SK Home Ad
Home ಸುದ್ದಿ ರಾಜ್ಯ ಗ್ಯಾಸ್ ಸಿಲಿಂಡರ್ ಮಾದರಿಯಲ್ಲಿ ಸಕ್ಕರೆಗೂ ಎರಡು ದರ ನಿಗದಿಯಾಗಲಿ

ಗ್ಯಾಸ್ ಸಿಲಿಂಡರ್ ಮಾದರಿಯಲ್ಲಿ ಸಕ್ಕರೆಗೂ ಎರಡು ದರ ನಿಗದಿಯಾಗಲಿ

0
3

ಮಂಗಳೂರು: ಕಬ್ಬು, ಸಕ್ಕರೆ ಮತ್ತು ಎಥೆನಾಲ್‌ಗೆ ಕೇಂದ್ರ ಸರ್ಕಾರ ಸೂಕ್ತ ದರ ನಿಗದಿಪಡಿಸುವ ಮೂಲಕ ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ನಡುವಿನ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಕಬ್ಬಿನ ದರ ನಿಗದಿ ವಿಚಾರವಾಗಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಸಂಘರ್ಷ ನಡೆಯುತ್ತಿದೆ. ಗ್ಯಾಸ್ ಸಿಲಿಂಡರ್‌ಗೆ ಗೃಹಬಳಕೆ ಮತ್ತು ವಾಣಿಜ್ಯ ಬಳಕೆ ಎಂದು ಪ್ರತ್ಯೇಕ ದರ ನಿಗದಿಪಡಿಸಿರುವಂತೆ ಸಕ್ಕರೆಗೂ ಎರಡು ರೀತಿಯ ದರ ನಿಗದಿಪಡಿಸಬೇಕು ಎಂದರು.

ಕಬ್ಬಿಗೆ ಸೂಕ್ತ ದರ ನಿಗದಿ, ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಣೆ ಹಾಗೂ ಎಥೆನಾಲ್‌ಗೆ ನ್ಯಾಯಯುತ ದರ ನಿಗದಿ ರೈತರ ಪ್ರಮುಖ ಬೇಡಿಕೆಗಳಾಗಿವೆ. ಅಲ್ಲದೆ, ಉತ್ಪಾದನೆಯಾಗುವ ಶೇ. 100ರಷ್ಟು ಎಥೆನಾಲ್‌ ಅನ್ನು ಸರ್ಕಾರವೇ ಖರೀದಿಸಬೇಕು ಎಂಬ ಬೇಡಿಕೆಯನ್ನೂ ರೈತರು ಮುಂದಿಟ್ಟಿದ್ದಾರೆ ಎಂದು ತಿಳಿಸಿದರು.

ಇತ್ತೀಚೆಗೆ ಬೆಳಗಾವಿಯಲ್ಲಿ ರೈತ ಮುಖಂಡರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ಸಭೆ ನಡೆದಿದ್ದು, ಮೊದಲ ಕಂತಾಗಿ ಪ್ರತಿ ಟನ್ ಕಬ್ಬಿಗೆ 3,300 ರೂ. ಘೋಷಿಸಲಾಗಿತ್ತು. ಆದರೆ, ಇದೀಗ ಹಲವು ಕಾರ್ಖಾನೆಗಳು 3,800 ರೂ. ದರ ಘೋಷಿಸಿವೆ. ಮಹಾರಾಷ್ಟ್ರದ ಹಲವು ಭಾಗಗಳಲ್ಲಿ 4,000 ರೂ. ದರವನ್ನೂ ಪ್ರಕಟಿಸಲಾಗಿದೆ. ಕೆಲವು ಕಡೆ ಈಗಾಗಲೇ ಸಕ್ಕರೆ ಕಾರ್ಖಾನೆಗಳು ಕಾರ್ಯಾರಂಭಿಸಿವೆ ಎಂದರು.

ಕೇಂದ್ರ ಸರ್ಕಾರ ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಅಗತ್ಯವಿದೆ. ರಾಜ್ಯದವರೇ ಆದ ಪ್ರಹ್ಲಾದ್ ಜೋಶಿ ಅವರು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿರುವುದರಿಂದ ಈ ವಿಚಾರ ಅವರ ವ್ಯಾಪ್ತಿಗೆ ಬರುತ್ತದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಅವರು ಸಕ್ಕರೆ ದರ ನಿಗದಿಪಡಿಸಲಿದ್ದಾರೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಲಕ್ಷ್ಮಣ ಸವದಿ ಹೇಳಿದರು.