SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಬೇಡ್ತಿ–ವರದಾ ನದಿ ಜೋಡಣೆ ಯೋಜನೆಗೆ ಸಂತರ ವಿರೋಧ

ಬೇಡ್ತಿ–ವರದಾ ನದಿ ಜೋಡಣೆ ಯೋಜನೆಗೆ ಸಂತರ ವಿರೋಧ

0
29

ಶಿರಸಿ: ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ಅವೈಜ್ಞಾನಿಕವಾಗಿದ್ದು, ಕಾರ್ಯಸಾಧ್ಯತಾ ವರದಿಯೂ ದೋಷಪೂರಿತವಾಗಿದೆ. ಈ ಯೋಜನೆಯಿಂದ ಪಶ್ಚಿಮ ಘಟ್ಟದ ಪರಿಸರಕ್ಕೆ ಹಾನಿಯಾಗಲಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು.

ಶಿರಸಿ ತಾಲೂಕಿನ ಶಾಲ್ಮಲಾ ನದಿ ತೀರದ ಸ್ವರ್ಣವಲ್ಲೀ ಯಾತ್ರಿ ನಿವಾಸದಲ್ಲಿ ಗುರುವಾರ ನಡೆದ ಸಂತರ ಮಹಾಸಭೆಯಲ್ಲಿ ಯೋಜನೆಯ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಯಿತು.

ಮಾತನಾಡಿದ ಸ್ವರ್ಣವಲ್ಲೀ ಶ್ರೀಗಳು, ಮಲೆನಾಡು ಮತ್ತು ಬಯಲುಸೀಮೆ ಎರಡೂ ಭಾಗಗಳ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ, ಪಶ್ಚಿಮ ಘಟ್ಟವನ್ನು ಧ್ವಂಸಗೊಳಿಸುವ ಯೋಜನೆಗಳು ಬೇಡ. ಎತ್ತಿನಹೊಳೆ ಯೋಜನೆಯ ದುರಂತ ಮರುಕಳಿಸಬಾರದು ಎಂದರು.

ಸೋಂದಾ ಜೈನಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ, ಬಾಳೆಹೊಸೂರು ದಿಂಗಾಲೇಶ್ವರ ಮಹಾಸ್ವಾಮಿಗಳು ಕೂಡ ಯೋಜನೆ ಕುರಿತು ಆತಂಕ ವ್ಯಕ್ತಪಡಿಸಿದರು. ವಿಜ್ಞಾನಿ ಡಾ. ಕೇಶವ ಕೊರ್ಸೆ, ನೀರಾವರಿ ತಜ್ಞ ಡಾ. ವಿಘ್ನೇಶ್ವರ ಹೆಗಡೆ, ಪರಿಸರ ತಜ್ಞ ಶಿವಾನಂದ ಕಳವೆ ಸೇರಿದಂತೆ ತಜ್ಞರು ಯೋಜನೆಯಿಂದ ಆಗಬಹುದಾದ ಪರಿಸರ ಹಾನಿಯನ್ನು ಅಂಕಿ-ಅಂಶಗಳ ಸಹಿತ ವಿವರಿಸಿದರು.

ಸಭೆಯಲ್ಲಿ ವಿವಿಧ ಮಠಗಳ 20ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡಿದ್ದರು. ಬಳಿಕ ಹಾವೇರಿ ಜಿಲ್ಲೆಯ ಮಠಾಧೀಶರು ಯಲ್ಲಾಪುರದ ಬೇಡ್ತಿ ಸೇತುವೆ ಬಳಿ ನದಿ ತೀರಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಸ್ಥರು ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.