SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಆಸ್ತಿ ಕಲಹಕ್ಕೆ ರಕ್ತಪಾತ: ಅತ್ತೆ, ಅಳಿಯನ ಬರ್ಬರ ಕೊಲೆ

ಆಸ್ತಿ ಕಲಹಕ್ಕೆ ರಕ್ತಪಾತ: ಅತ್ತೆ, ಅಳಿಯನ ಬರ್ಬರ ಕೊಲೆ

0
4

ಬೆಳಗಾವಿ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆದ ಕಲಹ ವಿಕೋಪಕ್ಕೆ ತಿರುಗಿ ಸಂಬಂಧದಲ್ಲಿ ಅತ್ತೆ, ಅಳಿಯನಾಗಿರುವ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಯರಗಟ್ಟಿ ತಾಲೂಕಿನ ಜೀವಾಪೂರ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.

ಜೀವಾಪುರ ಗ್ರಾಮದ ರಮೇಶ ಹಣಮಂತ ನಾಯ್ಕರ (29) ಹಾಗೂ ಬಂಡಾರಹಳ್ಳಿ ಗ್ರಾಮದ ಬಸವ್ವ ಭೀಮಶೆಪ್ಪ ನಾಯ್ಕರ (60) ಕೊಲೆಯಾದ ದುರ್ದೈವಿಗಳು.

ಕುಟುಂಬದ ನಡುವೆ ಸುಮಾರು 20 ಎಕರೆ ಆಸ್ತಿ ವಿಚಾರವಾಗಿ ಮೊದಲಿನಿಂದಲೂ ವಿವಾದವಿತ್ತು. ಗುರುವಾರ ರಾತ್ರಿ ಇದೇ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದು ಇಬ್ಬರ ಹತ್ಯೆಯಲ್ಲಿ ಅಂತ್ಯಗೊಂಡಿರುವ ಶಂಕೆ ವ್ಯಕ್ತವಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ರಾಮದುರ್ಗ ಡಿಎಸ್ಪಿ ಚಿದಂಬರ ವಿ.ಎಂ., ಸಿಪಿಐ ಐ.ಎಂ. ಮಠಪತಿ ಹಾಗೂ ಮುರಗೋಡ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಕೆ. ರಾಮರಾಜನ್, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.