ಹುಬ್ಬಳ್ಳಿ: ರೈಲ್ವೆ ಇಲಾಖೆಯಲ್ಲಿ ನೇಮಕಾತಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕನ್ನಡ ಭಾಷಿಕರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಭರವಸೆ ನೀಡಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ರೈಲ್ವೆ ಇಲಾಖೆಯ ನೇಮಕಾತಿ ಪ್ರಕ್ರಿಯೆಯಲ್ಲಿ ಎಲ್ಲ ಭಾಷಿಕರಿಗೆ ಸಮಾನ ಅವಕಾಶ ದೊರಕುತ್ತಿರಲಿಲ್ಲ ಎಂದು ಆರೋಪಿಸಿದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ವಿವಿಧ ಭಾಷೆಗಳ ಅಭ್ಯರ್ಥಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಉಡುಪಿ: ಬೈಂದೂರು ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ
“ಈಗಾಗಲೇ ರೈಲ್ವೆ ನೇಮಕಾತಿಯಲ್ಲಿ ಎಲ್ಲ ಭಾಷೆಗಳಿಗೆ ಮಾನ್ಯತೆ ಸಿಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಚಾರಕ್ಕೆ ವಿಶೇಷ ಒತ್ತು ನೀಡುತ್ತಿದ್ದಾರೆ,” ಎಂದು ಸೋಮಣ್ಣ ತಿಳಿಸಿದರು.
ಇದೇ ವೇಳೆ ರೈಲ್ವೆ ಇಲಾಖೆಯಲ್ಲಿ ಪ್ರೋತ್ಸಾಹ, ಪದೋನ್ನತಿ, ವರ್ಗಾವಣೆ ಸೇರಿದಂತೆ ಆಡಳಿತಾತ್ಮಕ ವಿಷಯಗಳಲ್ಲಿಯೂ ಸುಧಾರಣೆಗಳನ್ನು ತರಲು ಚಿಂತನೆ ನಡೆಯುತ್ತಿದೆ ಎಂದು ಅವರು ಹೇಳಿದರು. ಇದರಿಂದ ಉದ್ಯೋಗಿಗಳಿಗೆ ಉತ್ತಮ ಅವಕಾಶಗಳು ದೊರೆಯಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅಭಿಮಾನಿಗಳು ಏನ್ ಆಸೆ ಪಡ್ತಾರೋ ಅದರಲ್ಲಿ ತಪ್ಪಿಲ್ಲ: ಪಕ್ಷದ ತೀರ್ಮಾನವೇ ಅಂತಿಮ
ದೇಶದಲ್ಲಿ ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದ್ದು, ಇತರ ಪ್ರಾದೇಶಿಕ ಭಾಷೆಗಳಿಗೂ ಸಮಾನ ಅವಕಾಶ ನೀಡಬೇಕೆಂಬುದು ಸರ್ಕಾರದ ಆಶಯವಾಗಿದೆ. ಅದರಲ್ಲೂ ಕನ್ನಡ ಭಾಷಿಕರಿಗೆ ನ್ಯಾಯಸಮ್ಮತ ಸ್ಥಾನಮಾನ ಕಲ್ಪಿಸುವುದು ನಮ್ಮ ಉದ್ದೇಶ ಎಂದು ಅವರು ಹೇಳಿದರು.
ಕೇಂದ್ರ ಸಚಿವರ ಈ ಹೇಳಿಕೆ ರಾಜ್ಯದ ಉದ್ಯೋಗಾಕಾಂಕ್ಷಿಗಳಲ್ಲಿ ಆಶಾಭಾವನೆ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಹೆಚ್ಚಿನ ಅವಕಾಶಗಳು ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.
























