ದಂತಗೋಪುರ… ಸ್ವತಂತ್ರ ಭಾರತದ ರಾಜಭವನಗಳನ್ನು ಕರೆಯುತ್ತಿದ್ದುದೇ ಹೀಗೆ. ಆ ಗೋಪುರಗಳಲ್ಲಿ ಇದ್ದವರು ಕೆಳಗಿಳಿದು ಬರುವುದೇ ಅಪರೂಪ. ಹಾಗೇ ಜನಸಾಮಾನ್ಯರ ಬಿಡಿ, ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೂ ಈ ರಾಜಭವನ ಮತ್ತು ಅಲ್ಲಿಯ ದರ್ಬಾರುಗಳು ತಿಳಿಯುವುದೇ ದುಸ್ತರ ! ಅದೂ ಒಂದು ದಂತ ಕಥೆಯೇ.
ಮೇಘಾಲಯ ರಾಜಭವನ, ಅಲ್ಲಿರುವ ರಾಜ್ಯಪಾಲರು, ಅವರ ನಡಾವಳಿ ಮಾತ್ರ ಈ ಮಾತಿಗೆ ಅಪವಾದ. ಮೇಘಾಲಯ ರಾಜಭವನ ಈಗ ನಿಜವಾದ ಅರ್ಥದಲ್ಲಿ ಲೋಕಭವನ. ಹಾಗೇ ದಂತಗೋಪುರದಿಂದ ರಾಜ್ಯಪಾಲರು ಸದಾ ಹಳ್ಳಿ, ಗಡಿ ಪ್ರದೇಶ, ಅರಣ್ಯ ಇಂಥಲ್ಲಿಯೇ ಹೆಚ್ಚು ಕಾಲ ಕಳೆಯುತ್ತಾರೆ.
ಸಿ.ಎಚ್.ವಿಜಯಶಂಕರ್, ಕರ್ನಾಟಕದ ಸಜ್ಜನ, ಸಹೃದಯದ ರಾಜಕಾರಣಿ ಈಗ ಮೇಘಾಲಯದ ಲೋಕಭವನದಲ್ಲಿದ್ದಾರೆ. ಎರಡು ಬಾರಿ ಶಾಸಕರಾಗಿ, ಸಂಸದರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ರಾಜ್ಯದ ಮಂತ್ರಿಯಾಗಿ ಕರ್ನಾಟಕದವರಿಗಂತೂ ಗೊತ್ತು. ಈಗ ರಾಜ್ಯಕ್ಕಿಂತಲೂ ಈಶಾನ್ಯ ರಾಜ್ಯ ಮೇಘಾಲಯದಲ್ಲಿ ಹೆಚ್ಚು ಜನಪ್ರಿಯ. ಜನಪರ ! `ನನ್ನನ್ನು ನೇಮಕ ಮಾಡಿರುವುದು ಏತಕ್ಕೆ? ಸಂವಿಧಾನ ರಕ್ಷಣೆ ಪ್ರಥಮ ಆದ್ಯತೆ ನಿಜ.
