ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಸುತ್ತ ಇಂದು ಕಂಡು ಬಂದ ಭಾರೀ ಬಿಗಿ ಬಂದೋಬಸ್ತ್ ನಗರದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ನಗರಸೇವಕರನ್ನು ಹೊರತುಪಡಿಸಿ ಉಳಿದವರಿಗೆ ಪ್ರವೇಶ ನಿರ್ಬಂಧ, ಪಾಲಿಕೆ ಆವರಣದ ಸುತ್ತ ಪೊಲೀಸ್ ಸರ್ಪಗಾವಲು, ಒಳಗೆ ಪ್ರವೇಶದ ಮೇಲೆ ಕಠಿಣ ನಿಯಂತ್ರಣ—ಇದೆಲ್ಲದರ ಹಿಂದೆ ಏನು? ಎಂಬ ಪ್ರಶ್ನೆಗೆ ಸಿಗುತ್ತಿರುವ ಉತ್ತರ ಒಂದೇ: “ಒಂದು ಸಾಲಿನ ಠರಾವಿನ ಭಯ!”
ಕನ್ನಡಪರ ಸಂಘಟನೆಗಳ ಬೇಡಿಕೆ ಅಷ್ಟೇ ಸರಳವಾಗಿದೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ಒಂದು ಸಾಲಿನ ಠರಾವನ್ನು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಬೇಕು. ಈ ಸಂಬಂಧ ಕನ್ನಡ ಸಂಘಟನೆಗಳು ಈ ಹಿಂದೆಯೇ ಮೇಯರ್ ಹಾಗೂ ಉಪಮೇಯರ್ ಅವರಿಗೆ ಮನವಿ ಸಲ್ಲಿಸಿದ್ದವು. ಆದರೆ “ನಂತರ ನೋಡೋಣ”, “ಕಾಲಾವಕಾಶ ಬೇಕು” ಎಂಬ ಧೋರಣೆ ಕನ್ನಡಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ‘ಪಾಲಿಕೆ ಚಲೋ’ ಹಮ್ಮಿಕೊಂಡಿದ್ದು, ಇಂದಿನ ಸಭೆ ಈಗ ಕೇವಲ ಆಡಳಿತಾತ್ಮಕ ಸಭೆಯಾಗಿ ಉಳಿದಿಲ್ಲ; ಅದು ಬೆಳಗಾವಿಯ ಕನ್ನಡ ಸ್ವಾಭಿಮಾನ ಪರೀಕ್ಷೆಯ ವೇದಿಕೆಯಾಗಿ ಮಾರ್ಪಟ್ಟಿದೆ.
ಪಾಲಿಕೆ ಸಭೆಯಲ್ಲಿ “ಬೆಳಗಾವಿ ಕರ್ನಾಟಕದ್ದು” ಎಂಬ ಸ್ಪಷ್ಟ ಠರಾವು ಅಂಗೀಕಾರವಾದರೆ ಕನ್ನಡಿಗರಿಂದ ಜೈಕಾರ. ಆದರೆ ಅದಕ್ಕೆ ಕುಂಟು ನೆಪ, ವಿಳಂಬ ಅಥವಾ ಮೌನದ ರಾಜಕಾರಣ ಮುಂದುವರಿದರೆ ಮೇಯರ್–ಉಪಮೇಯರ್‌ರೇ ನೇರ ಟಾರ್ಗೆಟ್ ಆಗುವ ಸಾಧ್ಯತೆ ಇದೆ. ಏಕೆಂದರೆ, ಈ ವಿಷಯದಲ್ಲಿ ಶಾಸಕರು ಸಂಪೂರ್ಣ ಅಧಿಕಾರವನ್ನು ಮೇಯರ್ ಹಾಗೂ ಉಪಮೇಯರ್ ಅವರಿಗೆ ಬಿಟ್ಟಿದ್ದಾರೆಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಆದರೆ ಪ್ರಮುಖ ಪ್ರಶ್ನೆ ಇಲ್ಲಿದೆ:
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಹೇಳುವ ಒಂದು ಸಾಲಿನ ಠರಾವಿಗೆ ಇಷ್ಟೊಂದು ಬಂದೋಬಸ್ತ್ ಏಕೆ?
ಈ ನಿರ್ಣಯದ ಭಯ ಯಾರಿಗೆ? ಪಾಲಿಕೆ ಸುತ್ತ ಇಷ್ಟು ಭದ್ರತಾ ಕೋಟೆ ಕಟ್ಟಲು ಸೂಚಿಸಿದವರು ಯಾರು? ಎಂಬ ಪ್ರಶ್ನೆ ಈಗ ಕನ್ನಡಿಗರ ಬಾಯಲ್ಲಿ ಕೇಳಿಬರುತ್ತಿದೆ.
ಬೆಳಗಾವಿ ಗಡಿ ಪ್ರಶ್ನೆ ಭಾವನೆಗೆ ಸಂಬಂಧಿಸಿದ ವಿಷಯ. ಇಂತಹ ಸಂದರ್ಭದಲ್ಲಿ ಪಾಲಿಕೆ ನಾಯಕತ್ವ ಸ್ಪಷ್ಟ ನಿಲುವು ತಾಳುತ್ತದೆಯೇ? ಅಥವಾ ಮತ್ತೆ ರಾಜಕೀಯ ಲೆಕ್ಕಾಚಾರದ ಹಿಂದೆ ಅಡಗುತ್ತದೆಯೇ? ಎಂಬುದರ ಮೇಲೆ ಇಂದಿನ ಸಭೆಯ ಗಂಭೀರತೆ ನಿಂತಿದೆ.
ಇಂದು ಪಾಲಿಕೆ ಸಭೆಯಲ್ಲಿ ಒಂದು ಸಾಲಿನ ಠರಾವು ಅಂಗೀಕಾರವಾಗುತ್ತದೆಯೇ ಎಂಬುದಷ್ಟೇ ಪ್ರಶ್ನೆಯಲ್ಲ;
ಬೆಳಗಾವಿಯ ಪಾಲಿಕೆ ಕನ್ನಡಿಗರ ಮನಸ್ಸಿಗೆ ಉತ್ತರ ಕೊಡುತ್ತದೆಯೇ? ಎಂಬುದೇ ನಿಜವಾದ ಪ್ರಶ್ನೆ.




















