SK Home Ad
Home ಸುದ್ದಿ ರಾಜ್ಯ ಕಿದ್ವಾಯಿಯಲ್ಲಿ ಮಕ್ಕಳಿಗೆ ಸಿಎಂ ಧೈರ್ಯದ ಮಾತು; ಎಲ್ಲ ಜಿಲ್ಲೆಗಳಲ್ಲೂ ಇನ್ನು ಕ್ಯಾನ್ಸರ್ ಚಿಕಿತ್ಸೆ

ಕಿದ್ವಾಯಿಯಲ್ಲಿ ಮಕ್ಕಳಿಗೆ ಸಿಎಂ ಧೈರ್ಯದ ಮಾತು; ಎಲ್ಲ ಜಿಲ್ಲೆಗಳಲ್ಲೂ ಇನ್ನು ಕ್ಯಾನ್ಸರ್ ಚಿಕಿತ್ಸೆ

0
31

ಬೆಂಗಳೂರು: ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಯಿಂದ ಬಳಲುತ್ತಿರುವ ಪುಟಾಣಿ ಮಕ್ಕಳಿಗೆ ಧೈರ್ಯ ತುಂಬಿ, ಅವರ ಆರೋಗ್ಯ ವಿಚಾರಿಸುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಶನಿವಾರ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಮಕ್ಕಳ ಕ್ಯಾನ್ಸರ್ ವಾರ್ಡ್‌ಗೆ ಭೇಟಿ ನೀಡಿದ ಸಿಎಂ, ಮಕ್ಕಳೊಂದಿಗೆ ಆತ್ಮೀಯವಾಗಿ ಮಾತನಾಡಿ, ಚಾಕೊಲೇಟ್ ಹಾಗೂ ಡ್ರಾಯಿಂಗ್ ಪುಸ್ತಕಗಳನ್ನು ವಿತರಿಸಿದರು. ಮಾಗಡಿಯ ಧನುಷ್, ಹೊಸೂರಿನ ಪಾರ್ಥಸಾರಥಿ ಸೇರಿದಂತೆ ವಿವಿಧ ಭಾಗಗಳಿಂದ ಬಂದಿದ್ದ ಮಕ್ಕಳಿಗೆ ಆತ್ಮವಿಶ್ವಾಸದ ಮಾತುಗಳನ್ನಾಡಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ಮಕ್ಕಳ ಪೋಷಕರೊಂದಿಗೂ ಮಾತನಾಡಿ, ಚಿಕಿತ್ಸೆ ಹಾಗೂ ಆಸ್ಪತ್ರೆಯಲ್ಲಿ ದೊರೆಯುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಿದ್ವಾಯಿ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ 200 ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು. ಚಿಕಿತ್ಸೆಗೆ ಬರುವ ಮಕ್ಕಳೊಂದಿಗೆ ಉಳಿದುಕೊಳ್ಳುವ ತಾಯಂದಿರು ಹಾಗೂ ಕುಟುಂಬ ಸದಸ್ಯರ ಅನುಕೂಲಕ್ಕಾಗಿ 3 ಎಕರೆ ಜಾಗ ಒದಗಿಸುವ ಬೇಡಿಕೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕ್ಯಾನ್ಸರ್ ಚಿಕಿತ್ಸೆಗೆಂದು ಎಲ್ಲರೂ ಬೆಂಗಳೂರಿಗೆ ಬರುವ ಅನಿವಾರ್ಯತೆ ತಪ್ಪಿಸಲು ತುಮಕೂರು, ಮೈಸೂರು, ಬಳ್ಳಾರಿ, ಕಲಬುರಗಿ ಹಾಗೂ ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸಾ ವ್ಯವಸ್ಥೆ ಆರಂಭಿಸಲು ಯೋಜನೆ ರೂಪಿಸಲಾಗಿದೆ. ಕಿದ್ವಾಯಿ ಆಸ್ಪತ್ರೆಯಲ್ಲಿ ಮತ್ತೊಂದು ರೋಬೋಟಿಕ್ ಯಂತ್ರ ಸೇರಿದಂತೆ ಅಗತ್ಯ ವೈದ್ಯಕೀಯ ಉಪಕರಣಗಳ ಖರೀದಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದರು.

ಕಿದ್ವಾಯಿ ಆಸ್ಪತ್ರೆಗೆ ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಹೊರರಾಜ್ಯಗಳಿಂದಲೂ ರೋಗಿಗಳು ಬರುತ್ತಿದ್ದು, ವರ್ಷಕ್ಕೆ ಸುಮಾರು 3.5 ಲಕ್ಷ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿದಿನ ಸರಾಸರಿ ಒಂದು ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಮತ್ತು ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿದ ಸಿಎಂ, ಆಸ್ಪತ್ರೆಯ ಅಭಿವೃದ್ಧಿಗೆ ನೆರವಾಗುತ್ತಿರುವ ಜಿಂದಾಲ್, ಇನ್ಫೋಸಿಸ್ ಸೇರಿದಂತೆ ವಿವಿಧ ದಾನಿಗಳ ಕೊಡುಗೆಯನ್ನು ಸ್ಮರಿಸಿದರು.

ಒಂದು, ಎರಡು ಹಾಗೂ ಐದು ವರ್ಷದ ಮಕ್ಕಳಲ್ಲಿಯೂ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿ. ಇಂತಹ ಮಕ್ಕಳಿಗೆ ಅಗತ್ಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಆದ್ಯತೆ ನೀಡಲಿದೆ. ಮಕ್ಕಳನ್ನು ತಂಬಾಕು ಹಾಗೂ ಮಾದಕ ವಸ್ತುಗಳಿಂದ ದೂರವಿಟ್ಟು, ಮಾದಕ ವಸ್ತು ಮುಕ್ತ ರಾಜ್ಯ ನಿರ್ಮಿಸುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.