ಆದರೆ ಜನರಿಂದ ದೂರವಿರಿ, ಜನರ ಬಳಿ ತೆರಳದೇ ಜನರ ಆಗುಹೋಗುಗಳಿಗೆ ಸ್ಪಂದಿಸದಿರಿ’ ಎಂದು ಸಂವಿಧಾನ ಹೇಳಿಲ್ಲವಲ್ಲ ಎಂದೇ ಮಾತು ಆರಂಭಿಸುವ ವಿಜಯಶಂಕರ್ ಅವರ ರಾಜಭವನದಲ್ಲಿ ನಿತ್ಯ ಜನಜಂಗುಳಿ. ಅದೂ ಕೂಡ ಸಮಸ್ಯೆ ಹೇಳಿಕೊಳ್ಳಲಿಕ್ಕೆ ಅಷ್ಟೇ ಅಲ್ಲ. ಸಲಹೆ ಪಡೆಯಲು. ಸಮಸ್ಯಾತ್ಮಕ ವಿಷಯಗಳ ಕುರಿತು ಚರ್ಚಿಸಲು!! ಒಂದೂವರೆ ವರ್ಷದ ಹಿಂದೆ ರಾಜ್ಯಪಾಲರಾಗಿ ವಿಜಯಶಂಕರ್ ಮೈಸೂರಿನಿಂದ ಮೇಘಾಲಯ ರಾಜಭವನ ಪ್ರವೇಶಿಸಿದಾಗ, ಪ್ರಥಮವಾಗಿ ತೆಗೆಸಿದ್ದು ರಾಜಭವನದ ಸುತ್ತ ಹಾಕಿದ್ದ ಭದ್ರತಾಬೇಲಿಯನ್ನು. ಕೇವಲ ಅಲಂಕಾರಿಕ ಕಾರ್ಯಕ್ರಮಗಳಿಗೆ ಮಾತ್ರ ಓಡುತ್ತಿದ್ದ ಕಾರನ್ನು ತಿರುಗಿಸಿದ್ದು ಹಳ್ಳಿ, ಅರಣ್ಯ, ನದಿ, ರಾಜ್ಯದ ಗಡಿ ಮತ್ತು ಸ್ಥಳೀಯ ಸಾಂಸ್ಕೃತಿಕ- ಸಾಮಾಜಿಕ ಸಾಮರಸ್ಯದ ಸಭೆ ಸಮಾರಂಭಗಳತ್ತ. `ನನ್ನ ಲೋಕಭವನ ನಿಮಗಾಗಿ ತೆರೆದಿದೆ. ನೀವು ಜನಪ್ರತಿನಿಧಿಗಳೊಂದಿಗೆ ಇಂದೇ ಬನ್ನಿ. ನಿಮ್ಮ ಧನಿಗೆ ನಾನು ಕಿವಿಯಾಗುತ್ತೇನೆ. ಹಾಗೇ ನಾನು ನಿಮ್ಮವನೆಂದೇ ತಿಳಿಯಿರಿ’ ಹೇಳತೊಡಗಿದರು.
ಎಲ್ಲ ಶಿಷ್ಟಾಚಾರಗಳ ಬದಿಗೊತ್ತಿ ವಿಜಯಶಂಕರ ಜನರತ್ತ ಹೋದರು. ಅವರ ಮನಸ್ಸು, ಹೃದಯ ಗೆದ್ದರು. ಈಗ ಮೇಘಾಲಯದಲ್ಲಿ ಮುಖ್ಯಮಂತ್ರಿಯಷ್ಟೇ ರಾಜ್ಯಪಾಲರೂ ಜನಪ್ರಿಯರು. ಶೇ. 92ರಷ್ಟು ಆದಿವಾಸಿ ಮತ್ತು ಗುಡ್ಡಗಾಡು ಜನಾಂಗ ಇರುವ ಈ ರಾಜ್ಯದಲ್ಲಿ ಜನ ಮಾತೃಪ್ರಧಾನ ಸಂಸ್ಕೃತಿಯವರು. ಪಿತ್ರಾರ್ಜಿತ ಆಸ್ತಿ ಗಂಡು ಮಕ್ಕಳಿಗೆ ಬರುವುದಿಲ್ಲ. ಕುಟುಂಬದ ಕಿರಿಯ ಮಗಳಿಗೆ ಹೋಗುತ್ತದೆ. ಮದುವೆಯಾದ ಗಂಡು ಹುಟ್ಟಿದ ಮನೆಯಲ್ಲಿ ಇರಲ್ಲ. ಹೆಂಡತಿಯ ಮನೆಗೆ ಹೋಗುತ್ತಾನೆ. ವಧುವನ್ನು ಮನೆ ತುಂಬಿಸಿಕೊಳ್ಳುವ ಸಂಪ್ರದಾಯ ಇಲ್ಲ. ಪುರುಷರೇ ಹೆಂಡತಿಯ ಮನೆಗೆ ಗೃಹಪ್ರವೇಶ ಮಾಡಬೇಕು. ಕರ್ನಾಟಕದಂತಹ ರಾಜ್ಯದವರಿಗೆ ಇದು ವಿಶೇಷ ಎನಿಸಿದರೂ ಕೂಡ ಅಲ್ಲಿಯ ಜನರ ಚಿಂತನೆ ಅಮೋಘ.
