗಳಿಂದ ಪಕ್ಷದ ಸಂಘಟನೆಗಾಗಿ ಶ್ರಮಿಸಿದ್ದೇನೆ. ಜಿಲ್ಲಾ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಪಕ್ಷದ ಬಲವರ್ಧನೆಗಾಗಿ ಸದಸ್ಯತ್ವ ಅಭಿಯಾನ ನಡೆಸಿದ್ದೇನೆ ಎಂದು ಹೇಳಿದರು.
ಹಿಂದಿನ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ ಅವರು ಅಪಘಾತಕ್ಕೆ ಒಳಗಾದ ಸಂದರ್ಭದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ಹೊತ್ತು ಪಕ್ಷದ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿದ್ದೇನೆ. ಚುನಾವಣಾಧಿಕಾರಿ ರಾಘವೇಂದ್ರ ಮಡಿವಾಳ ಅವರ ಸಮ್ಮುಖದಲ್ಲಿ ಯಲ್ಲಾಪುರದಲ್ಲಿ ನಡೆದ ಸಾಂಸ್ಥಿಕ ಚುನಾವಣೆಯಲ್ಲಿ 65 ಸದಸ್ಯರ ಬೆಂಬಲದೊಂದಿಗೆ ನನ್ನನ್ನು ಜಿಲ್ಲಾಧ್ಯಕ್ಷನಾಗಿ ಆಯ್ಕೆ ಮಾಡಲಾಗಿತ್ತು. ನನಗೆ ಗುರುತಿನ ಚೀಟಿಯನ್ನೂ ನೀಡಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಧಾರವಾಡ: ನೌಕರರ ಸಂಘದ ಜಿಲ್ಲಾಧ್ಯಕ್ಷರ ಮನೆ–ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
ಈ ಎಲ್ಲ ಪ್ರಕ್ರಿಯೆಗಳಿದ್ದರೂ ಸಹ, ಉತ್ತರ ಕರ್ನಾಟಕ ಸಮಾವೇಶದ ವೇಳೆ ಪಕ್ಷದ ವರಿಷ್ಠರು ಚುನಾವಣಾ ವಿಧಾನವನ್ನು ಬದಿಗೊತ್ತಿ ಏಕಾಏಕಿ ಸೂರಜ್ ಸೋನಿ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಘೋಷಿಸಿರುವುದು ಅನ್ಯಾಯವಾಗಿದೆ ಎಂದು ಪಟಗಾರ ಆರೋಪಿಸಿದರು.
ಇದು ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರಿಗೆ ಮಾಡಿರುವ ಅಪಮಾನವಾಗಿದೆ. ಈ ವಿಚಾರವನ್ನು ತಕ್ಷಣ ಸರಿಪಡಿಸಬೇಕು. ಪಕ್ಷಕ್ಕೆ ಒಂದು ವಾರದ ಗಡುವು ನೀಡುತ್ತಿದ್ದೇವೆ. ಈ ಅವಧಿಯಲ್ಲಿ ನ್ಯಾಯ ದೊರೆಯದಿದ್ದರೆ, ಜಿಲ್ಲೆಯ ಪ್ರಮುಖ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಸೇರಿ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ ಎಂದು ಎಚ್ಚರಿಸಿದರು.
ಇದನ್ನೂ ಓದಿ: ದಾವಣಗೆರೆ: ಬೆಸ್ಕಾಂ ಇಂಜಿನಿಯರ್ ಮನೆ–ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
ವರಿಷ್ಠರ ವಿರುದ್ಧ ಆಕ್ರೋಶ: ಈ ಕುರಿತು ಪ್ರತಿಕ್ರಿಯಿಸಿದ ರಮೇಶ್ ನಾಯ್ಕ ಅವರು, ಪಕ್ಷದ ವರಿಷ್ಠರು ಪ್ರಾಮಾಣಿಕ ಕಾರ್ಯಕರ್ತರನ್ನು ಬದಿಗೊತ್ತಿ, ‘ಬಕೆಟ್’ ಹಿಡಿಯುವವರಿಗೆ ಮಣೆ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು. ಸೂರಜ್ ಸೋನಿ ಅವರು ಇನ್ನೂ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ಪಡೆದಿಲ್ಲ. ಯಾವುದೇ ಪಕ್ಷ ಚಟುವಟಿಕೆಯಲ್ಲಿ ಭಾಗವಹಿಸಿಲ್ಲ. ಇಂತಹ ವ್ಯಕ್ತಿಯನ್ನು ಜಿಲ್ಲಾಧ್ಯಕ್ಷನನ್ನಾಗಿ ಮಾಡಿರುವುದು ಕೇವಲ ಪಟಗಾರ ಅವರಿಗೆ ಮಾತ್ರವಲ್ಲ, ಇಡೀ ಒಕ್ಕಲಿಗ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ವಾರದ ಗಡುವು: ಪಕ್ಷದ ವರಿಷ್ಠರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಿ, ಪ್ರಜಾಪ್ರಭುತ್ವ ಮಾದರಿಯಲ್ಲಿ ಆಯ್ಕೆಯಾದ ಜಿ.ಕೆ. ಪಟಗಾರ ಅವರಿಗೆ ನ್ಯಾಯ ಒದಗಿಸಬೇಕು ಎಂದು ಬಂಡಾಯ ನಾಯಕರು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷಕ್ಕೆ ಒಂದು ವಾರದ ಕಾಲಾವಕಾಶ ನೀಡಲಾಗಿದ್ದು, ಅಷ್ಟರೊಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಜಿಲ್ಲಾದ್ಯಂತ ಸಾಮೂಹಿಕ ರಾಜೀನಾಮೆ ಚಳವಳಿ ಆರಂಭಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಮೇಘಾಲಯ ದಂಡಕಾರಣ್ಯದಲ್ಲಿ `ಸಂತ’ರಿಬ್ಬರು!
ಪತ್ರಿಕಾಗೋಷ್ಠಿಯಲ್ಲಿ ಶೇಖರ್ ಪೂಜಾರಿ, ಗೋವಿಂದೇ ಗೌಡ, ಈಶ್ವರ ನಾಯ್ಕ, ರಮೇಶ್ ನಾಯ್ಕ ಸೇರಿದಂತೆ ಎಲ್ಲಾ ತಾಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.























