ಮಾಲತೇಶ ಹೂಲಿಹಳ್ಳಿ
ಹುಬ್ಬಳ್ಳಿ: ರೈಲ್ವೆ ಹುದ್ದೆಗಳ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶವಿದ್ದರೂ ಸ್ಟೇಷನ್ ಮಾಸ್ಟರ್ ಹುದ್ದೆಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಇಲ್ಲದಾಗಿದೆ. 2012ರಿಂದ ರೈಲ್ವೆ ಇಲಾಖೆಯ ಗ್ರೂಪ್ ಸಿ ಹಾಗೂ ಗ್ರೂಪ್ ಡಿ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಲು ಆದೇಶಿಸಲಾಗಿದೆ. ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆದು ಆಯ್ಕೆಯಾದ ರೈಲ್ವೆ ನೌಕರರಿಗೆ ಈಗ ಇಲಾಖಾವಾರು ಆಂತರಿಕ ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷೆಗೆ ಅವಕಾಶ ನೀಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಈಗಾಗಲೇ ರೈಲ್ವೆ ಮಂತ್ರಿಗಳು ಹಾಗೂ ಕೇಂದ್ರ ಸಂಸದರು ರೈಲ್ವೆ ನೇಮಕಾತಿ ಪರೀಕ್ಷೆಗಳು ಪ್ರಾದೇಶಿಕ ಭಾಷೆಯಲ್ಲಿ ನಡೆಸಬೇಕೆಂದು ಸ್ಪಷ್ಟವಾಗಿ ಆದೇಶ ನೀಡಿದ್ದರು ಕೂಡ ಪರೋಕ್ಷವಾಗಿ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿದ್ದು, ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷಿಕರಿಗೆ ಸಹಾಯವಾಗುವಂತಾಗಿದೆ. ಇದರಿಂದ ಕನ್ನಡಿಗರು ಬಡ್ತಿ ಸಿಗದೇ ವಂಚಿತರಾಗುವಂತಾಗಿದೆ.
ನೈರುತ್ಯ ರೈಲ್ವೆ ಹುಬ್ಬಳ್ಳಿ ವಲಯದಲ್ಲಿ ಇತ್ತೀಚೆಗೆ (31/01/2026 ರಲ್ಲಿ) ಮುಂಬಡ್ತಿ ನೇಮಕಾತಿಗಾಗಿ ಅಧಿಸೂಚನೆ (ಯುಬಿಎಲ್‌ಡಿ /17834/2//ಎಸ್2376/ಎಂ16/ಓ16) ಹೊರಡಿಸಲಾಗಿದೆ. ಸ್ಟೇಷನ್ ಮಾಸ್ಟರ್ ಪರೀಕ್ಷೆಗೆ ಕನ್ನಡ ಭಾಷೆಯನ್ನು ತೆಗೆದುಹಾಕಿ ಕೇವಲ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅಧಿಸೂಚನೆ ಹೊರಡಿಸಿದ್ದಾರೆ. ಒಟ್ಟು 45 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಮಾರ್ಚ್ 2ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆದರೆ ಈ ಆದೇಶದಲ್ಲಿ ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶವಿರುವುದು ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯಕ್ಕೆ ಹಿಡಿದ ಕನ್ನಡಿಯಾಗಿದೆ.
ಇದನ್ನೂ ಓದಿ: ವಿಜಯ್-ರಶ್ಮಿಕಾ ಮದುವೆಗೆ ಹೊಸ ಮುಹೂರ್ತ ಕೊಟ್ಟ ಜ್ಯೋತಿಷಿಗಳು; ದಿನಾಂಕ ಬದಲಿಸಿದ್ದೇಕೆ?
ಕಂಪ್ಯೂಟರ್‌ನಲ್ಲಿ ವ್ಯವಸ್ಥೆ ಇಲ್ಲ ಎಂಬ ಖಾಯಂ ನೆಪ: ರೈಲ್ವೆ ಪರೀಕ್ಷೆಗಳನ್ನು ರೈಲ್ವೆ ಬೋರ್ಡ್ ಗೈಡ್‌ಲೈನ್ಸ್‌ನಂತೆ ಸಿಬಿಟಿ (ಕಂಪ್ಯೂಟರ್ ಬೇಸ್) ಮೂಲಕ ನಡೆಸಲಾಗುತ್ತಿದೆ. ಹೀಗಾಗಿ ಇಲ್ಲಿ ಇಂಗ್ಲಿಷ್ ಮತ್ತು ಹಿಂದಿ ಮಾತ್ರ ಬಳಸಲಾಗುತ್ತಿದೆ. ತಾಂತ್ರಿಕ ಕಾರಣದಿಂದ ಕನ್ನಡದಲ್ಲಿ ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನುವ ಮಾತುಗಳು ಇಲಾಖೆಯಲ್ಲಿ ಕೇಳಿಬರುತ್ತಿವೆ. ಆದರೆ ಇದಕ್ಕೆ ಸರಿಯಾದ ತಂತ್ರಜ್ಞಾನ ಬಳಸಿ ಕನ್ನಡದಲ್ಲೇ ಪರೀಕ್ಷೆ ನಡೆಸಲು ಯಾವ ಪ್ರಯತ್ನವನ್ನೂ ನಡೆಸಿಲ್ಲ ಎಂಬುದು ವಿಷಾದನೀಯ.
ಸೇರಿಸಿದ್ದ ಕನ್ನಡ ಮತ್ತೆ ತೆಗೆದಿದ್ದು ಏಕೆ?, ರೈಲ್ವೆ ಪರೀಕ್ಷಾರ್ಥಿಗಳ ಪ್ರಶ್ನೆ: 2025 ಅಕ್ಟೋಬರ್ 10ರಂದು ಕರೆದಿದ್ದ ಕಂಟ್ರೋಲರ್ ಹುದ್ದೆ ನೇಮಕಾತಿ ಪರೀಕ್ಷೆಯನ್ನು ಮೊದಲು ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ನಡೆಸುತ್ತೇವೆ ಎಂದು ಆದೇಶ ಹೊರಡಿಸಲಾಗಿತ್ತು. ಆದರೆ ಜ. 19ರಂದು ಕನ್ನಡವನ್ನು ತೆಗೆದು ಹಾಕಲಾಗಿದೆ. ಆರ್‌ಆರ್‌ಸಿ ಮತ್ತು ಆರ್‌ಆರ್‌ಬಿಯಲ್ಲಿ ಕನ್ನಡಕ್ಕೆ ಅವಕಾಶ ಕೊಟ್ಟು, ಬಡ್ತಿ ಹುದ್ದೆಗಳಿಗೆ ನಡೆಯುವ ಪರೀಕ್ಷೆಯಲ್ಲಿ ಕನ್ನಡ ತೆಗೆಯುತ್ತಿರುವುದು ಅನ್ಯಾಯ ಎಂಬುದು ಕನ್ನಡ ರೈಲ್ವೆ ನೌಕರರ ಅಳಲಾಗಿದೆ. ಹಿಂದೆ ಪರೀಕ್ಷೆಯಲ್ಲಿ ಸೇರಿಸಿದ್ದ ಕನ್ನಡ ಭಾಷೆಯನ್ನು ಮತ್ತೆ ತೆಗೆದು ಹಾಕಿದ್ದು ಯಾಕೆ ಎಂದೂ ಅವರು ಪ್ರಶ್ನಿಸುತ್ತಿದ್ದಾರೆ.