ಸಂವಿಧಾನದ 6ನೇ ಶೆಡ್ಯೂಲ್ ಪ್ರದತ್ತವಾಗಿದೆ. ಇಡೀ ಮೇಘಾಲಯದಲ್ಲಿ ಸುತ್ತಾಡಿ, ಭಿಕ್ಷಕರಿಲ್ಲ. ಕೋಮು ಸಾಮರಸ್ಯ ಕದಡಿಲ್ಲ. ಅಪರಾಧ ಕೃತ್ಯಗಳು ಊಹುಂ. ಅರಣ್ಯವನ್ನು ದೇವತೆ ಎಂದು ಆರಾಧಿಸುವ ಜನ ಪರಿಸರ ನಾಶಕ್ಕೆ ಒಪ್ಪುವುದೇ ಇಲ್ಲ. ಹಾಗಾಗಿಯೇ ಅಲ್ಲವೇ, ಈ ರಾಜ್ಯಕ್ಕೆ ರೈಲ್ವೆ ಹಳಿ ಹಾಕಲು ವಿರೋಧಿಸಿದ್ದಾರೆ. ರೈಲು ಹಳಿ ಇಲ್ಲದ ರಾಜ್ಯ! ಒಬ್ಬ ತರಕಾರಿ ಮಾರುವ ಮಹಿಳೆಯಿಂದ ಹಿಡಿದು, ಕೂಲಿಕಾರರು, ವೃದ್ಧರು ಎಲ್ಲರಿಗೂ ಇಲ್ಲಿ ಇಂಗ್ಲಿಷ್ ಗೊತ್ತು. ಪ್ರತಿಯೊಬ್ಬರೂ ಇಂಗ್ಲಿಷ್‌ನಲ್ಲಿಯೇ ಮಾತನಾಡುತ್ತಾರೆ. ಹಾಗೆಯೇ ತಮ್ಮ ಸ್ವಭಾಷೆ ಖಾಶಿ' ಮತ್ತುಗಾರೋ’ಗಳನ್ನು ಪ್ರೀತಿಸುತ್ತಾರೆ. ಬೆಳೆಸುತ್ತಾರೆ. ಹಿಂದಿ ಕೇವಲ ವ್ಯಾವಹಾರಿಕ, ಲಿಖಿತ ಭಾಷೆ ಅಷ್ಟೇ.
ಸ್ಥಳೀಯ ಜನರ ಆಡಳಿತವನ್ನು ಅಲ್ಲಿಯ ಗ್ರಾಮಸಮಿತಿಗಳೇ ನಿರ್ವಹಿಸುತ್ತವೆ. ಹಾಗಾಗಿಯೇ ಊರುಗಳ ಎಲ್ಲ ಸಣ್ಣ ಪುಟ್ಟ ಜಗಳ, ವಿವಾದಗಳೇನೇ ಇದ್ದರೂ ಅವನ್ನು ನಿಭಾಯಿಸುವ ಗ್ರಾಮ ಅಭಿವೃದ್ಧಿ ಮಂಡಳಿ ಅತ್ಯಂತ ಪ್ರಭಾವಶಾಲಿ. ಅದಕ್ಕೆ ನಡೆಯುವ ಚುನಾವಣೆ ವಿಧಾನಸಭೆ ಚುನಾವಣೆಗಿಂತಲೂ ತುಂಬ ತುರುಸಿನದ್ದು. ಜನರಿಂದ ಆಯ್ಕೆಯಾಗುವವರೇ ವಾದ ವಿವಾದಗಳನ್ನು ಆಲಿಸುವ ಪದ್ಧತಿಯಿಂದಾಗಿಯೇ ಒಂದೇ ಒಂದು ಅವಘಡಗಳು ಅಲ್ಲಿನ ಗ್ರಾಮಗಳಲ್ಲಿ ನಡೆಯುವುದಿಲ್ಲ. ಹಾಗೆ, ಹೊರಗಿನವರು, ಅಪರಿಚಿತರು ಬಂದಲ್ಲಿ ತಕ್ಷಣ ಸಮಿತಿ ಗಮನಕ್ಕೆ ಬಂದು ವಿಚಾರಣೆ ನಡೆಯುತ್ತದೆ.. ಹಾಗಾಗಿಯೇ ಬಾಂಗ್ಲಾ ನುಸುಳುಕೋರರು ಇಲ್ಲ. ಇವೆಲ್ಲವನ್ನೂ ನಾನು