ಮುಂಬೈ: ಮಹಾರಾಷ್ಟ್ರದ ನೂತನ ಉಪಮುಖ್ಯಮಂತ್ರಿಯಾಗಿ ಎನ್ಸಿಪಿಯ ಹಿರಿಯ ನಾಯಕಿ ಸುನೇತ್ರಾ ಪವಾರ್ ಅವರು ಮಂಗಳವಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.
ಈ ಮೂಲಕ ಮಹಾರಾಷ್ಟ್ರದ ಇತಿಹಾಸದಲ್ಲಿಯೇ ಮೊದಲ ಮಹಿಳಾ ಉಪಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಇದು ಮಹಾರಾಷ್ಟ್ರ ರಾಜಕೀಯದ ಒಂದು ಐತಿಹಾಸಿಕ ಕ್ಷಣವಾಗಿದೆ.
ಪತಿ ಅಜಿತ್ ಪವಾರ್ ಅವರ ಹಠಾತ್ ನಿಧನದ ನಂತರ ರಾಜ್ಯದ ನಾಯಕತ್ವದ ಜವಾಬ್ದಾರಿ ಹೊತ್ತ ಸುನೇತ್ರಾ ಪವಾರ್ ಅವರಿಗೆ ಅಬಕಾರಿ, ಕ್ರೀಡೆ ಮತ್ತು ಯುವಜನ ಕಲ್ಯಾಣ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿ ಖಾತೆಗಳನ್ನು ನೀಡಲಾಗಿದೆ. ಜತೆಗೆ ಪುಣೆ ಮತ್ತು ಬೀಡ್ ಜಿಲ್ಲೆಗಳ ಉಸ್ತುವಾರಿ ಸಚಿವೆಯಾಗಿದ್ದಾರೆ.
ಇದನ್ನೂ ಓದಿ: ಅಭಿವೃದ್ಧಿಯ ಅರಿವಿಲ್ಲದ ಕಾಂಗ್ರೆಸ್ ನಾಯಕರು – ಶೆಟ್ಟರ್
ಸಚಿವಾಲಯಕ್ಕೆ ಆಗಮಿಸುವ ಮುನ್ನ ಅವರು ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ದಾದರ್‌ನ ಚೈತ್ಯಭೂಮಿಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು.
ಅವರೊಂದಿಗೆ ಹಿರಿಯ ಮಗ ಪಾರ್ಥ್ ಪವಾರ್, ಎನ್‌ಸಿಪಿ ನಾಯಕರಾದ ಪ್ರಫುಲ್ ಪಟೇಲ್, ಸುನಿಲ್ ತಟ್ಟರೆ, ಛಗನ್ ಭುಜಬಲ್ ಮತ್ತು ಧನಂಜಯ್ ಮುಂಡೆ ಇತರರಿದ್ದರು.





















