ಚಿಕ್ಕೋಡಿ: ಅಧಿಕಾರ ಶಾಶ್ವತವಲ್ಲ, ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗಲೂ ಅವರ ಪರವಾಗಿ ಇದ್ದೆ, ಅಧಿಕಾರ ಇಲ್ಲದಿದ್ದಾಗಲೂ ಅವರ ಪರವಾಗಿಯೇ ಇರುತ್ತೇನೆ. ನಮ್ಮ ನಡುವೆ ಯಾವುದೇ ಮುನಿಸಿಲ್ಲ ಎಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಸ್ಪಷ್ಟಪಡಿಸಿದರು.
ಚಿಕ್ಕೋಡಿಯಲ್ಲಿ ಮಾತನಾಡಿದ ಅವರು, ನಾನು ನಗುತ್ತಲೇ ಇದ್ದೇನೆ, ಖುಷಿಯಾಗಿಯೂ ಇದ್ದೇನೆ. ಯಾರಿಗೂ ಅಧಿಕಾರ ಶಾಶ್ವತವಲ್ಲ. ಅಧಿಕಾರ ಇದ್ದಾಗ ಮಾತ್ರ ಬೆಂಬಲಿಸುವುದಲ್ಲ, ಅಧಿಕಾರ ಇಲ್ಲದಿದ್ದಾಗಲೂ ಅವರ ಪರವಾಗಿ ನಿಲ್ಲಬೇಕು ಎಂದರು.
ಆಶಾ ಕಾರ್ಯಕರ್ತೆಯರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆಶಾ ಕಾರ್ಯಕರ್ತೆಯರು ಸರ್ಕಾರದ ಮೇಲೆ ಭರವಸೆ ಇಡಬೇಕು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಭರವಸೆಯನ್ನು ಈಡೇರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರ ಮರುವಿಂಗಡಣೆ, ಮಹಿಳಾ ಮೀಸಲಾತಿ ವಿಚಾರ: ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಕುರಿತು ಮಾತನಾಡಿದ ಅವರು, ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಯ ಆಧಾರದಲ್ಲಿ ಕ್ಷೇತ್ರಗಳ ಮರುವಿಂಗಡಣೆ ಮಾಡಬಹುದು. ಜನಗಣತಿಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದು ಹೇಳಿದರು.
ದಕ್ಷಿಣ ಭಾರತದಲ್ಲಿ ಕುಟುಂಬ ಯೋಜನೆ ಕಾರ್ಯಕ್ರಮ ಯಶಸ್ವಿಯಾಗಿ ಜಾರಿಯಾಗಿದ್ದು, ಜನಸಂಖ್ಯೆ ಹೆಚ್ಚಳವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲಾಗಿದೆ. ಉತ್ತರ ಭಾರತದಲ್ಲಿಯೂ ಕುಟುಂಬ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳ್ಳಬೇಕು. ಕ್ಷೇತ್ರ ಮರುವಿಂಗಡಣೆ ವೇಳೆ ಉತ್ತರ ಮತ್ತು ದಕ್ಷಿಣ ಭಾರತಕ್ಕೆ ಯಾವುದೇ ಅನ್ಯಾಯವಾಗಬಾರದು. ಜನಸಂಖ್ಯೆಗೆ ಅನುಗುಣವಾಗಿ ದಕ್ಷಿಣ ಭಾರತಕ್ಕೆ ಪ್ರಾತಿನಿಧ್ಯ ಸಿಗಬೇಕು ಎಂದು ಪ್ರತಿಪಾದಿಸಿದರು.
ಮಹಿಳಾ ಮೀಸಲಾತಿ ಹೊಸ ವಿಚಾರವೇನಲ್ಲ. ಈ ಹಿಂದೆಯೇ ಕಾಂಗ್ರೆಸ್ ಸರ್ಕಾರ ಮಹಿಳಾ ಮೀಸಲಾತಿ ಪರವಾಗಿ ಕ್ರಮ ಕೈಗೊಂಡಿತ್ತು. ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿಯನ್ನು ಬೆಂಬಲಿಸುತ್ತದೆ ಎಂದರು.
ಸಿಜೆಐ ಗವಾಯಿ ಪತ್ರಕ್ಕೆ ಸ್ವಾಗತ: ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಪತ್ರದ ಕುರಿತು ಪ್ರತಿಕ್ರಿಯಿಸಿದ ಮಹದೇವಪ್ಪ, ಅವರ ಪತ್ರವನ್ನು ಸ್ವಾಗತಿಸುತ್ತೇನೆ ಎಂದರು.
ಸ್ವಾತಂತ್ರ್ಯ ಮತ್ತು ಸಮಾನತೆಯ ತಳಹದಿಯ ಮೇಲೆ ಪ್ರಜಾಪ್ರಭುತ್ವ ನಿಂತಿದೆ. ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆಯಾದರೂ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯ ಇನ್ನೂ ಸಂಪೂರ್ಣವಾಗಿ ದೊರೆತಿಲ್ಲ. ಎಲ್ಲ ವರ್ಗದ ಜನರಿಗೂ ಸಮಾನತೆ ಸಿಗಬೇಕು. ಸಮಾಜದ ಎಲ್ಲ ವರ್ಗಗಳಿಗೂ ನಿರ್ದಿಷ್ಟ ಪ್ರಮಾಣದ ಪ್ರಾತಿನಿಧ್ಯ ದೊರೆಯಬೇಕು. ಈ ಆಶಯದ ಕಾರಣಕ್ಕಾಗಿಯೇ ನಾವು ಸಂವಿಧಾನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತೇವೆ ಎಂದು ಹೇಳಿದರು.






