ಗೌರವಿಸಿ, ಪ್ರೋತ್ಸಾಹಿಸುತ್ತಿರುವೆ ಎಂದು ಇಡೀ ಮೇಘಾಲಯದ ಚಿತ್ರಣ ಬಿಚ್ಚಿಡುವ ವಿಜಯಶಂಕರ್, ಈಗ ಅಲ್ಲಿಯ ಪ್ರತಿ ಜನಾಂಗ- ಸಮುದಾಯಗಳಿಗೆ ಪ್ರೀತಿಪಾತ್ರ. ನಮ್ಮ ಗವರ್ನರ್ ತುಂಬಾ ಸಿಂಪಲ್. ಸರಳ. ನಮ್ಮ ನಿಮ್ಮ ಹಾಗೇ ನಮ್ಮ ಗವರ್ನರ್ ಎಂದು ಕರೆಸಿಕೊಳ್ಳುತ್ತಿದ್ದಾರೆ.
ರಾಜಭವನ ಪ್ರವೇಶಿಸಿದ ದಿನವೇ ಅವರು ಮಾಡಿದ್ದು ಸುಮಾರು 20 ಎಕರೆ ರಾಜಭವನದ ವ್ಯಾಪ್ತಿಯಲ್ಲಿ ಮದ್ಯ-ಮಾಂಸಕ್ಕೆ ಪ್ರವೇಶವಿಲ್ಲ ಎಂಬುದು. ವಿದೇಶಿ ಗಣ್ಯರೇ ಬರಲಿ, ಯಾರೇ ಬರಲಿ ಎಲ್ಲರಿಗೂ ಮೇಘಾಲಯದ ಊಟ, ಉಪಚಾರ, ಸಾಂಸ್ಕೃತಿಕ ಆತಿಥ್ಯವೇ. ಇಲ್ಲಿ ಶೇ 95ರಷ್ಟು ನೈಸರ್ಗಿಕ ಕೃಷಿ. ರಾಜಕಾರಣದಲ್ಲಿ ನನ್ನ ಬೆನ್ನು ತಟ್ಟಿ ಬೆಳೆಸಿದವರು ಹಲವರು. ನನಗೆ ರೋಲ್ ಮಾಡೆಲ್ ವಾಜಪೇಯಿ ಅವರು. ಆಡಳಿತದಲ್ಲಿ ಬೆನ್ನು ತಟ್ಟಿದವರು ರಾಮಕೃಷ್ಣ ಹೆಗಡೆ, ಕೆ.ಎಚ್.ರಂಗನಾಥ, ಯಡಿಯೂರಪ್ಪ. ಈಗ ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನ ಎಂದು ಸ್ಮರಿಸುವ ವಿಜಯಶಂಕರ್, ನಾನಂತೂ ಪರಿಪೂರ್ಣ, ಪ್ರಜ್ಞಾಪೂರ್ಣ, ಸಂತೃಪ್ತ ವ್ಯಕ್ತಿ ಎನ್ನುತ್ತಾರೆ.
ರಾಜಕೀಯ ಹಿಂದಿನಂತಿಲ್ಲ. ನನ್ನ ಚುನಾವಣೆಗಳಲ್ಲಿ ಪಕ್ಷ ಮತ್ತು ಜನ ಕೊಟ್ಟ ಹಣದಲ್ಲಿಯೇ ಇಪ್ಪತೈದು ಸಾವಿರ ರೂಪಾಯಿಗಳನ್ನು ಉಳಿಸಿ ಮರಳಿಸಿದವ ನಾನು. ಈಗ ಚುನಾವಣಾ ರಾಜಕಾರಣ ಮೊದಲಿನಂತಿಲ್ಲ. ನಮ್ಮಂಥವರಿಂದ ಹೇಗೆ ಸಾಧ್ಯ? ಎಂದು ಮನಬಿಚ್ಚಿ ಹೇಳುವ ಈ ರಾಜಕೀಯ ಸಂತ ಮೇಘಾಲಯದಲ್ಲಿ ಕರ್ನಾಟಕದ ಹೆಸರಿಗೆ ಗೌರವ ತಂದಿರುವ ಅಪರೂಪದ ನಡಾವಳಿಯವರು.
ಮೇಘಾಲಯದ ದಂಡಕಾರಣ್ಯದ ಮಧ್ಯೆ ಇನ್ನೋರ್ವ ಸಂತ ಇದ್ದಾರೆ. ಅವರೇ ಹ್ಯಾಲಿ ವಾರ್. ಸುಮಾರು 45 ವರ್ಷಗಳ ಕಾಲ ಮರಗಳ ಬೇರುಗಳನ್ನು ತಿದ್ದಿ ತೀಡಿ ಹೊರ ಊರಿನ ಸಂಪರ್ಕ ಬೆಳೆಸುವ ಕೊಂಡಿಯಾಗಿ `ಬೇರು ಸೇತುವೆ’ (ರೂಟ್ ಬ್ರಿಡ್ಜ್)ನಿರ್ಮಿಸಿದವರು. ಬುಡಕಟ್ಟು ಸಮುದಾಯದ ಹ್ಯಾಲಿ, ಮೇಘಾಲಯದ ಸೀಜ್ ಗ್ರಾಮದ ಉಮುಕಾ ಎನ್ನುವ ಗುಡ್ಡಪ್ರದೇಶದವರು.
ಹ್ಯಾಲಿ ತನ್ನ ಸಂಬಂಧಿಗಳ ಮನೆಗೆ ಹೋಗಲು ರಸ್ತೆ ಇಲ್ಲದೇ, ಹೊಳೆ ದಾಟಲಾಗದೇ ವ್ಯಾಕುಲನಾಗಿ ಹತ್ತನೇ ವಯಸ್ಸಿಗೇ ಕಂಡುಕೊಂಡಿದ್ದು ಮರದ ಬೇರುಗಳ ಅಪಾರ ಸಾಧ್ಯತೆಗಳನ್ನು! ಪ್ರಕೃತಿಯನ್ನು ಹೇಗೂ ಬಗ್ಗಿಸಬಹುದು. ಅದರ ಸದ್ಬಳಕೆ ಮಾಡಿಕೊಳ್ಳಬಹುದು ಎನ್ನುವುದಕ್ಕೆ ಹ್ಯಾಲಿ ಉದಾಹರಣೆ.
ಹ್ಯಾಲಿ ಮನೆಯಿಂದ ಒಂದು ಕಿಮೀ ದೂರದಲ್ಲಿ ಒಂದು ಕೊರಕಲು ಹಳ್ಳ ಇದೆ. ಅದರಾಚೆ ಅವನ ಬಂಧುಗಳ ಮನೆಯಿದೆ. ಅರಣ್ಯದ ಮಧ್ಯೆಯೇ ಎಲ್ಲರ ಜೀವನ. ಶಾಲೆಗೂ ಹೋಗಲಾಗದ ಹ್ಯಾಲಿ ಈ ಹಳ್ಳದ ಕೊರಕಲಲ್ಲಿ ಹರಿವ ನೀರನ್ನು ದಾಟಲು ಒಂದು ಉಪಾಯ ಹುಡುಕಿದೆ. ಅಲ್ಲಿ ಬೆಳೆದ ಅರಳಿ ಮರದ ಬೇರುಗಳನ್ನೇ ಹೆಣೆದು ತಿದ್ದಿ ತೀಡತೊಡಗಿದ. ಆ ಮರದ ಬೇರು ಬೀಳುಗಳನ್ನು ಎರಡು ದಿಬ್ಬಗಳತ್ತ ಎತ್ತರದಲ್ಲಿ ಬೆಳೆಯುವಂತೆ ಪೋಣಿಸಿದ. ಬೇರು ಬೇಳೆದಂತೆ ಸೆತುವೆ ಗಟ್ಟಿ ಮುಟ್ಟಾಗುತ್ತ ಹೋಗುತ್ತದೆ. ಮರಕ್ಕೂ ಧಕ್ಕೆ ಇಲ್ಲ. ಮರಕ್ಕೂ ಬೇರಿಗೂ ಒಂದು ಕತ್ತಿ ಬಿಡಿ. ಬ್ಲೇಡ್ ಕೂಡ ತಟ್ಟಿಸಿಲ್ಲ. ಸುಮಾರು 25-30 ವರ್ಷಗಳ ತಪಸ್ಸಿನಂತೇ ಇದನ್ನು ಮಾಡಿದ ಪರಿಣಾಮ ಒಂದು ರೂಟ್ ಬ್ರಿಡ್ಜ್ ಸೃಷ್ಟಿಯಾಯಿತು. ಎರಡು ಊರುಗಳ ನಡುವೆ ಸಂಪರ್ಕ ಸಾಧ್ಯವಾಯಿತು.
ಅಷ್ಟಕ್ಕೇ ತೃಪ್ತಿ ಪಡಲಿಲ್ಲ ಹ್ಯಾಲಿ. ಈ ಸೇತುವೆಯೇ ಮೇಲೆ ಇನ್ನೊಂದು ಇಂಥಹುದೇ ಸೇತುವೆ ನಿರ್ಮಿಸತೊಡಗಿದ. ಹಾಗೇ ಪಕ್ಕದಲ್ಲಿಯೂ ಮರಗಳ ಅದೇ ಬೇರನ್ನು ಬಳಸಿ ಡಬಲ್ ಡೆಕ್ಕರ್ ರೀತಿ ಮತ್ತೊಂದು ಸೇತುವೆ ನಿರ್ಮಿಸಿದ. ಬಹುಶಃ ಆತನಲ್ಲಿರುವ ತಾಳ್ಮೆ, ಸಹನೆ ಹಾಗೂ ಪ್ರಕೃತಿಯ ಜೊತೆಗಿನ ಆತನ ಅನುಸಂಧಾನ- ಸಾಮರಸ್ಯ ಮತ್ತು ಪ್ರೀತಿಗಳು ಅನನ್ಯ. ಜೀವಂತ ಬೇರುಗಳ ಸೇತುವೆಯನ್ನೇ ಕಟ್ಟಿದ ಆತನಿಗೆ ತಗುಲಿದ್ದು ಕಾಲು ದಶಕಗಳಿಗೂ ಹೆಚ್ಚು. ಅವನಿಗೆ ಈಗ ಪದ್ಮಶ್ರೀ ಗರಿ. ಅವನಿದ್ದಲ್ಲಿಗೇ ಪದ್ಮಶ್ರೀ ಬಂತು.
ತಜ್ಞರಿಂದ ನಿರ್ಮಿಸುವ ಸೇತುವೆ, ರಸ್ತೆ ನಮಗೆ ಅಗತ್ಯವಿಲ್ಲ. ನಮ್ಮ ಕಾಡು ನಾಶವಾದೀತು. ಕಾಡೇ ನಮಗೆ ಎಲ್ಲವನ್ನೂ ಕೊಟ್ಟಿದೆ. ಅವನ್ನು ನಾವು ಬಳಸಿಕೊಳ್ಳಬೇಕು ಎನ್ನುವ ಹ್ಯಾಲಿ ಹೊಟ್ಟೆ ಬಟ್ಟೆ ಕಟ್ಟಿ ಯಾವ ತಂತ್ರಜ್ಞನಿಗೂ ಕಡಿಮೆ ಇಲ್ಲದಂತೆ ಇಂದು ದೇಶವನ್ನು ತನ್ನೆಡೆಗೆ ತಿರುಗಿಸಿಕೊಂಡಿದ್ದಾನೆ. ಪ್ರಚಾರ, ಆಧುನಿಕತೆಗಳಿಂದ ಮುಕ್ತನಾಗಿ ನಿಸರ್ಗದೊಡನೆ ಬೆರೆತುಹೋಗಿರುವ ಹ್ಯಾಲಿ ನಮ್ಮ ನಡುವಿನ ಪ್ರಕೃತಿಯ ಸಂತ!!

















